Chennai Metro advertisement controversy 
ದೇಶ

'ಗರ್ಲ್‌ಫ್ರೆಂಡ್ ಮೇ ಗೀವ್ಸ್ 0% ಇಂಟರೆಸ್ಟ್'; Chennai Metro ರೈಲಿನ ಮೇಲೆ ವಿವಾದಾತ್ಮಕ ಪೋಸ್ಟರ್​, ಡಿಎಂಕೆ ಸಂಸದೆ ಫುಲ್ ಗರಂ

ಪ್ರಮುಖ ಮುಖ್ಯಾಂಶಗಳು

  • ಚೆನ್ನೈನ ಮೆಟ್ರೋ ರೈಲಿನ ಮೇಲೆ ಗರ್ಲ್​ಫ್ರೆಂಡ್​ ಶೂನ್ಯ ಬಡ್ಡಿ ಕೊಡಬಹುದು ಎನ್ನುವ ಪೋಸ್ಟರ್.​
  • ತಮಿಳುನಾಡಿನ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಎಫ್​ಡಿ ಹೂಡಿಕೆ ಪೋಸ್ಟರ್​.
  • ಹೆಣ್ಣನ್ನು ಕೀಳಾಗಿ, ವಸ್ತುವಿನಂತೆ ತೋರ್ಪಡಿಸಲಾಗುತ್ತಿದೆ ಎಂದು ಡಿಎಂಕೆ ಸಂಸದೆ ಕಿಡಿ.
ಚೆನ್ನೈ: ನಿಮ್ಮ ಗರ್ಲ್​ಫ್ರೆಂಡ್​ ಶೂನ್ಯ ಬಡ್ಡಿ ಕೊಡಬಹುದು. ಆದರೆ ಎಫ್​​ಡಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇ.14.40 ಬಡ್ಡಿ ಸಿಗುವುದು ಖಚಿತ ಎಂದು ಚೆನ್ನೈನ ಮೆಟ್ರೋ ರೈಲಿನ ಮೇಲೆ ಅಂಟಿಸಲಾಗಿರುವ ಪೋಸ್ಟರ್​ ಸದ್ಯ ತಮಿಳುನಾಡಿನ ರಾಜಕೀಯದಲ್ಲಿ ತಲ್ಲಣವನ್ನು ಸೃಷ್ಟಿ ಮಾಡಿದೆ.
ಮೆಟ್ರೋ ರೈಲಿಗೆ ಅಂಟಿಸಲಾದ ಪೋಸ್ಟರ್​​​ ಫೋಟೋವನ್ನು ಎಕ್ಸ್​ನಲ್ಲಿ ಡಿಎಂಕೆ ಸಂಸದೆ ತಮಿಳಚಿ ತಂಗಪಾಂಡಿಯನ್(ಟಿ ಸುಮತಿ) ಹಂಚಿಕೊಂಡು ಕಿಡಿಕಾರಿದ್ದಾರೆ. ಮಹಿಳೆಯರನ್ನು ಕೀಳಾಗಿ ಕಾಣುವ ಮತ್ತು ವಸ್ತುವಂತೆ ತೋರ್ಪಡಿಸುವ ಜಾಹೀರಾತು ತೆರವು ಮಾಡಬೇಕು ಎಂದು ಕಿಡಿಕಾರಿದರು.

ಪೋಸ್ಟರ್​ನಲ್ಲಿ ಏನಿದೆ, ಯಾರಿಗೆ ಸೇರಿದ್ದು?

ಗೆಳತಿ ಶೂನ್ಯ ಬಡ್ಡಿಯನ್ನು ನೀಡಬಹುದು..ಎಫ್​ಡಿಗೆ ನಿಮ್ಮ ಹಣ ಹಾಕಿ ಇದು ನಿಮಗೆ ಶೇ..14.40 ಬಡ್ಡಿ ಕೊಡುತ್ತದೆ ಎಂದು ಹಾಕಿರುವ ಜಾಹೀರಾತು ಪೋಸ್ಟರ್​ 'THECOS' ಎಂಬ ಸಹಕಾರಿ ಕ್ರೆಡಿಟ್ ಸೊಸೈಟಿಗೆ ಸೇರಿದೆ.

