ದೇವರಿಗೂ ಗೊತ್ತು ಮುಂಬೈಗೆ ಯಾರು ಬೇಕು ಅಂತ: ಉದ್ಧವ್ ಹತಾಶೆಗೆ ಫಡ್ನವಿಸ್ ಟಾಂಗ್ 
ದೇಶ

ದೇವರಿಗೂ ಗೊತ್ತು ಮುಂಬೈಗೆ ಯಾರು ಬೇಕು ಅಂತ: ಉದ್ಧವ್ ಹತಾಶೆಗೆ ಫಡ್ನವಿಸ್ ಟಾಂಗ್ | Devendra Fadnavis

ಮುಂಬೈ: 2026ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯ ಐತಿಹಾಸಿಕ ಫಲಿತಾಂಶಗಳ ನಂತರ ಮಹಾರಾಷ್ಟ್ರದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಮುಂಬೈನ ಮುಂದಿನ ಮೇಯರ್ ಆಯ್ಕೆಯು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಿಂದ ಮಾತ್ರ ನಿರ್ಧಾರವಾಗುತ್ತದೆ ಎಂದು ಹೇಳುವ ಮೂಲಕ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಸಿಎಂ ದೇವೇಂದ್ರ ಫಡ್ನವೀಸ್(Devendra Fadnavis) ಟಕ್ಕರ್​ ಕೊಟ್ಟಿದ್ದಾರೆ.

ಠಾಕ್ರೆ ಹೇಳಿಕೆಗೆ ಫಡ್ನವೀಸ್ ತೀಕ್ಷ್ಣ ಪ್ರತಿಕ್ರಿಯೆ

ಬಿಜೆಪಿ 89 ಸ್ಥಾನಗಳಿಗೆ ಏರಲು ಪ್ರಮುಖ ಕಾರಣರಾದ ಸಿಎಂ ದೇವೇಂದ್ರ ಫಡ್ನವೀಸ್, ಠಾಕ್ರೆ ದೈವಿಕ ಹಸ್ತಕ್ಷೇಪದ ಮೇಲೆ ಅವಲಂಬಿತರಾಗಿರುವುದನ್ನು ಗೇಲಿ ಮಾಡುತ್ತಾ, ಅದೇ ಸಮಯದಲ್ಲಿ ತಮ್ಮದೇ ಆದ ಅಡ್ಡಹೆಸರು ದೇವ (ದೇವ ಭಾವು) ಎಂದು ಹೇಳಿಕೊಂಡಿದ್ದಾರೆ.
ದೇವ ಎಂದರೆ ಏನು? ನಾನು ಅಥವಾ ದೇವರು? ಏಕೆಂದರೆ ನನ್ನನ್ನು ದೇವ ಎಂದೂ ಕರೆಯುತ್ತಾರೆ ಎಂದು ಫಡ್ನವೀಸ್ ವ್ಯಂಗ್ಯವಾಡಿದರು. ಅಲ್ಲದೆ, ಮೇಯರ್ ಮಹಾಯುತಿಯಿಂದಲೇ ಆಗಬೇಕೆಂಬುದು ನಿಜಕ್ಕೂ ಸರ್ವಶಕ್ತನ ಇಚ್ಛೆಯಾಗಿದೆ. ಯಾರು ಮೇಯರ್ ಆಗುತ್ತಾರೆ, ಅವರು ಯಾವಾಗ ಆಯ್ಕೆಯಾಗುತ್ತಾರೆ ಮತ್ತು ಎಷ್ಟು ಕಾಲ ಎಂದು ನಿರ್ಧಾರಗಳನ್ನು ನಾನು, ಏಕನಾಥ್ ಶಿಂಧೆ ಮತ್ತು ನಮ್ಮ ಪಕ್ಷದ ನಾಯಕರು ಒಟ್ಟಾಗಿ ತೆಗೆದುಕೊಳ್ಳುತ್ತಾರೆ ಎಂದು ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಠಾಕ್ರೆ ಹೇಳಿದ್ದೇನು..?

ಭಾರತದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲೆ ಠಾಕ್ರೆ ಕುಟುಂಬದ ಮೂರು ದಶಕಗಳ ಹಳೆಯ ಪ್ರಾಬಲ್ಯವನ್ನು ಕೊನೆಗೊಳಿಸಿದ ಹೀನಾಯ ಸೋಲಿನ ನಂತರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಶಿವಸೇನೆ (ಯುಬಿಟಿ) ಮೇಯರ್ ಆಯ್ಕೆಯಾಗುವುದನ್ನು ನೋಡುವುದು ನಮ್ಮ ಕನಸಾಗಿದೆ. ದೇವರು ಬಯಸಿದರೆ, ಅದು ಸಂಭವಿಸುತ್ತದೆ ಎಂದು ಪಕ್ಷದ ನಿಷ್ಠಾವಂತರ ಸಭೆಯಲ್ಲಿ ಠಾಕ್ರೆ ಹೇಳಿದರು. ಬಿಜೆಪಿ ದ್ರೋಹದಿಂದ ಗೆದ್ದಿದೆ ಮತ್ತು ಮರಾಠಿ ಮಾನೂಸ್ ಈ ಪಾಪವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಬಿಎಂಸಿಯಲ್ಲಿ ಬಿಜೆಪಿ ಪಾರುಪತ್ಯ

227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳು ಬೇಕು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ 118 ವಾರ್ಡ್​ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಲ್ಕು ದಶಕಗಳಿಂದ ಬಿಎಂಸಿಯನ್ನು ಆಳುತ್ತಿರುವ ಠಾಕ್ರೆ ಬಣವು 65 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ.
ಈ ಚುನಾವಣೆಯೂ ಠಾಕ್ರೆ ಸಹೋದರರ ಪುನರ್ಮಿಲನಕ್ಕೆ ಸಾಕ್ಷಿಯಾಗಿದ್ದು, ಉದ್ಧವ್​ ಬಣ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮೈತ್ರಿ ಮಾಡಿಕೊಂಡು ಕಣಕ್ಕೆ ಧುಮುಕಿದವು. ಆದರೂ ಕೂಡ ಈ ಮೈತ್ರಿಕೂಟ ಅಧಿಕಾರ ಪಡೆಯಲು ವಿಫಲವಾಗಿದೆ. ಅನೇಕ ವರ್ಷಗಳ ಕಾಲ ಮಹಾರಾಷ್ಟ್ರವನ್ನು ಆಳಿದ್ದ ಕಾಂಗ್ರೆಸ್ ಕೂಡ ಈ ಚುನಾವಣೆಯಲ್ಲಿ ಪ್ರಭಾವ ಬೀರಲು ವಿಫಲವಾಗಿದ್ದು, ಕೇವಲ 24 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಪ್ರಕಾಶ್ ಅಂಬೇಡ್ಕರ್​​ರ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಜೊತೆ ಮೈತ್ರಿ ಮಾಡಿಕೊಂಡು ಕೈ ಪಾಳಯ ಈ ಚುನಾವಣೆಯಲ್ಲಿ ಸ್ಪರ್ಧಿಸಿತ್ತು(ಏಜೆನ್ಸೀಸ್​).