- ಭಾರತದ ಶೇ.95 ಭಾಗದಲ್ಲಿ ದಟ್ಟ ಮೋಡಗಳು ಆವರಿಸಿಕೊಂಡಿವೆ
- ಕಪ್ಪು ಮೋಡಗಳ ರಚನೆಯಿಂದ ಅಲ್ಲಲ್ಲಿ ಮಾನ್ಸೂನ್ ಮಳೆ
- ಮೂಕಪ್ರೇಕ್ಷಕನಾದ 'ಇಂಡಿಯನ್ ಓಷನ್ ಡಿಪೋಲ್'
ನವದೆಹಲಿ: ದೇಶಾದ್ಯಂತ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಸುರಿಯಬೇಕಿತ್ತು. ಆದ್ರೆ, ಎಲ್ ನಿನೋ ಎಫೆಕ್ಟ್ನಿಂದ ದೇಶದಲ್ಲಿ ಬರಗಾಲ ಭೀತಿ ಎದುರಾಯಿತು. ಈಗ ಜುಲೈ ಕೊನೆ ವಾರಕ್ಕೆ ಕಾಲಿಟ್ಟಿದ್ದರೂ ವ್ಯಾಪಕ ಮಳೆಯ ಮುನ್ಸೂಚನೆ ಇನ್ನೂ ಸಮೀಪಿಸಿಲ್ಲ. ಆದರೆ, ಹಲವು ಭಾಗಗಳಲ್ಲಿ ಆಕಾಶ ಪೂರ್ತಿಯಾಗಿ ಬಿಳಿ ಬಣ್ಣದ ದಟ್ಟ ಮೋಡಗಳಿಂದ ಸುತ್ತುವರಿದಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಅತ್ಯಂತ ಭೀಕರ ಹಾಗೂ ಶಕ್ತಿಶಾಲಿ ಗಾಡ್ಜಿಲ್ಲಾ ಎಲ್ ನಿನೋ (Godzilla El Nino) ಸಕ್ರಿಯವಾಗಿದ್ದರೂ, ಭಾರತದ ಶೇ.95 ಭಾಗದಲ್ಲಿ ಕಪ್ಪು ಮೋಡಗಳು ಆವರಿಸಿ ಮಳೆಯಾಗುತ್ತಿರುವುದು ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರನ್ನೇ ಸದ್ಯ ಅಚ್ಚರಿಗೆ ದೂಡಿದೆ.
ಸಾಮಾನ್ಯವಾಗಿ 'ಎಲ್ ನಿನೋ' ಪ್ರಭಾವವಿದ್ದರೆ, ಭಾರತದಲ್ಲಿ ಮಾನ್ಸೂನ್ ಕಸಿದುಕೊಂಡು ಭೀಕರ ಬರಗಾಲ ಸೃಷ್ಟಿಯಾಗುತ್ತದೆ. ಆದರೆ, ಇಡೀ ದೇಶವನ್ನು ಮೋಡಗಳು ಕವಿದಿದೆ. ಆದರೆ, ನಿರೀಕ್ಷೆಗೆ ತಕ್ಕಂತೆ ಮಳೆಗಾಲದ ಮಳೆಯಾಗುತ್ತಿಲ್ಲ. ಅಷ್ಟಕ್ಕೂ ಹೀಗೆ ಮುಚ್ಚಿಕೊಳ್ಳಲು ಕಾರಣವೇನು? ಎಲ್ ನಿನೋ ಪ್ರಭಾವದ ನಡುವೆಯೂ ಭಾರತದಲ್ಲಿ ಮಾನ್ಸೂನ್ ಆಕ್ಟೀವ್ ಆಗಿರುವುದರ ಹಿಂದಿರುವ ಅಸಲಿ ಕಾರಣಗಳೇನು ಎಂಬುದನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
1. ‘ಗಾಡ್ಜಿಲ್ಲಾ ಎಲ್ ನಿನೋ’: ಮೋಡ ಕವಿದ ವಾತಾವರಣ?
