ಗ್ಯಾಸ್​ ಸಿಲಿಂಡರ್​ಗಳು 
ದೇಶ

ನಿಮ್ಮ ಬಳಿ ಗ್ಯಾಸ್​ ಸಿಲಿಂಡರ್​ ಇದ್ರೆ ಸಾಕು ಈ ರೆಸಾರ್ಟ್​​ನಲ್ಲಿ ಎಲ್ಲವೂ ಉಚಿತ! ಫ್ಯಾಮಿಲಿ ಸಮೇತ ಮಜಾ ಮಾಡಿ ​

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್​ಗಳ ಬಿಕ್ಕಟ್ಟು
  • ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದ ಹೋಟೆಲ್​ ಉದ್ಯಮಕ್ಕೆ ಸಂಕಷ್ಟ
  • ಈ ನಿಟ್ಟಿನಲ್ಲಿ ಗ್ರಾಹಕರಿಗೆ ಆಫರ್​ ಘೋಷಿಸಿದ ಕೇರಳದ ರೆಸ್ಟೋರೆಂಟ್​
ಕೇರಳ: ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್​-ಇರಾನ್​ ನಡುವಿನ ಭೀಕರ ಯುದ್ಧದಿಂದ ತೈಲ ಬಿಕ್ಕಟ್ಟು ಎದುರಾಗಿದೆ. ಹಾರ್ಮುಜ್​ ಜಲಸಂಧಿಯನ್ನು ಮುಚ್ಚಿರುವ ಇರಾನ್​, ವೈರಿ ರಾಷ್ಟ್ರದ ಮಿತ್ರ ದೇಶಗಳನ್ನು ಬಿಟ್ಟು ಉಳಿದ ರಾಷ್ಟ್ರಗಳ ತೈಲ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಸದ್ಯ ಭಾರತದಲ್ಲಿ, ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್​ಗಳ ಕೊರತೆ ಎದುರಾಗಿದ್ದು, ಹೋಟೆಲ್​ ಮತ್ತು ರೆಸ್ಟೋರೆಂಟ್​ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಈ ನಿಟ್ಟಿನಲ್ಲಿ, ಗ್ಯಾಸ್​ ಸಿಲಿಂಡರ್​ಗಳಿಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ.  
ಬ್ಲ್ಯಾಕ್​ ಮಾರ್ಕೆಟ್​ನಲ್ಲಿ ವಾಣಿಜ್ಯ ಸಿಲಿಂಡರ್​ಗಳಿಗೆ ಬರೋಬ್ಬರಿ 5ರಿಂದ 6 ಸಾವಿರ ರೂ. ಕೊಟ್ಟು ಖರೀದಿ ಮಾಡುತ್ತಿರುವ ಕೆಲ ಹೋಟೆಲ್​ ಮಾಲೀಕರು, ಉದ್ಯಮವನ್ನು ಮುಚ್ಚಲಾಗದ ಪರಿಸ್ಥಿತಿಯಿಂದ ದುಬಾರಿ ಹಣ ನೀಡಿ, ತನ್ನ ಗ್ರಾಹಕರಿಗೆ ಉಪಹಾರ ಉಣಬಡಿಸುತ್ತಿವೆ. ಆದರೆ, ಈ ಬಿಕ್ಕಟ್ಟು ಕುತ್ತಿಗೆಯ ಮಟ್ಟಕ್ಕೆ ಬಂದ ಹಿನ್ನೆಲೆ ಒಂದಷ್ಟು ರೆಸ್ಟೋರೆಂಟ್​ಗಳು ಕ್ಲೋಸ್​ ಎಂಬ ಬೋರ್ಡ್​ ತೂಗುಹಾಕಿವೆ. ಈ ಮಧ್ಯೆ, ಕೊಚ್ಚಿಯ ರೆಸಾರ್ಟ್​ವೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ಗ್ಯಾಸ್​ ಕೊಡಿ ಉಚಿತವಾಗಿ ಉಳಿದು ಹೋಗಿ ಎಂಬ ಆಫರ್​ ನೀಡಿದೆ. 
