ವಯನಾಡು: ಕೇರಳದ ರಾಜಕಾರಣ ದಶಕಗಳಿಂದಲೂ ಎರಡು ಬಲಿಷ್ಠ ಮೈತ್ರಿಕೂಟಗಳ ನಡುವಿನ ಜುಗಲ್ಬಂದಿಗೆ ಸಾಕ್ಷಿಯಾಗುತ್ತ ಬಂದಿದೆ. ಒಂದು ಕಡೆ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್), ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್). ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುವ ಸಂಪ್ರದಾಯವನ್ನು 2021ರಲ್ಲಿ ಮುರಿದ ಪಿಣರಾಯಿ ವಿಜಯನ್ ಸರ್ಕಾರ, ಈಗ ‘ಹ್ಯಾಟ್ರಿಕ್’ ಗೆಲುವಿನ ಕನಸು ಕಾಣುತ್ತಿದೆ.
ಆದರೆ, ಈ ಬಾರಿಯ ಚುನಾವಣೆ ಕೇವಲ ಹಳೆಯ ಮೈತ್ರಿಗಳ ಆಟವಲ್ಲ. ಬದಲಾದ ಸಾಮಾಜಿಕ ಹಿನ್ನೆಲೆ, ಮತದಾರರ ಹೊಸ ಆಲೋಚನೆ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಸೃಷ್ಟಿಸಿರುವ ತ್ರಿಕೋನ ಸ್ಪರ್ಧೆಯ ರೋಚಕ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ. ಸೈದ್ಧಾಂತಿಕ ಬದ್ಧತೆ ಮತ್ತು ಪ್ರಾಯೋಗಿಕ ರಾಜಕೀಯದ ಸಂಘರ್ಷದ ನಡುವೆ ಕೇರಳದ ಅಧಿಕಾರ ಚುಕ್ಕಾಣಿ ಯಾರ ಕೈಗೆ ಸಿಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ದೇವರನಾಡು ಎಂದೇ ಕರೆಸಿಕೊಳ್ಳುವ ಕೇರಳದ ರಾಜಕೀಯ ಇತಿಹಾಸ ದೇಶದ ಇತರ ರಾಜ್ಯಗಳಿಗಿಂತ ಭಿನ್ನ. ಅಲ್ಲಿನ ಮತದಾರರ ಪೈಕಿ ಹೆಚ್ಚಿನವರು ಸುಶಿಕ್ಷಿತರು ಮತ್ತು ಸೈದ್ಧಾಂತಿಕವಾಗಿ ಪ್ರಬುದ್ಧರು. ದಶಕಗಳ ಕಾಲ ಎಡ ಮತ್ತು ಮಧ್ಯ ಪಂಥಗಳ ನಡುವೆ ಕಾಲಕಾಲಕ್ಕೆ ಸಮಾನವಾಗಿ ಹಂಚಿಹೋಗುತ್ತಿದ್ದ ಅಧಿಕಾರ, ಈಗ ಹೊಸ ತಿರುವು ಪಡೆಯುತ್ತಿದೆ. ಆರ್ಥಿಕ ಬಿಕ್ಕಟ್ಟು, ಜನಸಂಖ್ಯಾ ಸ್ವರೂಪದಲ್ಲಿನ ಬದಲಾವಣೆ ಮತ್ತು ಧಾರ್ವಿುಕ ಅಲ್ಪಸಂಖ್ಯಾತರ ಮತಗಳ ಧ್ರುವೀಕರಣ ಈ ಬಾರಿ ಚುನಾವಣೆ ಫಲಿತಾಂಶವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.
ಕೇರಳದಲ್ಲಿ ಗೆಲುವು ಎನ್ನುವುದು ಕೇವಲ ಜನಪ್ರಿಯತೆಯ ಮೇಲೆ ನಿಂತಿಲ್ಲ, ಅದು ಮೈತ್ರಿಕೂಟದೊಳಗಿನ ಪಕ್ಷಗಳ ನಡುವಿನ ‘ಕೆಮಿಸ್ಟ್ರಿ’ ಮತ್ತು ಮತಗಳ ‘ಮ್ಯಾಥಮೆಟಿಕ್ಸ್’ ಮೇಲೆ ಅವಲಂಬಿತವಾಗಿದೆ. ಎಲ್ಡಿಎಫ್ಗೆ ಸಂಘಟನಾ ಶಕ್ತಿಯ ಬಲವಿದೆ. ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಡರಂಗ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಜನಕಲ್ಯಾಣ ಯೋಜನೆಗಳು ಮತ್ತು ಕೇಡರ್ ಆಧಾರಿತ ಸಂಘಟನೆ ಇವರ ಶಕ್ತಿ. ಆದರೆ, ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಮತ್ತು ಆರ್ಥಿಕ ನಿರ್ವಹಣೆಯ ವೈಫಲ್ಯ ಇವರಿಗೆ ದೊಡ್ಡ ಸವಾಲಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ ಅಧಿಕಾರ ಮರಳಿ ಪಡೆಯುವ ಹಂಬಲ.
