ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಇರಾನ್ ಮುಂದಿಟ್ಟ ಶಾಂತಿಯ ಒಪ್ಪಂದ ತಿರಸ್ಕರಿಸಿದ ಟ್ರಂಪ್
- ಟ್ರಂಪ್ ರಿಜೆಕ್ಷನ್ ಬೆನ್ನಲ್ಲೇ ಇತ್ತ ಚಿನ್ನದ ಬೆಲೆ ಕುಸಿತ
ನವದೆಹಲಿ: ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಸದ್ಯ ಯಾವುದೇ ಕಾರಣಕ್ಕೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟು ನಿರ್ಧಾರವೇ ಕಾರಣ. ಇರಾನ್ ಮುಂದಿಟ್ಟ ಶಾಂತಿಯ ಒಪ್ಪಂದವನ್ನು ಟ್ರಂಪ್ ತಿರಸ್ಕರಿಸಿದ ಬೆನ್ನಲ್ಲೇ ಚಿನ್ನದ ಬೆಲೆ ಕೂಡ ಕುಸಿದಿರುವುದು ಗಮನಾರ್ಹ.
ಶಾಂತಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಮೆರಿಕದ ವಾಷಿಂಗ್ಟನ್‌ಗೆ ಟೆಹ್ರಾನ್ ಕಳುಹಿಸಿದ ಒಪ್ಪಂದವನ್ನು ಸದ್ಯ ಟ್ರಂಪ್ ರಿಜೆಕ್ಟ್ ಮಾಡಿದ್ದಾರೆ. ಈ ಮೂಲಕ ನಿಮ್ಮ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಇರಾನ್ಗೆ ರವಾನಿಸಿದ್ದಾರೆ. ಟ್ರಂಪ್ ಕಟು ನಿರ್ಧಾರ ಹೊರಬೀಳುತ್ತಿದ್ದಂತೆ ಸೋಮವಾರ (ಮೇ.11) ರಾಷ್ಟ್ರ ರಾಜಧಾನಿಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 600 ರೂ. ಇಳಿದಿದೆ.
ಈ ನಿಟ್ಟಿನಲ್ಲಿ 10 ಗ್ರಾಂ ಸ್ವರ್ಣದ ಬೆಲೆ ಈಗ 1.55 ಲಕ್ಷ ರೂ.ಗೆ ತಲುಪಿದೆ. ಇನ್ನು ಬೆಳ್ಳಿ ದರದಲ್ಲಿ 3,700 ರೂ. ಅಥವಾ ಶೇ.1.42ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 2,65,000 ರೂ.ಗೆ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ). ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ದರವು ಕೆಜಿಗೆ 2,61,300 ರೂ. ಇತ್ತು. ಆದರಿಂದು, 4,000 ರೂ. ಹೆಚ್ಚಳ ಕಂಡಿರುವುದು ಗಮನಾರ್ಹ.
ಮತ್ತೊಂದೆಡೆ, ಟ್ರಂಪ್ ಇರಾನ್ ಕಳುಹಿಸಿದ ಶಾಂತಿ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ಮಧ್ಯಪ್ರಾಚ್ಯ ಸಂಘರ್ಷ ಇನ್ನೂ ಉದ್ವಿಗ್ನಗೊಳ್ಳುವ ಭೀತಿಯನ್ನು ಹೆಚ್ಚಿಸಿದೆ. ಇದರೊಟ್ಟಿಗೆ ಕಚ್ಚಾ ತೈಲ ದರಗಳನ್ನು ಹೆಚ್ಚಿಸಿರುವುದು ಭಾರತ ಸೇರಿದಂತೆ ಆಯಾ ದೇಶಗಳಲ್ಲಿ ತೀರ ಪರದಾಡುವಂತ ಪರಿಸ್ಥಿತಿಗೆ ಸಿಲುಕಿಸಿದೆ. ಈ ಸ್ಥಿತಿ-ಗತಿಗಳಿಗೆ ತಕ್ಕಂತೆ ಎನ್ನುವಂತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಧನ ಮಿತ ಬಳಕೆ, ವರ್ಕ್ಫ್ರಮ್ ಹೋಮ್, ವರ್ಚ್ಯುವಲ್ ಮೀಟಿಂಗ್, ಸಾರ್ವಜನಿಕ ಸಾರಿಗೆ ಬಸ್, ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ,(ಏಜೆನ್ಸೀಸ್).