ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿಲ್ಲ : ಮಿತಿಲೇಶ್ ತಿವಾರಿ
- ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿಲ್ಲ : ಮಿತಿಲೇಶ್ ತಿವಾರಿ
- ಅವರು ಮನೆಯಲ್ಲಿದ್ದರೆ ಸಾಕು: ಬಿಹಾರ್ ಶಿಕ್ಷಣ ಸಚಿವ
- ಶಿಕ್ಷಣ ಸಚಿವನ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ
ಬಿಹಾರ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೇಟಿ ಬಜಾವೋ, ಬೇಟಿ ಪಡಾವೋ (ಮಗಳನ್ನು ರಕ್ಷಿಸಿ, ಮಗಳಿಗೆ ಶಿಕ್ಷಣ ನೀಡಿ) ಎಂದು ಹೇಳಿದರೆ, ಬಿಹಾರದ ಶಿಕ್ಷಣ ಸಚಿವ ಮಿತಿಲೇಶ್ ತಿವಾರಿ (Mithilesh Tiwari) ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವೇನಿದೆ ಎಂದು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಹೆಣ್ಣು ಮಕ್ಕಳು ಮನೆಯಲ್ಲೇ ಇರಲಿ!
ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಿತಿಲೇಶ್ ತಿವಾರಿ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವೇನಿಲ್ಲ, ಅವರು ನಮ್ಮ ಮನೆಯಲ್ಲಿ ಇರಲಿ, ಅವರು ನಮ್ಮ ಮನೆತನ ಹಾಗೂ ಸಮೃದ್ಧಿಯ ಸಂಕೇತ. ಹೀಗಾಗಿ ಅವರು ಮನೆ ಬಿಟ್ಟು ಹೊರಗೆ ಹೋಗುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಿತಿಲೇಶ್ ತಿವಾರಿ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಹರಿಹಾಯ್ದಿದ್ದಾರೆ. ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿವಿ, ಇವರೇ ನೋಡಿ ಬಿಹಾರದ ನೂತನ ಶಿಕ್ಷಣ ಸಚಿವ ಎಂದು ವ್ಯಂಗ್ಯವಾಡಿದ್ದಾರೆ.
ಮಿತಿಲೇಶ್ ತಿವಾರಿ ಪೂಜೆ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಆರ್ಜೆಡಿ ಪಕ್ಷ, ಈ ಮಿತಿಲೇಶ್ ತಿವಾರಿ ಹಾಗೂ ನಿತೀಶ್ ಕುಮಾರ್ ಜೋಡಿ ಬಿಹಾರದ ಶಿಕ್ಷಣ ವ್ಯವಸ್ಥೆಯನ್ನೇ ಹಾಳುಗೆಡವಿದೆ. ಈ ಶಿಕ್ಷಣ ಮಂತ್ರಿ ಹೋಮ-ಹವನಗಳ ಮೂಲಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲಿದ್ದಾನೆ ಎಂದು ಕೌಂಟರ್ ಕೊಟ್ಟಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದಂತೆ ನೆಟ್ಟಿಗರ ನೆತ್ತಿ ಗರಂ ಆಗಿದೆ. ರಾಜ್ಯದ ಶಿಕ್ಷಣ ಸಚಿವನ ಮನಸ್ಥಿತಿ ಈ ರೀತಿಯಲ್ಲಿದ್ದರೆ, ಆ ರಾಜ್ಯದ ಶಿಕ್ಷಣದ ಮಟ್ಟ ಹೇಗಿರಬಹುದು? ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ.
ಸ್ತ್ರೀ ವಿರೋಧಿ ಸಚಿವನಿಗೆ ಧಿಕ್ಕಾರ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದರೆ, ಕೂಡಲೇ ಇವನನ್ನು ಪಕ್ಷದಿಂದ ವಜಾ ಮಾಡಿ ಎಂದು ಇನ್ನು ಕೆಲವರು ಆಗ್ರಹಿಸಿದ್ದಾರೆ, (ಏಜನ್ಸೀಸ್).