ಈ ಕಾರಣಕ್ಕೆ ಅಲ್ಪಸಂಖ್ಯಾತರ ಬೆಂಬಲ ಬಹಳ ಮುಖ್ಯ. ಲೋಕಸಭೆ ಚುನಾವಣೆಯಲ್ಲಿ ತೋರಿದ ಉತ್ತಮ ಪ್ರದರ್ಶನವನ್ನು ವಿಧಾನಸಭೆಯಲ್ಲೂ ಮುಂದುವರಿಸುವ ಉದ್ದೇಶದಿಂದ ರಾಹುಲ್ ಗಾಂಧಿ ಫ್ಯಾಕ್ಟರ್ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಮತ್ತೊಂದೆಡೆ, ಎನ್ಡಿಎ ಇಲ್ಲಿ ಮೂರನೇ ಶಕ್ತಿಯಂತೆ ಉದಯವಾಗುತ್ತಿದೆ. ಬಿಜೆಪಿ ಈಗ ಕೇರಳದಲ್ಲಿ ಕೇವಲ ಹೆಸರಿಗಷ್ಟೇ ಇಲ್ಲ. ತನ್ನ ಮತಪ್ರಮಾಣವನ್ನು ಸ್ಥಿರವಾಗಿ ಹೆಚ್ಚಿಸಿಕೊಳ್ಳುತ್ತ, ನಿರ್ಣಾಯಕ ಕ್ಷೇತ್ರಗಳಲ್ಲಿ ಎರಡೂ ಮೈತ್ರಿಕೂಟಗಳಿಗೆ ನಡುಕ ಹುಟ್ಟಿಸುತ್ತಿದೆ. ಸುರೇಶ್ ಗೋಪಿ ಅವರಂತಹ ನಾಯಕರು ಬಿಜೆಪಿಯಲ್ಲಿ ಹೊಸ ಭರವಸೆಗೆ ಕಾರಣರಾಗಿದ್ದಾರೆ.
ಕೇರಳದ ಜನಸಂಖ್ಯೆಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳು ದೊಡ್ಡ ಪಾಲು ಹೊಂದಿವೆ. ಈ ಬಾರಿ ಈ ಸಮುದಾಯಗಳ ಮತಗಳು ಒಡೆಯುವ ಸಾಧ್ಯತೆ ಎದ್ದುಕಾಣುತ್ತಿದೆ. ಮುಸ್ಲಿಂ ಮತಗಳು ಸಾಂಪ್ರದಾಯಿಕವಾಗಿ ಯುಡಿಎಫ್ ಪರವಾಗಿದ್ದವು. ಈಗ ಎಲ್ಡಿಎಫ್ನ ಸೈದ್ಧಾಂತಿಕ ನಿಲುವುಗಳಿಂದಾಗಿ ವಿಭಜನೆಯಾಗುತ್ತಿವೆ. ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೋರುತ್ತಿರುವ ಕಟು ನಿಲುವು ಮುಸ್ಲಿಂ ಸಮುದಾಯದ ಒಂದು ವರ್ಗವನ್ನು ಸೆಳೆಯುತ್ತಿದೆ. ಕ್ರಿಶ್ಚಿಯನ್ ಸಮುದಾಯ ಇತ್ತೀಚಿನ ದಿನಗಳಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ ಎರಡರಿಂದಲೂ ದೂರ ಸರಿಯುತ್ತಿದೆ. ‘ಲವ್ ಜಿಹಾದ್’ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಈ ಸಮುದಾಯ ಬಿಜೆಪಿಯತ್ತ ವಾಲುತ್ತಿರುವುದು ಗಮನಾರ್ಹ ಬದಲಾವಣೆ. ಸಿರೊ-ಮಲಬಾರ್ ಚರ್ಚ್ನ ಕೆಲವು ನಿಲುವುಗಳು ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಪಶ್ಚಿಮ ಬಂಗಾಳ ಅಥವಾ ಅಸ್ಸಾಂನಲ್ಲಿ ಇರುವಂತೆ ಇಲ್ಲಿ ನುಸುಳುಕೋರರ ವಿಷಯ ಪ್ರಮುಖವಲ್ಲದಿದ್ದರೂ, ರಾಜ್ಯದ ಆಂತರಿಕ ಸಮಸ್ಯೆಗಳು ಗಾಢವಾಗಿವೆ. ಕೇರಳ ತೀವ್ರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದೆ. ಸಾಲದ ಮಿತಿ ಮತ್ತು ಕೇಂದ್ರದ ಅನುದಾನದ ಕುರಿತು ನಡೆಯುತ್ತಿರುವ ವಿವಾದ ದೊಡ್ಡ ರಾಜಕೀಯ ವಿವಾದವಾಗಿದೆ. ಖಜಾನೆ ಖಾಲಿಯಾಗಿರುವುದು ಮತ್ತು ಸಂಬಳ ಪಾವತಿಯಲ್ಲಿನ ವಿಳಂಬ ಪ್ರತಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿದೆ. ಚಿನ್ನದ ಕಳ್ಳಸಾಗಣೆ, ಲೈಫ್ ಮಿಷನ್ ಹಗರಣ ಮತ್ತು ಸಹಕಾರಿ ಬ್ಯಾಂಕ್ ಹಗರಣಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿವೆ. ಹೆಚ್ಚಿನ ಶಿಕ್ಷಣ ಪಡೆದಿದ್ದರೂ ಯುವಕರು ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋಗುತ್ತಿರುವುದು ಸರ್ಕಾರದ ವಿರುದ್ಧದ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿಭಾ ಪಲಾಯನ ಸಮಸ್ಯೆ ಇಲ್ಲಿ ಗಂಭೀರವಾಗಿದೆ.