ಎಲ್ ನಿನೋ ಸಾವಿರಾರು ಕಿಮೀ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸೃಷ್ಟಿಯಾಗುತ್ತದೆ. ಇದು ಗಾಳಿಯ ಚಲನೆಯನ್ನು ಬದಲಾಯಿಸಿ ದಕ್ಷಿಣ ಏಷ್ಯಾದಿಂದ ಮಳೆ ತರುವ ಮಾರುತಗಳನ್ನು ದೂರ ತಳ್ಳುತ್ತದೆ. ಆದರೆ, ಎಲ್ ನಿನೋ ಇಡೀ ಸೀಸನ್ನ ಮೇಲೆ ಪ್ರಭಾವ ಬೀರಬಹುದೇ ಹೊರತು, ದಿನನಿತ್ಯದ ಸ್ಥಳೀಯ ಹವಾಮಾನವನ್ನು ನಿಯಂತ್ರಿಸಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ.
ಪ್ರಸ್ತುತ ಹರಿಯಾಣ, ಈಶಾನ್ಯ ಮಧ್ಯಪ್ರದೇಶ ಮತ್ತು ಬಂಗಾಳ ಕೊಲ್ಲಿಯಿಂದ ಅರೇಬಿಯನ್ ಸಮುದ್ರದವರೆಗೆ ಸಾಂದ್ರತೆಯುಳ್ಳ ಗಾಳಿಯ ಸುಳಿ ಸೃಷ್ಟಿಯಾಗಿದೆ. ಎರಡೂ ಮಹಾಸಾಗರಗಳು ಒಟ್ಟಿಗೆ ಭಾರತಕ್ಕೆ ತೇವಾಂಶವನ್ನು ಪೂರೈಸುತ್ತಿರುವುದರಿಂದ, ದೂರದ ಎಲ್ ನಿನೋಗೆ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ಚಂಡಮಾರುತದ ಮಾದರಿ ಸುಳಿಗಳ ರಚನೆ ಹೇಗೆ?
ಸಮುದ್ರದ ಮೇಲ್ಮೈಯಲ್ಲಿ ಸ್ಥಳೀಯವಾಗಿ ತಾಪಮಾನ ಮತ್ತು ತೇವಾಂಶ ಏರಿದಾಗ ಈ ರೀತಿಯ ಸುಳಿಗಳು (Cyclonic Circulations) ಉಂಟಾಗುತ್ತವೆ. ಎಲ್ ನಿನೋ ಪ್ರಭಾವದಿಂದ ಭಾರತದ ಮೇಲೆ ಗಾಳಿ ಕೆಳಗೆ ಮುಖ ಮಾಡಬೇಕಿತ್ತಾದರೂ, ಪ್ರಸ್ತುತ ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ನೀರು ಅತ್ಯಂತ ಬೆಚ್ಚಗಿದೆ. ಸ್ಥಳೀಯ ವಾತಾವರಣವು ಅನುಕೂಲಕರವಾದ ತಕ್ಷಣವೇ ರಾಜಸ್ಥಾನ, ಬಂಗಾಳ ಕೊಲ್ಲಿಯ ಸುತ್ತಮುತ್ತ ಇಂತಹ ಸಣ್ಣ ಚಂಡಮಾರುತದ ಮಾದರಿಯ ಸುಳಿಗಳು ರೂಪುಗೊಂಡು ದಟ್ಟ ಮೋಡಗಳನ್ನು ಸೃಷ್ಟಿಸುತ್ತವೆ.
ಮಾನ್ಸೂನ್ ಮಳೆ ದಿಢೀರ್ ಚೇತರಿಸಿಕೊಂಡಿದ್ದೇಗೆ?
