ಎಲ್ ನಿನೋ ಅಬ್ಬರ: ಸಾಗರದಾಳದಲ್ಲಾಗುವ ಪ್ರತಿ ಬದಲಾವಣೆಯನ್ನು ಭಾರತ ಹೇಗೆ ಪತ್ತೆಹಚ್ಚುತ್ತೆ? ಇಲ್ಲಿದೆ ಅಚ್ಚರಿ ಉತ್ತರ...El Nino
- ಸಾಗರದಾಳದ ಬದಲಾವಣೆ ತಿಳಿಯಲು ಭಾರತದಿಂದ ಹದ್ದಿನ ಕಣ್ಣು
- ಎಲ್ ನಿನೋ ಪ್ರಭಾವ ಎದುರಿಸಲು ಸಜ್ಜಾಯ್ತು ವೀಕ್ಷಣಾ ಜಾಲ
- ಹವಾಮಾನ ವೈಪರೀತ್ಯ ಮುನ್ಸೂಚನೆಗೆ ಅತ್ಯಾಧುನಿಕ ತಂತ್ರಜ್ಞಾನ ನೆರವು
- ಸಾಗರ ಉಷ್ಣ ಅಲೆಗಳ ಪತ್ತೆಗೆ ಉಪಗ್ರಹಗಳ ನಿರಂತರ ಮೇಲ್ವಿಚಾರಣೆ
- ಮೀನುಗಾರಿಕೆ ಹಾಗೂ ಕರಾವಳಿ ರಕ್ಷಣೆಗೆ ಹವಾಮಾನ ಇಲಾಖೆ ಎಚ್ಚರಿಕೆ
ನವದೆಹಲಿ: ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ (El Nino) ಪ್ರಭಾವ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದು, ಈ ವರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತದ ಹವಾಮಾನ, ಮೀನುಗಾರಿಕೆ ಮತ್ತು ಮಳೆಗಾಲದ ಮೇಲೆ ಪ್ರಭಾವ ಬೀರುವ ಸಮುದ್ರಗಳ ಮೇಲೆ ಭಾರತ ತೀವ್ರ ನಿಗಾ ಇರಿಸಿದ್ದು, ಏನೆಲ್ಲ ಬದಲಾವಣೆಗಳಾಗುತ್ತವೆ ಅನ್ನೋದನ್ನು ಜನರಿಗೆ ಮುನ್ನೆಚ್ಚರಿಕೆಯಾಗಿ ತಿಳಿಸುತ್ತಾ ಬರುತ್ತಿದೆ.
ಅಂದಹಾಗೆ, ಈ ಎಲ್ ನಿನೋ ಹವಾಮಾನ ಬದಲಾವಣೆಯು ಸಾಮಾನ್ಯವಾಗಿ ದುರ್ಬಲ ಮುಂಗಾರು ಮಳೆ ಮತ್ತು ಕಾವೇರುವ ಬೇಸಿಗೆಯೊಂದಿಗೆ ನಂಟು ಹೊಂದಿದೆ. ಹೀಗಾಗಿ, ಸಾಗರದಲ್ಲಾಗುವ ಪ್ರತಿಯೊಂದು ಬದಲಾವಣೆಗಳ ಮೇಲೆ ನಿರಂತರವಾಗಿ ಕಣ್ಣಿಡಲು ಉಪಗ್ರಹಗಳು, ತೇಲುವ ಬೋಯ್ಸ್, ಸ್ವಯಂಚಾಲಿತ ಯಂತ್ರಗಳು ಹಾಗೂ ದಿನದ 24 ಗಂಟೆಯೂ ಸಾಗರಗಳನ್ನು ಮೇಲ್ವಿಚಾರಣೆ ಮಾಡುವ ಅತ್ಯಾಧುನಿಕ ಕಂಪ್ಯೂಟರ್ ಮಾದರಿಗಳ ಸಂಕೀರ್ಣ ಜಾಲದ ಅಗತ್ಯವಿದೆ.
ಈ ವಿಚಾರದಲ್ಲಿ ನಮ್ಮ ಭಾರತ ಮುಂಚೂಣಿಯಲ್ಲಿದ್ದು, ತನ್ನ ಸಾಮರ್ಥ್ಯ ಏನೆಂಬುದನ್ನು ಭೂವಿಜ್ಞಾನ ಸಚಿವಾಲಯವು ಇತ್ತೀಚೆಗೆ ಸಂಸತ್ತಿಗೆ ಮಾಹಿತಿ ನೀಡಿದೆ. ಭಾರತದ ಸಾಗರ ವೀಕ್ಷಣಾ ಜಾಲವು ಬದಲಾಗುತ್ತಿರುವ ಸಾಗರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಎಲ್ ನಿನೋದಂತಹ ಹವಾಮಾನ ಘಟನೆಗಳ ಮುನ್ಸೂಚನೆಗಳನ್ನು ಸುಧಾರಿಸಲು ವಿಜ್ಞಾನಿಗಳಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದರ ಕುರಿತು ಭೂವಿಜ್ಞಾನ ಸಚಿವಾಲಯ ತಿಳಿಸಿದೆ.
