ಉತ್ತರ ಪ್ರದೇಶ: ಪ್ರೀತಿ ಎಂಬುದು ಎಂತಹ ಸಾಹಸಕ್ಕೂ ಪ್ರೇರೇಪಿಸುತ್ತದೆ ಎಂಬ ಮಾತಿದೆ. ಅದೇ ರೀತಿ ಇಲ್ಲೊಬ್ಬ ಯುವತಿ ತನ್ನ ಗೆಳೆಯ ಈಗಾಗಲೇ ಮದುವೆಯಾಗಿದ್ದರೂ ಸಹ ಅವನನ್ನೇ ವಿವಾಹವಾಗಬೇಕು ಎಂದು ಪಟ್ಟು ಹಿಡಿದ ಮೊಬೈಲ್ ಟವರ್ ಹತ್ತಿ (Climbs tower) ಹುಚ್ಚಾಟ ಮೆರೆದ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.
ಘಟನೆ ಏನು?
ಯುವತಿಯೊಬ್ಬಳು ಡಿಯೋರಿಯಾ ಗ್ರಾಮದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಯುವಕನಿಗೆ ಈಗಾಗಲೇ ಮದುವೆಯಾಗಿದೆ. ಈ ಸತ್ಯ ತಿಳಿದಿದ್ದರೂ ಸಹ ಆತನನ್ನೇ ವರಿಸಬೇಕು ಎಂದು ಹಠ ಹಿಡಿದ ಯುವತಿಯು ಮೊಬೈಲ್ ಟವರ್ ಹತ್ತಿ ಗೆಳೆಯನ ಹೆಸರನ್ನು ಜೋರಾಗಿ ಕರೆಯಲು ಆರಂಭಿಸಿದ್ದಾಳೆ.
ಯುವತಿ ಕೂಗುವುದನ್ನು ಕೇಳಿಸಿಕೊಂಡ ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಜಮಾಯಿಸಿದರು. ನಂತರ ಕೆಳಗೆ ಬರುವಂತೆ ಎಷ್ಟೇ ಮನವಿ ಮಾಡಿದರೂ ಆಕೆ ಕಿವಿಗೊಡಲಿಲ್ಲ. ನನ್ನ ಪ್ರಿಯಕರ ಬಂದು ನನ್ನನ್ನು ಮದುವೆಯಾಗುತ್ತೇನೆ ಎನ್ನದಿದ್ದರೆ, ನಾನು ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದರು. ಯುವತಿಯ ಹುಚ್ಚಾಟವನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಮನವೊಲಿಸಿ ಯುವತಿಯನ್ನು ಕೆಳಗೆ ಇಳಿಸಿದರು. ನಂತರ ಅವರಿಬ್ಬರ ಕುಟುಂಬಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು ಕೇವಲ ತನ್ನ ಹಠ ಸಾಧನೆಗಾಗಿ ಇಂತಹ ಪ್ರಾಣಾಪಾಯಕಾರಿ ಸಾಹಸಕ್ಕೆ ಮುಂದಾಗುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).