ಕಳೆದ ಕೆಲವು ದಿನಗಳಿಂದ 'ಮಾನ್ಸೂನ್ ಟ್ರಫ್' ತೀರ ಉತ್ತರ ಭಾಗದಲ್ಲಿತ್ತು. ಆದರೀಗ ಅದು ಮರಳಿ ತನ್ನ ಸಾಂಪ್ರದಾಯಿಕ ಬಯಲು ಸೀಮೆಯ ಸ್ಥಾನಕ್ಕೆ ಬಂದಿದೆ. ಇದರೊಟ್ಟಿಗೆ, ಬಂಗಾಳ ಕೊಲ್ಲಿಯು ಹೊಸ ಚಕ್ರವಾತದ ಸುಳಿಗಳ ಮೂಲಕ ತೇವಾಂಶವನ್ನು ಪಂಪ್ ಮಾಡಲು ಪ್ರಾರಂಭಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿ ಪ್ರಕಾರ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್‌ಗಳಲ್ಲಿ ಒಂದೇ ದಿನದಲ್ಲಿ 12ರಿಂದ 20 ಸೆಂಟಿಮೀಟರ್‌ವರೆಗೆ ಭಾರಿ ಮಳೆ ದಾಖಲಾಗಿದೆ.
'ಇಂಡಿಯನ್ ಓಷನ್ ಡಿಪೋಲ್' (IOD) ಪಾತ್ರವೇನು?
ಇಂಡಿಯನ್ ಓಷನ್ ಡಿಪೋಲ್ ಅನ್ನು 'ಭಾರತದ ಸ್ವಂತ ಎಲ್ ನಿನೋ' ಎಂದು ಕರೆಯಲಾಗಿದೆ. ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ತಾಪಮಾನದ ವ್ಯತ್ಯಾಸವನ್ನು ಇದು ಸೂಚಿಸುತ್ತದೆ. ಐಒಡಿ ಪಾಸಿಟಿವ್ ಇದ್ದಾಗ (Positive IOD) ಭಾರತಕ್ಕೆ ಹೆಚ್ಚಿನ ಮಳೆಯ ಮುನ್ಸೂಚನೆ ಇರುತ್ತದೆ. 1997-98ರಲ್ಲಿ ಭೀಕರ 'ಗಾಡ್ಜಿಲ್ಲಾ ಎಲ್ ನಿನೋ' ಬಂದಾಗ ಭಾರತವನ್ನು ಭೀಕರ ಬರದಿಂದ ರಕ್ಷಿಸಿದ್ದು ಇದೇ IOD. ಆದರೆ, ಈ ವರ್ಷ ಐಒಡಿ ತಟಸ್ಥ ಸ್ಥಿತಿಯಲ್ಲಿದ್ದು, ಅದು ಮಳೆಗೆ ಪೂರಕವಾಗಿಯೂ, ಮಾರಕವಾಗಿಯೂ ಇಲ್ಲದೆ ಓರ್ವ ಮೂಖ ಪ್ರೇಕ್ಷಕನಂತಿದೆ.
ಒಟ್ಟಾರೆಯಾಗಿ, ಎಲ್ ನಿನೋ ಜಾಗತಿಕ ಮಟ್ಟದಲ್ಲಿ ಮಳೆಯನ್ನು ಕುಗ್ಗಿಸಲು ಯತ್ನಿಸುತ್ತಿದ್ದರೂ, ಸ್ಥಳೀಯ ಸಮುದ್ರಗಳ ಬೆಚ್ಚಗಿನ ತಾಪಮಾನ ಮತ್ತು ಚಕ್ರವಾತದ ಸುಳಿಗಳು ಭಾರತದಲ್ಲಿ ಬಿಸಿಲಿನ ವಾತಾವರಣದ ನಡುವೆಯೂ ಅಲ್ಲಲ್ಲಿ ಮಾನ್ಸೂನ್ ಮಳೆ ಸುರಿಯಲು ಅವಕಾಶ ಮಾಡಿಕೊಡುತ್ತಿದೆ,(ಏಜೆನ್ಸೀಸ್).