ಸೌರಭ್ ಮತ್ತು ಗೌರವ್ ಲುತ್ರಾ ಬಂಧನ
- ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ ಪ್ರಕರಣ
- ಎಸ್ಕೇಪ್ ಆಗಿದ್ದ ಕ್ಲಬ್ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಕೊನೆಗೂ ಬಂಧನ
- ಆರೋಪಿಗಳಿಬ್ಬರನ್ನು ಥಾಯ್ಲೆಂಡ್ನ ಪುಕೆಟ್ ಎಂಬಲ್ಲಿ ಬಂಧನ ಮಾಡಿದ ಸ್ಥಳೀಯ ಪೊಲೀಸರು
ಪಣಜಿ : ಪ್ರವಾಸಿಗರ ಸ್ವರ್ಗ ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ ಕ್ಲಬ್‌ನಲ್ಲಿ ಕಳೆದ ಶನಿವಾರ (ಡಿ.06) ಸಂಭವಿಸಿದ ಅಗ್ನಿ ದುರಂತದಲ್ಲಿ ( Goa Fire Accident ) 25 ಮಂದಿ ದುರಂತ ಸಾವಿಗೀಡಾಗಿದರು. ಈ ದುರ್ಘಟನೆ ಬಳಿಕ ಎಸ್ಕೇಪ್ ಆಗಿದ್ದ ಕ್ಲಬ್ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲುತ್ರಾ ಎಂಬುವರನ್ನು ಕೊನೆಗೂ ಬಂಧಿಸಲಾಗಿದೆ.
ಆರೋಪಿಗಳಿಬ್ಬರು ಸಹೋದರರಾಗಿದ್ದು, ಇಬ್ಬರನ್ನು ಥಾಯ್ಲೆಂಡ್ನ ಪುಕೆಟ್ ಎಂಬಲ್ಲಿ ಬಂಧನ ಮಾಡಲಾಗಿದೆ. ಅಗ್ನಿ ಅವಘಡ ಸಂಭವಿಸಿದ ಕೇವಲ 5 ಗಂಟೆಯಲ್ಲಿ ದೆಹಲಿಯ ಬರೇಲಿಯಿಂದ ಇಂಡಿಗೋ ವಿಮಾನದ ಮೂಲಕ ಥಾಯ್ಲೆಂಡ್ಗೆ ಎಸ್ಕೇಪ್ ಆಗಿದ್ದರು. ಇದಾದ ಬಳಿಕ ಇಬ್ಬರ ವಿರುದ್ಧ ಲುಕೌಟ್ ನೋಟಿಸ್ ಮತ್ತು ಇಂಟರ್‌ಪೋಲ್ ಬ್ಲೂ ನೋಟಿಸ್ ಹೊರಡಿಸಲಾಗಿತ್ತು. ಇದೀಗ ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಗೋವಾ ಪೊಲೀಸರ ತಂಡವು ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಭಾರತಕ್ಕೆ ಕರೆತರಲು ಥಾಯ್ಲೆಂಡ್ಗೆ ಪ್ರಯಾಣಿಸಿದೆ.
ವಿಮಾನ ರದ್ದತಿ ಮತ್ತು ವಿಳಂಬದಿಂದಾಗಿ ದೇಶಾದ್ಯಂತ ಇಂಡಿಗೋ ವಿಮಾನ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲೇ ಆರೋಪಿಗಳಿಬ್ಬರು ಇಂಡಿಗೋ ವಿಮಾನದಲ್ಲಿ ಪರಾರಿಯಾಗಿರುವುದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಡಿಸೆಂಬರ್ 7 ರಂದು ಬೆಳಗಿನ ಜಾವ 1.17 ಕ್ಕೆ ಇಬ್ಬರು ಥಾಯ್ಲೆಂಡ್ಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು. ಅದೇ ಸಮಯದಲ್ಲಿ ಅಗ್ನಿಶಾಮಕ ದಳದವರು ಮತ್ತು ಗೋವಾ ಪೊಲೀಸ್ ಸಿಬ್ಬಂದಿ ನೈಟ್‌ಕ್ಲಬ್‌ನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು. ದುರಂತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಟಿಕೆಟ್ ಬುಕ್ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬಂಧನಕ್ಕೆ ಹೆದರಿ ಭಾರತಕ್ಕೆ ಮರಳಲು ಆರೋಪಿಗಳು ನಿರಾಕರಿಸಿದ್ದರು. ಅಲ್ಲದೆ, ಬಂಧನಕ್ಕೂ ಮುನ್ನ ಜಾಮೀನು ಕೋರಿ ದೆಹಲಿಯ ರೋಹಿಣಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅರ್ಪೋರಾ ಕ್ಲಬ್‌ನಲ್ಲಿ ನಾವು ದಿನನಿತ್ಯದ ಯಾವುದೇ ಕಾರ್ಯಾಚರಣೆಗಳನ್ನು ನಡೆಸುತ್ತಿರಲಿಲ್ಲ. ನಾವು ಅಧಿಕಾರಿಗಳ ಸೇಡಿನ ವರ್ತನೆಗೆ ಬಲಿಯಾಗಿದ್ದೇವೆ ಎಂದು ನ್ಯಾಯಾಲಯಕ್ಕೆ ಸಮಜಾಯಿಷಿ ನೀಡಿದ್ದರು. ಥಾಯ್ಲೆಂಡ್ಗೆ ನಮ್ಮ ಪ್ರವಾಸ ಪಲಾಯನವಲ್ಲ, ಬದಲಾಗಿ ವ್ಯಾಪಾರದ ಉದ್ದೇಶಕ್ಕಾಗಿ ನಾವು ಇಲ್ಲಿಗೆ ಆಗಮಿಸಿದೆವು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇನ್ನು ಸೌರಭ್ ಮತ್ತು ಗೌರವ್ ಲುತ್ರಾ ಒಡೆತನದ ಗೋವಾದಲ್ಲಿರುವ ಎರಡನೇ ಕ್ಲಬ್ ಅನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ನಿರ್ದೇಶನದ ಮೇರೆಗೆ ಕೆಡವಲಾಗಿದೆ. ಏಕೆಂದರೆ ಅದನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಮತ್ತು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿರಲಿಲ್ಲ.
ಗೋವಾ ಪೊಲೀಸರ ಎಫ್‌ಐಆರ್ ಪ್ರಕಾರ, ಅಗ್ನಿ ಅವಘಡ ಸಂಭವಿಸಿದ ರೋಮಿಯೋ ಲೇನ್ ಕ್ಲಬ್‌ನಲ್ಲಿ ಅಗ್ನಿ ನಂದಕಗಳು, ಅಲಾರಾಂಗಳು, ಅಗ್ನಿ ನಿಗ್ರಹ ಸಾಧನಗಳು ಇರಲಿಲ್ಲ. ಇವೆಲ್ಲವೂ ಮೂಲಭೂತ ಅಗ್ನಿ ಸುರಕ್ಷತಾ ನಿಯಮಗಳಾಗಿವೆ. ಇದಲ್ಲದೆ, ಮಾಲೀಕರು, ವ್ಯವಸ್ಥಾಪಕರು, ಪಾಲುದಾರರು, ಕಾರ್ಯಕ್ರಮ ಆಯೋಜಕರು ಮತ್ತು ಹಿರಿಯ ಸಿಬ್ಬಂದಿ "ಸರಿಯಾದ ಕಾಳಜಿ ಮತ್ತು ಎಚ್ಚರಿಕೆ ವಹಿಸದೆ" ಮತ್ತು ಮಾರಕ ಅಪಘಾತಕ್ಕೆ ಕಾರಣವಾಗಬಹುದು ಎಂಬ "ಪೂರ್ಣ ಜ್ಞಾನ" ಇದ್ದರೂ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ನೈಟ್‌ಕ್ಲಬ್‌ನಲ್ಲಿ ಡೆಕ್ ಮತ್ತು ನೆಲ ಮಹಡಿಯಲ್ಲಿ ತುರ್ತು ನಿರ್ಗಮನ ದ್ವಾರಗಳ ಕೊರತೆಯಿದ್ದು, ಇದು ಹಲವಾರು ಅತಿಥಿಗಳು ಬೆಂಕಿಯಲ್ಲಿ ಸಿಲುಕಿಕೊಳ್ಳಲು ಕಾರಣವಾಯಿತು ಎಂದು ಎಫ್‌ಐಆರ್ ಉಲ್ಲೇಖಿಸಿದೆ. ಇನ್ನು ಮಂಗಳವಾರ, ಬಿರ್ಚ್ ಬೈ ರೋಮಿಯೋ ಲೇನ್‌ನ ಸಹ-ಮಾಲೀಕ ಅಜಯ್ ಗುಪ್ತಾ ಅವರನ್ನು ದೆಹಲಿಯಲ್ಲಿ ಬಂಧಿಸಲಾಯಿತು, (ಏಜೆನ್ಸೀಸ್).