ಕೊಚ್ಚಿಯ ಅಲುವಾ ರೈಲು ನಿಲ್ದಾಣದ ಬಳಿಯ ಹೋಟೆಲ್ ಸಾಗರ್‌ಗೆ ನೀವು ವಾಣಿಜ್ಯ ಸಿಲಿಂಡರ್ ನೀಡಿದರೆ, 'ಮುನ್ನಾರ್ ಪೀಕ್ ಪ್ಯಾರಡೈಸ್' ಎಂಬ ರೆಸಾರ್ಟ್‌ನಲ್ಲಿ ನಿಮ್ಮ ಕುಟುಂಬದೊಂದಿಗೆ ಉಚಿತ ಊಟ, ವಸತಿಯನ್ನು ಪಡೆಯಬಹುದಾಗಿದೆ. ಒಂದು ದಿನದ ಮಟ್ಟಿಗೆ ರೆಸಾರ್ಟ್ ಪ್ರವೇಶ, ಸ್ಟೇ ಮತ್ತು ಆಹಾರ ಉಚಿತವಾಗಿರಲಿದೆ ಎಂದು 'ಮನೋರಾಮ' ತನ್ನ ವರದಿಯಲ್ಲಿ ತಿಳಿಸಿದೆ. 
ಮುನ್ನಾರ್‌ನಲ್ಲಿರುವ ತಮ್ಮ ರೆಸಾರ್ಟ್ ಬಗ್ಗೆ ಮಾಲೀಕ ಎ.ಪಿ. ಸಫೀರ್ ಮಾತನಾಡಿ, ಈ ಆಫರ್ ಕುರಿತಂತೆ ನಾವು ಸೋಷಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಹಾಕಿದ ತಕ್ಷಣ, ಅನೇಕರು ನಮಗೆ ಫೋನ್​ ಮಾಡಿ, ನಮ್ಮ ಬಳಿ ಗೃಹಬಳಕೆ ಸಿಲಿಂಡರ್‌ಗಳು ಮಾತ್ರ ಇವೆ. ಇದು ಆಗುತ್ತದೆಯೇ ಎಂದು ಕೇಳಿದರು. ಕೆಲವೇ ಕೆಲವರು ವಾಣಿಜ್ಯ ಸಿಲಿಂಡರ್‌ಗಳನ್ನು ಒದಗಿಸಲು ಮುಂದಾದರು ಎಂದು ಹೇಳಿದರು.
ಹೋಟೆಲ್‌ಗೆ ದಿನಕ್ಕೆ ಮೂರು ವಾಣಿಜ್ಯ ಸಿಲಿಂಡರ್‌ಗಳ ಅವಶ್ಯಕತೆ ಇದೆ. ಸಿಲಿಂಡರ್‌ಗಳು ಖಾಲಿಯಾದಾಗ, ಬೇರೆ ದಾರಿಯಿಲ್ಲದೇ, ಒಂದು ವಾರ ಮುಚ್ಚುವ ಪರಿಸ್ಥಿತಿ ಎದುರಾಯಿತು. ಇಂತಹ ಬಿಕ್ಕಟ್ಟು ಎದುರಾದಗಲೇ, ನಾವು ಈ ಆಫರ್ ಅನ್ನು ಜಾರಿಗೊಳಿಸಿದೆವು. ಸಿಲಿಂಡರ್ ಕೊರತೆ ಮುಗಿಯುವವರೆಗೂ ರಿಯಾಯಿತಿ ಚಾಲ್ತಿಯಲ್ಲಿರುತ್ತದೆ ಎಂದಿದ್ದಾರೆ. ಸದ್ಯ ಇದು ನೆಟ್ಟಿಗರ ಕುತೂಹಲವನ್ನು ಕೆರಳಿಸಿದ್ದು, ಗ್ಯಾಸ್​ ಸಿಲಿಂಡರ್​ಗಳ ಬಿಕ್ಕಟ್ಟು ಜನರನ್ನು ಯಾವ ಸ್ಥಿತಿಗೆ ದೂಡುತ್ತಿದೆ ಎಂಬ ಪ್ರಶ್ನೆಯನ್ನು ತಮ್ಮಲ್ಲೇ ಕೇಳಿಕೊಳ್ಳುವಂತೆ ಮಾಡಿದೆ,(ಏಜೆನ್ಸೀಸ್).