ಸಂಸದೆ ಪೋಸ್ಟ್​ನಲ್ಲಿ ಏನಿದೆ?

'ಚೆನ್ನೈ ಮೆಟ್ರೋದಲ್ಲಿ ದಿನಕ್ಕೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಆದರೆ, ಇಲ್ಲಿ ಮಹಿಳೆಯರನ್ನು ಕೀಳಾಗಿ ಕಾಣುವ, ಅವರನ್ನು ವಸ್ತುಗಳಂತೆ ಬಿಂಬಿಸುವ ಜಾಹೀರಾತು ಪ್ರದರ್ಶಿಸಿರುವುದು ಆಘಾತಕಾರಿಯಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಜಾಹೀರಾತುಗಳು ಮಹಿಳೆಯರ ಗೌರವವನ್ನು ಕಾಪಾಡುವಂತಿರುವುದು ಅತ್ಯಗತ್ಯ'.
ಮುಂದುವರೆದು,'ಇಂತಹ ಜಾಹೀರಾತಿಗೆ ಚೆನ್ನೈ ಮೆಟ್ರೋ ರೈಲು ಆಡಳಿತ ಮಂಡಳಿಯು ಹೇಗೆ ಅನುಮತಿ ನೀಡಿತು ಎಂಬುದು ಪ್ರಶ್ನಾರ್ಹವಾಗಿದೆ. ಈ ಜಾಹೀರಾತನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಜಾಹೀರಾತುಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ. ಪ್ರತಿನಿತ್ಯ ಚೆನ್ನೈ ಮೆಟ್ರೋವನ್ನು ಹಲವರು ಬಳಕೆ ಮಾಡುತ್ತಾರೆ. ಇಂತಹ ಜಾಹೀರಾತು ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ' ಎಂದು ಡಿಎಂಕೆ ಸಂಸದೆ ತಮಿಳಚಿ ತಂಗಪಾಂಡಿಯನ್(ಟಿ ಸುಮತಿ) ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

ಎಐಎಡಿಎಂಕೆ ವಕ್ತಾರ ಕಿಡಿ

ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಈ ಪೋಸ್ಟರ್​ ವಿರುದ್ಧ ಕಿಡಿಕಾರಿದ್ದಾರೆ. 'ಇಂತಹ ಜಾಹೀರಾತಿಗೆ ಅನುಮತಿ ಕೊಟ್ಟವರ ವಿರುದ್ಧ ಕಾನೂನು ಕ್ರಮವಾಗಬೇಕು' ಎಂದು ಆಗ್ರಹಿಸಿದ್ದಾರೆ. 'ಜಾಹೀರಾತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದ ಮಾತ್ರಕ್ಕೆ..ಲಿಂಗದ ಆಧಾರ ಮೇಲೆ ಯಾರನ್ನಾದರೂ ಕೀಳಾಗಿ ಕಾಣುವ ಮಟ್ಟಕ್ಕೆ ಇಳಿಯೋದು ಸರಿಯಲ್ಲ' ಎಂದು ಹೇಳಿದರು.

'ನೀವು ನಿಮ್ಮ ಗ್ರಾಹಕರನ್ನು ಸೆಳೆಯುವ ಸಲುವಾಗಿ ಬೇರೆಯವರನ್ನು ಕೀಳಾಗಿ ತೋರ್ಪಡಿಸಿ..ಲಿಂಗಬೇಧ ಅಥವಾ ಅವರನ್ನು ಕೆಟ್ಟದಾಗಿ ಚಿತ್ರಿಸಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವುದು ಸರಿಯಾದ ವಿಧಾನವಲ್ಲ' ಎಂದು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಗುಡುಗಿದರು, (ಏಜೆನ್ಸೀಸ್)