ನಮ್ಮ ಸಾಗರ ವೀಕ್ಷಣಾ ಜಾಲದಿಂದ ರವಾನೆಯಾಗುವ ದತ್ತಾಂಶವು ಸಾಗರ ಉಷ್ಣ ಅಲೆಗಳು, ಚಂಡಮಾರುತಗಳು, ಸಮುದ್ರದ ಅಲೆಗಳ ಅಬ್ಬರ ಹಾಗೂ ಇತರ ಸಾಗರ ಸಂಬಂಧಿತ ಅಪಾಯಗಳ ಕುರಿತು ಮುನ್ಸೂಚನೆ ನೀಡಲು ಸಹಕಾರಿಯಾಗಿದೆ.
ಭಾರತವು ಸಾಗರಗಳ ಮೇಲೆ ಹೇಗೆ ಕಣ್ಣಿಡುತ್ತದೆ?
ಎಲ್ ನಿನೋ ಎನ್ನುವುದು ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗುವ ಒಂದು ಹವಾಮಾನ ಚಕ್ರವಾಗಿದೆ. ಇದು ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ಭಾರತದ ಮಳೆಗಾಲದ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳನ್ನು ಪತ್ತೆಹಚ್ಚಲು ಭಾರತವು ತನ್ನ ಸಾಗರ ವೀಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದೆ. ಭೂವಿಜ್ಞಾನ ಸಚಿವಾಲಯದ ಪ್ರಕಾರ, ದೇಶವು ಪ್ರಸ್ತುತ 19 ಸಾಗರದಾಳದ ಮೂರಿಂಗ್‌ಗಳನ್ನು (ಅಂದರೆ ಸಮುದ್ರದ ಆಳದಲ್ಲಿ ನಿರಂತರವಾಗಿ ಮಾಹಿತಿ ಕಲೆಹಾಕುವ ಉಪಕರಣಗಳು) ನಿರ್ವಹಿಸುತ್ತಿದೆ. ಇವುಗಳಲ್ಲಿ ಮೂರು ಸಮಭಾಜಕ ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿದ್ದು, ಸಮುದ್ರದ ಪ್ರವಾಹ ಮತ್ತು ಆಳದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ.
ಇವುಗಳನ್ನು ಹೊರತುಪಡಿಸಿ, ವಿಶ್ವದ ಸಾಗರಗಳಲ್ಲಿ ನಿಯೋಜಿಸಲಾಗಿರುವ 12 ಆಳ ಸಮುದ್ರ ಸುನಾಮಿ ತೇಲುವ ಯಂತ್ರಗಳು (Deep Ocean Tsunami Buoys), 17 ಅಲೆಗಳ ತೇಲುವ ಯಂತ್ರಗಳು (wave rider buoys), 36 ಕರಾವಳಿ ಉಬ್ಬರವಿಳಿತ ಮಾಪಕಗಳು (coastal tide gauges), 10 ಹೈ ಫ್ರಿಕ್ವೆನ್ಸಿ (HF) ರೇಡಾರ್‌ಗಳು ಹಾಗೂ 4,300ಕ್ಕೂ ಹೆಚ್ಚು ಆರ್ಗೋ ಪ್ರೊಫೈಲಿಂಗ್ ಫ್ಲೋಟ್‌ಗಳ (Argo profiling floats) ನೆರವನ್ನು ನಮ್ಮ ಸಾಗರ ವೀಕ್ಷಣಾ ಜಾಲವು ಪಡೆಯುತ್ತದೆ.
ಈ ಎಲ್ಲಾ ವೀಕ್ಷಣೆಗಳನ್ನು ಉಪಗ್ರಹ ದತ್ತಾಂಶ, ಸಂಶೋಧನಾ ನೌಕೆಗಳ ಮಾಪನಗಳು ಮತ್ತು ಜಾಗತಿಕ ಮಾಹಿತಿ ಮೂಲಗಳೊಂದಿಗೆ ಜೋಡಿಸಲಾಗುತ್ತದೆ. ನಂತರ ಇವುಗಳನ್ನು ಅತ್ಯಾಧುನಿಕ ಸಾಗರ-ವಾತವರಣ ಮಾದರಿಗಳಿಗೆ ಒಳಪಡಿಸಲಾಗುತ್ತಿದ್ದು, ಇದು ವಿಜ್ಞಾನಿಗಳಿಗೆ ಎಲ್ ನಿನೋದ ಬೆಳವಣಿಗೆಯನ್ನು ಗಮನಿಸಲು ಮತ್ತು ಭಾರತದ ಹವಾಮಾನದ ಮೇಲೆ ಅದು ಬೀರಬಹುದಾದ ಸಂಭಾವ್ಯ ಪರಿಣಾಮಗಳನ್ನು ಅಂದಾಜಿಸಲು ಸಹಾಯ ಮಾಡುತ್ತದೆ.
