ಸಾಂದರ್ಭಿಕ ಚಿತ್ರ 
ದೇಶ

ಜಿಮೇಲ್ ಬಳಕೆದಾರರಿಗೆ ಬಂಪರ್ ನ್ಯೂಸ್: ಪ್ರೈಮರಿ ಇಮೇಲ್ ಐಡಿ ಚೇಂಜ್ ಮಾಡಲು ಗೂಗಲ್ ಗ್ರೀನ್ ಸಿಗ್ನಲ್! Gmail Update 2026

ಕ್ಯಾಲಿಫೋರ್ನಿಯಾ: ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಜಿಮೇಲ್ (Gmail Update 2026) ಸೇವೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಜ್ಜಾಗಿದೆ. ಕಳೆದ ಎರಡು ದಶಕಗಳಿಂದಲೂ ಬದಲಾಗದಿದ್ದ ಗೂಗಲ್‌ನ 'ಪ್ರಾಥಮಿಕ ಇಮೇಲ್ ವಿಳಾಸ ಬದಲಾಯಿಸಲಾಗದು' ಎಂಬ ಕಠಿಣ ನೀತಿಯು ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ. ಇನ್ಮುಂದೆ ಬಳಕೆದಾರರು ತಮ್ಮ ಹಳೆಯ @gmail.com ಐಡಿಯನ್ನು ಬದಲಿಸಿ ಹೊಸ ಐಡಿಯನ್ನು ಹೊಂದುವ ಆಯ್ಕೆಯನ್ನು ಗೂಗಲ್ ನೀಡಲಿದೆ.
ಈ ನವೀಕರಣವನ್ನು ಗೂಗಲ್​ ಸಿಇಒ ಸುಂದರ್ ಪಿಚೈ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಜಿಮೇಲ್​ ಸೇವೆಯು 2004 ರಲ್ಲಿ ಪ್ರಾರಂಭವಾಯಿತು. ಅಂದರೆ, ಹಳೆಯ ಐಡಿಯಲ್ಲೇ ನೀವು ಇಂದಿಗೂ ಸಿಲುಕಿಕೊಳ್ಳುವ ಅನಿವಾರ್ಯತೆ ಇಲ್ಲ. ಹಿಂದೆ ಅನೇಕರು ತಮಾಷೆಯ ಅಥವಾ ವಿಚಿತ್ರವಾದ ಹೆಸರುಗಳನ್ನು ಬಳಸಿ ಇಮೇಲ್​ ಐಡಿಯನ್ನು ಮಾಡಿಕೊಂಡಿರುತ್ತಾರೆ. ಅಂತಹ ಐಡಿಗಳಿಗೆ ಇಂದು ನೀವು ಗುಡ್​​ ಬೈ ಹೇಳುವ ಸಮಯ ಬಂದಿದೆ.
ಇನ್ಮುಂದೆ ಬಳಕೆದಾರರು ತಮ್ಮ ಗೂಗಲ್​ ಅಕೌಂಟ್​ ಸೆಟ್ಟಿಂಗ್ಸ್​ಗೆ ಹೋಗಿ ನಿಮಗೆ ಬೇಕಾದ ಹೆಸರು ಮತ್ತು ಇಮೇಲ್​ನ್ನು ಬಳಸಿ ಸೈನ್​ ಆಗಬಹುದು. ಆದಾಗ್ಯೂ, ನೀವೇನಾದರೂ ಹೊಸ ಇಮೇಲ್ ಐಡಿ ಆರಿಸಿಕೊಂಡರೂ ಕೂಡಾ ನಿಮ್ಮ ಹಳೆಯ ಐಡಿ ಡಿಲೀಟ್ ಆಗುವುದಿಲ್ಲ. ಬದಲಿಗೆ ಹಳೆಯ ಮತ್ತು ಹೊಸ ಎರಡೂ ಐಡಿಗಳನ್ನು ಬಳಸಿ ನಿಮ್ಮ ಖಾತೆಗೆ ಲಾಗಿನ್ ಮಾಡಬಹುದು. ಹಳೆಯ ಐಡಿಗೆ ಬರುವ ಇಮೇಲ್‌ಗಳು ಕೂಡ ನಿಮಗೆ ತಲುಪುತ್ತವೆ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ನವೀಕರಣ ಏನು ಮಾಡುತ್ತದೆ

