ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್( Phone ) ಕೇವಲ ಅಗತ್ಯವಷ್ಟೇ ಅಲ್ಲ, ಒಂದು ಚಟವಾಗಿ ಮಾರ್ಪಟ್ಟಿದೆ. ಅದರಲ್ಲೂ ಮಕ್ಕಳು ಗಂಟೆಗಟ್ಟಲೆ ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಮತ್ತು ಕಾರ್ಟೂನ್ ನೋಡುವುದರಲ್ಲಿ ಮಗ್ನರಾಗಿರುತ್ತಾರೆ. ಆದರೆ, ಇದೇ ಫೋನ್ ಮಕ್ಕಳ ಪಾಲಿಗೆ ಮೃತ್ಯುಪಾಶವಾಗಬಲ್ಲದು ಎಂಬುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಕಣ್ಣಮುಂದಿನ ಸಾಕ್ಷಿಯಾಗಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಆಘಾತಕಾರಿ ದೃಶ್ಯದಲ್ಲಿ, ಪುಟ್ಟ ಬಾಲಕಿಯೊಬ್ಬಳು ಸೋಫಾದ ಮೇಲೆ ಆರಾಮವಾಗಿ ಕುಳಿತು ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿರುವುದನ್ನು ಕಾಣಬಹುದು. ಮಗು ತನ್ನ ಲೋಕದಲ್ಲೇ ಮಗ್ನವಾಗಿರುವಾಗ, ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಫೋನ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿದ ತಕ್ಷಣ, ಗಾಬರಿಗೊಂಡ ಬಾಲಕಿ ಕಿರುಚುತ್ತಾ ಫೋನ್ ಎಸೆದು ಅಲ್ಲಿಂದ ಓಡಿ ಹೋಗಿದ್ದಾಳೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ವೈರಲ್ ವಿಡಿಯೋ...!
X (ಹಿಂದಿನ ಟ್ವಿಟ್ಟರ್) ವೇದಿಕೆಯಲ್ಲಿ @55MTQ_ ಎಂಬ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಕೆಲವರು ಇದು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ವಿಡಿಯೋ ಎಂದು ವಾದಿಸುತ್ತಿದ್ದಾರೆ.ಇನ್ನು ಕೆಲವರು ಕೊಠಡಿಯಲ್ಲಿರುವ ಪೀಠೋಪಕರಣ ಮತ್ತು ಸ್ಫೋಟದ ತೀವ್ರತೆಯನ್ನು ಕಂಡು ಇದು ನೈಜ ಘಟನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಸ್ಫೋಟಕ್ಕೆ ಕಾರಣಗಳೇನು?
ಬ್ಯಾಟರಿ ಓವರ್‌ಹೀಟಿಂಗ್: ದೀರ್ಘಕಾಲದವರೆಗೆ ಗೇಮ್ ಆಡುವುದು ಅಥವಾ ವಿಡಿಯೋ ನೋಡುವುದರಿಂದ ಬ್ಯಾಟರಿ ಬಿಸಿಯಾಗುತ್ತದೆ.
ಚಾರ್ಜಿಂಗ್ ಮಾಡುವಾಗ ಬಳಕೆ: ಚಾರ್ಜಿಂಗ್‌ಗೆ ಹಾಕಿರುವಾಗಲೇ ಫೋನ್ ಬಳಸುವುದರಿಂದ ಬ್ಯಾಟರಿ ಮೇಲೆ ಒತ್ತಡ ಬಿದ್ದು ಸ್ಫೋಟ ಸಂಭವಿಸಬಹುದು.
ಕಳಪೆ ಗುಣಮಟ್ಟದ ಚಾರ್ಜರ್: ಅಧಿಕೃತ ಚಾರ್ಜರ್ ಬಳಸದೆ ಸ್ಥಳೀಯ ಕಂಪನಿಗಳ ಕೇಬಲ್ ಬಳಸುವುದು ಅಪಾಯಕಾರಿ,(ಏಜೆನ್ಸೀಸ್).