Allahabad High 
ದೇಶ

ಪತಿಯ ಆದಾಯದ ಶೇ.25ರಷ್ಟು ಪಾಲನ್ನು ಪತ್ನಿಗೆ ನೀಡಿ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು!

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಜೀವನಾಂಶ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವಾಗ ಮಹತ್ವದ ತೀರ್ಪಿನಲ್ಲಿ, ಪತ್ನಿಯ ಜೀವನಾಂಶವು ಪತಿಯ ಆದಾಯದ ಶೇಕಡಾ 25 ರವರೆಗೆ ಇರಬಹುದು ಎಂದು ಅಲಹಾಬಾದ್ ಹೈಕೋರ್ಟ್ ಮಂಗಳವಾರ(ಜ.14) ಹೇಳಿದೆ.
ಕುಟುಂಬ ನ್ಯಾಯಾಲಯವು ಪತ್ನಿಗೆ ನೀಡುವ ಜೀವನಾಂಶ ಭತ್ಯೆಯ ಹೆಚ್ಚಳವನ್ನು ಎತ್ತಿಹಿಡಿದ ನ್ಯಾಯಾಲಯವು ಪತಿಯ ಅರ್ಜಿಯನ್ನು ವಜಾಗೊಳಿಸಿತು. ಅರ್ಜಿದಾರ ಪತಿಯು ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ತನ್ನ ಹೆಂಡತಿಯನ್ನು ನೋಡಿಕೊಳ್ಳುವುದು ಪವಿತ್ರ ಮತ್ತು ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಾಲಯವು ಒತ್ತಿ ಹೇಳುವ ಮೂಲಕ ಪತಿಯ ಒಟ್ಟು ಆದಾಯದಲ್ಲಿ ಕಾಲು ಭಾಗವನ್ನು (25%) ಪತ್ನಿಗೆ ಜೀವನಾಂಶವಾಗಿ ನೀಡಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಶಹಜಹಾನ್‌ಪುರದ ಸುರೇಶ್ ಚಂದ್ರ ಎಂಬುವವರು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2003ರಲ್ಲಿ ಅವರ ಪತ್ನಿಗೆ ತಿಂಗಳಿಗೆ 500 ರೂ. ಜೀವನಾಂಶ ನೀಡುವಂತೆ ಆದೇಶವಾಗಿತ್ತು. ಆದರೆ, 2015ರಲ್ಲಿ ಪತ್ನಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಕೌಟುಂಬಿಕ ನ್ಯಾಯಾಲಯವು, 2024ರಲ್ಲಿ ಈ ಮೊತ್ತವನ್ನು 3,000 ರೂ.ಗಳಿಗೆ ಹೆಚ್ಚಿಸಿ ಆದೇಶಿಸಿತ್ತು.
ಪತಿಯ ವಾದ: ಸುರೇಶ್ ಚಂದ್ರ ಅವರ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿ, "ಅರ್ಜಿದಾರರು ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕರಾಗಿದ್ದು, ಅವರ ಆದಾಯವೇ ಅತ್ಯಲ್ಪವಾಗಿದೆ. ಈಗಾಗಲೇ ಆರು ಬಾರಿ ಜೀವನಾಂಶದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಈಗಿನ 3,000 ರೂ.ಗಳ ಮೊತ್ತವು ಅವರ ಶಕ್ತಿಗೆ ಮೀರಿದ್ದಾಗಿದೆ. ನ್ಯಾಯಾಲಯವು ಪತಿಯ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ ಈ ಆದೇಶ ನೀಡಿದೆ" ಎಂದು ವಾದಿಸಿದ್ದರು.
ಕೋರ್ಟ್ ತೀರ್ಮಾನ: ಆದರೆ, ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಪತಿಯ ನಿವ್ವಳ ಆದಾಯದ ಶೇ. 25ರಷ್ಟು ಮೊತ್ತವನ್ನು ಪತ್ನಿಯ ನಿರ್ವಹಣೆಗೆ ನೀಡುವುದು ನ್ಯಾಯೋಚಿತ ಎಂದು ಅಭಿಪ್ರಾಯಪಟ್ಟಿತು. ಜೀವನೋಪಾಯದ ವೆಚ್ಚಗಳು ಹೆಚ್ಚಿರುವುದರಿಂದ 3,000 ರೂ.ಗಳ ಮೊತ್ತವು ಅತಿಯಲ್ಲ ಎಂದು ಭಾವಿಸಿ, ಪತಿಯ ಅರ್ಜಿಯನ್ನು ವಜಾಗೊಳಿಸಿತು.
ಸುಪ್ರೀಂ ಕೋರ್ಟ್ ಉಲ್ಲೇಖ: ಈ ಹಿಂದೆ 'ಕಲ್ಯಾಣ್ ಡೇ ಚೌಧರಿ ವರ್ಸಸ್ ರೀಟಾ ಡೇ ಚೌಧರಿ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಇಲ್ಲಿ ಎತ್ತಿ ಹಿಡಿದಿದೆ,(ಏಜೆನ್ಸೀಸ್​).