ಹೊಸ ಆವಿಷ್ಕಾರವು ತಮ್ಮ ಅಸ್ತಿತ್ವದಲ್ಲಿರುವ ಡೇಟಾವನ್ನು ಕಳೆದುಕೊಳ್ಳದೆ ಹೊಸ ಜಿಮೇಲ್​ ವಿಳಾಸಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಹಳೆಯ ಇಮೇಲ್​ಗಳು, ಡ್ರೈವ್ ಫೈಲ್‌ಗಳು, ಫೋಟೋಗಳು ಮತ್ತು ಇತರ ಲಿಂಕ್ ಸೇವೆಗಳು ನಿಮ್ಮ ಖಾತೆಯಲ್ಲಿ ಹಾಗೆಯೇ ಉಳಿದುಕೊಳ್ಳುತ್ತವೆ.
ಹಳೆಯ ಇಮೇಲ್ ಐಡಿಗೆ ಯಾರಾದರೂ ಇಮೇಲ್​ ಕಳುಹಿಸಿದರೆ, ಆ ಇಮೇಲ್​ಗಳು ನಿಮ್ಮ ಇನ್​ಬಾಕ್ಸ್​ಗೆ ತಲುಪುತ್ತವೆ. ಇದರಿಂದ ನೀವು ಹಳೆಯ ಸಂಪರ್ಕವನ್ನು ಕಳೆದುಕೊಳ್ಳುವ ಭೀತಿ ಇರುವುದಿಲ್ಲ.
ಆದಾಗ್ಯೂ, ಈ ಬದಲಾವಣೆಯು ಗೂಗಲ್​​ನೊಂದಿಗೆ ಸೈನ್ ಇನ್ ಮಾಡಿ ಮತ್ತು ಕ್ರೋಮ್​ಸಿಂಕ್‌ನಂತಹ ಸೇವೆಗಳಲ್ಲಿ ಸಣ್ಣಪುಟ್ಟ ಅಡಚಣೆಗಳಿಗೆ ಕಾರಣವಾಗಬಹುದು. ಹಾಗಾಗಿ ನಿಮ್ಮ ಪ್ರಮುಖ ಡೇಟಾವನ್ನು ಮುಂಚಿತವಾಗಿಯೇ ಬ್ಯಾಕಪ್​ ಮಾಡಲು ಕಂಪನಿಯು ಬಳಕೆದಾರರಿಗೆ ಸಲಹೆ ನೀಡಿದೆ.
ಬಳಕೆದಾರರು ತಮ್ಮ ಹೊಸ ಇಮೇಲ್​ ಐಡಿಯನ್ನು ಇಷ್ಟಪಡದೇ ಹಿಂದಿನ ಐಡಿಗೆ ಹಿಂತಿರುಗಲು ಇಚ್ಛಿಸಿದರೆ, ಅದಕ್ಕೆ ಅವಕಾಶವಿರುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಹಳೆಯ ಇಮೇಲ್ ಐಡಿಯನ್ನು ಬಿಟ್ಟು ಹೊಸ ಐಡಿಗೆ ಬದಲಾದಾಗ, ಆ ಹಳೆಯ ವಿಳಾಸವು ಮುಂದಿನ 12 ತಿಂಗಳವರೆಗೆ ಯಾವುದೇ ಹೊಸ ಜಿಮೇಲ್ ಖಾತೆಯನ್ನು ತೆರೆಯಲು ಅವಕಾಶವಿರುವುದಿಲ್ಲ.
ವರ್ಷಗಳ ಕಾಲ, ಜಿಮೇಲ್​ ಬಳಕೆದಾರರಿಗೆ ಹೊಸ ಖಾತೆಯನ್ನು ರಚಿಸದೇ ತಮ್ಮ ಪ್ರಾಥಮಿಕ ಇಮೇಲ್​ ಐಡಿಯನ್ನು ಬದಲಾಯಿಸುವ ಯಾವುದೇ ಆಯ್ಕೆ ಇರಲಿಲ್ಲ. ಈ ನವೀಕರಣವು ಆ ಮಿತಿಯನ್ನು ತೆಗೆದುಹಾಕುತ್ತದೆ. ಮತ್ತು ಬಳಕೆದಾರರು ತಮ್ಮ ಡೇಟಾಗೆ ಪ್ರವೇಶವನ್ನು ಕಳೆದುಕೊಳ್ಳದೇ ಹಳೆಯ ಅಥವಾ ಕಡಿಮೆ ವೃತ್ತಿಪರ ಬಳಕೆದಾರ ಹೆಸರುಗಳಿಂದ ಮುಂದುವರೆಸಲು ಅವಕಾಶ ಕಲ್ಪಿಸಿದೆ (ಏಜೆನ್ಸೀಸ್​).