ಕೇರಳದಲ್ಲಿ ಮಹಿಳೆಯರು ಕೇವಲ ಮತದಾರರಲ್ಲ, ಅವರು ರಾಜಕೀಯದ ಗತಿಯನ್ನೇ ಬದಲಿಸುವ ಶಕ್ತಿ. ಸರ್ಕಾರದ ಪರವಾಗಿ ದೊಡ್ಡ ಮಟ್ಟದ ಪ್ರಚಾರ ಕಾರ್ಯಕ್ಕೆ ರಾಜ್ಯದಾದ್ಯಂತ ಹರಡಿರುವ ಕುಟುಂಬಶ್ರೀ ಸ್ವಸಹಾಯ ಗುಂಪುಗಳ ಜಾಲ ಸಹಕಾರಿಯಾಗಿದೆ. ಇದು ಎಲ್ಡಿಎಫ್ನ ಸೈಲೆಂಟ್ ವೋಟ್ ಬ್ಯಾಂಕ್. ಮಹಿಳಾ ಹಿರಿಯ ನಾಗರಿಕರಲ್ಲಿ ಎಲ್ಡಿಎಫ್ ಪರ ಒಲವು ಮೂಡುವುದಕ್ಕೆ ಮಾಸಿಕ ಪಿಂಚಣಿ ಯೋಜನೆ ಕಾರಣ. ಸರಿಯಾದ ಸಮಯಕ್ಕೆ ಪಿಂಚಣಿ ತಲುಪುತ್ತಿರುವುದು ಸರ್ಕಾರದ ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ‘ಸನಾತನ ಧರ್ಮ’, ‘ಸಿಎಎ’ ಮತ್ತು ‘ಏಕರೂಪ ನಾಗರಿಕ ಸಂಹಿತೆ’ಯಂತಹ ರಾಷ್ಟ್ರೀಯ ವಿಷಯಗಳು ಕೇರಳದ ನೆಲದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಎಡಪಕ್ಷಗಳು ಮಾತ್ರ ಬಿಜೆಪಿಯನ್ನು ಎದುರಿಸಬಲ್ಲ ಏಕೈಕ ಶಕ್ತಿ ಎಂದು ಬಿಂಬಿಸಿಕೊಳ್ಳುವ ಮೂಲಕ ಅಲ್ಪಸಂಖ್ಯಾತ ಮತಗಳನ್ನು ಕ್ರೋಡೀಕರಿಸಲು ಎಲ್ಡಿಎಫ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ತನ್ನ ಸೆಕ್ಯುಲರ್ ಇಮೇಜ್ ಉಳಿಸಿಕೊಳ್ಳುವ ಜತೆಗೆ ಹಿಂದೂ ಮತಗಳನ್ನು ಕಳೆದುಕೊಳ್ಳದಂತೆ ಸಮತೋಲನ ಕಾಯ್ದುಕೊಳ್ಳುವ ಸವಾಲು ಇದೆ. ಇದೆಲ್ಲದರ ನಡುವೆ, ಬಿಜೆಪಿಯ ಅಬ್ಬರವೂ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸತತ ಭೇಟಿಗಳು ಮತ್ತು ಕ್ರಿಶ್ಚಿಯನ್ ಸಮುದಾಯದ ನಾಯಕರೊಂದಿಗೆ ಅವರು ನಡೆಸುತ್ತಿರುವ ಮಾತುಕತೆಗಳು ಈ ಬಾರಿ ಕೇರಳದಲ್ಲಿ ಕಮಲ ಖಾತೆ ತೆರೆಯುವ ಮುನ್ಸೂಚನೆ ನೀಡಿವೆ.
ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4 ರಂದು ಇಡೀ ದೇಶ ಕಾತರದಿಂದ ಕಾಯುತ್ತಿರುವ ಫಲಿತಾಂಶ ಹೊರಬೀಳಲಿದೆ.
ಸತತ 2 ಬಾರಿ ಅಧಿಕಾರ ನಡೆಸಿದ ನಂತರ ಸಾಮಾನ್ಯವಾಗಿ ಎದುರಾಗುವ ‘ಆಡಳಿತ ವಿರೋಧಿ ಅಲೆ’ (ಆಂಟಿ ಇನ್ಕಂಬೆನ್ಸಿ) ಇಲ್ಲಿ ಪ್ರಮುಖವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಡಳಿತ ವೈಖರಿ ಕೆಲವು ವರ್ಗಗಳಲ್ಲಿ ಅಸಮಾಧಾನ ಮೂಡಿಸಿದೆ. ಅಲ್ಲದೆ, ಪರಿಸರ ಸೂಕ್ಷ್ಮ ಪ್ರದೇಶಗಳ ವಿವಾದ ಗುಡ್ಡಗಾಡು ಪ್ರದೇಶದ ರೈತರನ್ನು ಸರ್ಕಾರದ ವಿರುದ್ಧ ತಿರುಗಿಬೀಳುವಂತೆ ಮಾಡಿದೆ.
ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಶಶಿ ತರೂರ್ ಅವರಂತಹ ನಾಯಕರು ನಗರ ಪ್ರದೇಶದ ಯುವಕರನ್ನು ಸೆಳೆಯುತ್ತಿದ್ದಾರೆ. ಕಾಂಗ್ರೆಸ್ ತನ್ನ ‘ನ್ಯಾಯ್’ ಯೋಜನೆ ಮಾದರಿಯ ಭರವಸೆಗಳನ್ನು ಕೇರಳಕ್ಕೆ ಸರಿಹೊಂದುವಂತೆ ರೂಪಿಸುತ್ತಿದೆ. ಮಲಪ್ಪುರಂ ಮತ್ತು ವಯನಾಡ್ ಭಾಗದಲ್ಲಿ ಯುಡಿಎಫ್ ತನ್ನ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಕೇರಳದ ಮೈತ್ರಿಕೂಟಗಳ ‘ಕೆಮಿಸ್ಟ್ರಿ’ ಈಗ ಹೊಸ ರೂಪ ಪಡೆಯುತ್ತಿದೆ. ಈ ಬಾರಿಯ ಚುನಾವಣೆ ಪಿಣರಾಯಿ ವಿಜಯನ್ ಅವರ ಆಡಳಿತದ ಮೇಲಿನ ಜನಾಭಿಪ್ರಾಯ (ರೆಫರೆಂಡಮ್ ಆಗಿದೆ. ಒಂದು ವೇಳೆ ಯುಡಿಎಫ್ ತನ್ನ ಮತಗಳನ್ನು ಉಳಿಸಿಕೊಳ್ಳಲು ವಿಫಲವಾದರೆ, ಅದರಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚು. ತ್ರಿಕೋನ ಸ್ಪರ್ಧೆ ಏರ್ಪಟ್ಟಾಗ ಸಾಮಾನ್ಯವಾಗಿ ಎಡರಂಗದ ಕೇಡರ್ ವೋಟ್ಗಳು ಗಟ್ಟಿಯಾಗಿರುತ್ತವೆ. ಆದರೆ, ಆಡಳಿತ ವಿರೋಧಿ ಅಲೆ ಜೋರಾಗಿದ್ದರೆ ಯುಡಿಎಫ್ ಪುಟಿದೇಳಬಹುದು. ರಾಜಕೀಯ ಪಂಡಿತರ ಪ್ರಕಾರ, ಈ ಬಾರಿ ಸಣ್ಣ ಪಕ್ಷಗಳು ಯಾರ ಕಡೆ ವಾಲುತ್ತವೆ ಎಂಬುದು ಮ್ಯಾಜಿಕ್ ನಂಬರ್ ತಲುಪಲು ನಿರ್ಣಾಯಕವಾಗಲಿದೆ. ಮೇ 4ರಂದು ಹೊರಬೀಳುವ ಫಲಿತಾಂಶ ಕೇರಳಕ್ಕೆ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ರಾಜಕೀಯ ದಿಕ್ಸೂಚಿಯನ್ನು ಬದಲಿಸಲಿದೆ.