ಗೋವಾ: ಗೋವಾದ ಅರ್ಪೋರಾದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲುಥ್ರಾ ಮತ್ತು ಗೌರವ್ ಲುಥ್ರಾ ಸಹೋದರರನ್ನು ಥೈಲ್ಯಾಂಡ್‌ನಿಂದ ಮಂಗಳವಾರ ಭಾರತಕ್ಕೆ(Nightclub Owner Arrested) ಗಡೀಪಾರು ಮಾಡಲಾಗಿದೆ.
ಡಿಸೆಂಬರ್ 6ರಂದು ನೈಟ್‌ಕ್ಲಬ್‌ನಲ್ಲಿ ಭಾರೀ ಆಗ್ನಿ ಅವಘಢ ಸಂಭವಿಸಿ 25 ಜನರು ಸಾವನ್ನಪ್ಪಿದ್ದರು. ಈ ದುರಂತದ ನಂತರ ಸಹೋದರರು ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದರು.
ಬಳಿಕ ಆರೋಪಿಗಳ ಪಾಸ್‌ಪೋರ್ಟ್‌ಗಳನ್ನು ಅಮಾನತುಗೊಳಿಸಿ, ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿತ್ತು. ಫುಕೆಟ್‌ನಲ್ಲಿ ಅವರನ್ನು ಬಂಧಿಸಿ, ಗಡೀಪಾರು ಪ್ರಕ್ರಿಯೆ ಪೂರ್ಣಗೊಳಿಸಿ ಬ್ಯಾಂಕಾಕ್‌ನಿಂದ ದಿಲ್ಲಿಗೆ ಇಂಡಿಗೋ ವಿಮಾನದಲ್ಲಿ ಮಂಗಳವಾರ ಕರೆತರಲಾಗಿದೆ.
ದಿಲ್ಲಿಯಲ್ಲಿ ಲ್ಯಾಂಡ್ ಆದ ನಂತರ ಗೋವಾ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ಟ್ರಾನ್ಸಿಟ್ ರಿಮಾಂಡ್ ಪಡೆದು ಗೋವಾಕ್ಕೆ ಇದೀಗ ಕರೆತಂದಿದ್ದಾರೆ. ಅವರ ವಿರುದ್ಧ ಕೊಲೆಗೆ ಸಮನಾದ ನಿರ್ಲಕ್ಷ್ಯ ಸೇರಿದಂತೆ ಗಂಭೀರ ಆರೋಪಗಳಿವೆ. ನೈಟ್‌ಕ್ಲಬ್ ಅಕ್ರಮವಾಗಿ ನಡೆಸುತ್ತಿದ್ದು, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಪ್ರಕರಣ ದಾಖಲಾಗಿದೆ.
ಬೆಂಕಿ ಅವಘಡ
ಡಿಸೆಂಬರ್ 6ರಂದು ಉತ್ತರ ಗೋವಾದ ಅರ್ಪೋರಾದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಜನದಟ್ಟಣೆಯ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿತು. ಇಪ್ಪತ್ತೈದು ಜನರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದರು. ಇದು ರಾಜ್ಯಾದ್ಯಂತ ಮನರಂಜನಾ ಸ್ಥಳಗಳಲ್ಲಿ ಸುರಕ್ಷತಾ ಅನುಸರಣೆಯ ಬಗ್ಗೆ ವ್ಯಾಪಕ ಆಕ್ರೋಶ ಮತ್ತು ಪರಿಶೀಲನೆಗೆ ಕಾರಣವಾಯಿತು,(ಏಜೆನ್ಸೀಸ್).