ಮುನ್ಸೂಚನೆ, ಉತ್ತಮ ಸಿದ್ಧತೆ
ಈ ಬಲಗೊಂಡ ವೀಕ್ಷಣಾ ಜಾಲವು ಕೇವಲ ಹವಾಮಾನ ಮೇಲ್ವಿಚಾರಣೆಗೆ ಮಾತ್ರ ಸೀಮಿತವಾಗಿಲ್ಲ, ಸಾಗರ ಸ್ಥಿತಿ, ಸಾಗರ ಪ್ರವಾಹಗಳು, ಸಾಗರ ಉಷ್ಣ ಅಲೆಗಳು ಮತ್ತು ಕರಾವಳಿ ಪರಿಸ್ಥಿತಿಗಳ ಬಗ್ಗೆ ನಿಖರವಾದ ಮುನ್ಸೂಚನೆಗಳನ್ನು ನೀಡುವ ಕಾರ್ಯಾಚರಣಾ ಮುನ್ಸೂಚನಾ ವ್ಯವಸ್ಥೆಗಳಲ್ಲಿ ಈಗ ನೈಜ-ಸಮಯದ (real-time) ಸಾಗರ ಅವಲೋಕನಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಸೇವೆಗಳು ಮೀನುಗಾರರು, ಹಡಗು ಉದ್ಯಮ, ಕಡಲಾಚೆಯ ಕಾರ್ಯಾಚರಣೆಗಳು, ವಿಪತ್ತು ನಿರ್ವಹಣಾ ಸಂಸ್ಥೆಗಳು ಮತ್ತು ಕರಾವಳಿ ಸಮುದಾಯಗಳಿಗೆ ಹೆಚ್ಚಿನ ನೆರವು ನೀಡುತ್ತವೆ.
ಜಾಗತಿಕ ಸಾಗರ ವೀಕ್ಷಣಾ ವ್ಯವಸ್ಥೆ (GOOS) ಮತ್ತು ಹಿಂದೂ ಮಹಾಸಾಗರ ವೀಕ್ಷಣಾ ವ್ಯವಸ್ಥೆಯಂತಹ (IndOOS) ಅಂತಾರಾಷ್ಟ್ರೀಯ ಕಾರ್ಯಕ್ರಮಗಳೊಂದಿಗೆ ಭಾರತದ ಸಾಗರ ಅವಲೋಕನಗಳನ್ನು ಸಂಯೋಜಿಸಲಾಗಿದೆ. ಇದು ದೇಶೀಯ ವೀಕ್ಷಣೆಗಳು ಜಾಗತಿಕ ಹವಾಮಾನ ಮೇಲ್ವಿಚಾರಣೆಗೆ ಕೊಡುಗೆ ನೀಡುವುದನ್ನು ಖಚಿತಪಡಿಸುವುದರ ಜೊತೆಗೆ, ಅಂತಾರಾಷ್ಟ್ರೀಯ ದತ್ತಾಂಶದ ಪ್ರಯೋಜನವನ್ನೂ ಪಡೆಯಲು ಸಹಾಯ ಮಾಡುತ್ತದೆ.
ಅಂದಾಹಾಗೆ, ಎಲ್ ನಿನೋ ವಿದ್ಯಮಾನವನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ಭಾರತದ ವಿಸ್ತರಿಸುತ್ತಿರುವ ಉಪಕರಣಗಳು ಮತ್ತು ಮುನ್ಸೂಚನಾ ವ್ಯವಸ್ಥೆಗಳ ಜಾಲವು ಬದಲಾವಣೆಗಳನ್ನು ಮುಂಚಿತವಾಗಿ ಪತ್ತೆಹಚ್ಚಲು, ಮುನ್ಸೂಚನೆಗಳ ನಿಖರತೆಯನ್ನು ಸುಧಾರಿಸಲು ಮತ್ತು ಸರ್ಕಾರದವರು, ರೈತರು ಹಾಗೂ ಕರಾವಳಿ ಸಮುದಾಯಗಳಿಗೆ ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧತೆ ನಡೆಸಲು ಅಮೂಲ್ಯವಾದ ಸಮಯವನ್ನು ಒದಗಿಸುತ್ತಿದೆ, (ಏಜೆನ್ಸೀಸ್).