Marriage Proposal ಸಾಂದರ್ಭಿಕ ಚಿತ್ರ
ನವದೆಹಲಿ: ವರ್ಷಕ್ಕೆ ಬರೋಬ್ಬರಿ 40 ಲಕ್ಷ ರೂಪಾಯಿ ವೇತನ ಹೊಂದಿರುವ ನೋಡಲು ಸುಂದರವಾಗಿರುವ ಮತ್ತು ಉತ್ತಮ ಕುಟುಂಬದ ಹಿನ್ನಲೆಯುಳ್ಳ ವರನೊಬ್ಬನ ಮದುವೆ ಪ್ರಸ್ತಾಪವನ್ನು ಯುವತಿಯೊಬ್ಬಳು ನೇರವಾಗಿ (Marriage Proposal) ತಿರಸ್ಕರಿಸಿದ್ದಾಳೆ. ಅದಕ್ಕೆ ಆಕೆ ನೀಡಿದ ಕಾರಣ ಕೇಳಿದ್ರೆ ಶಾಕ್ ಆಗೋದಂತೂ ಗ್ಯಾರಂಟಿ.
ಏನಿದು ವಿಚಿತ್ರ ಘಟನೆ?
ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಆರೂಹಿ ರೆಡ್ಡಿ ಎಂಬ ಹೆಸರಿನ ಖಾತೆಯಿಂದ ಪೋಸ್ಟ್ ಹಂಚಿಕೊಂಡಿದ್ದು, ನನಗೆ ಇತ್ತೀಚೆಗೆ ಬಂದ ಮದುವೆ ಪ್ರಸ್ತಾಪದಲ್ಲಿ ಹುಡುಗ ಹ್ಯಾಂಡ್‌ಸಮ್ ಆಗಿದ್ದ, 40 ಲಕ್ಷದ ಉತ್ತಮ ಪ್ಯಾಕೇಜ್ ಮತ್ತು ಒಳ್ಳೆಯ ಕುಟುಂಬದ ಹಿನ್ನೆಲೆ ಹೊಂದಿದ್ದರು. ಆದರೆ, ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ರಾಹುಲ್ ಗಾಂಧಿ ಅವರೇ ತನಗೆ ರೋಲ್ ಮಾಡೆಲ್ ಎಂದು ಬರೆದುಕೊಂಡಿದ್ದ ಒಂದೇ ಕಾರಣಕ್ಕೆ ನಾನು ಅವರನ್ನು ರಿಜೆಕ್ಟ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಆದಾಗ್ಯೂ, ಒಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ ಆಗಿ, ಸದಾ ಸೋಲುವ ವ್ಯಕ್ತಿಯನ್ನು ತನ್ನ ರೋಲ್ ಮಾಡೆಲ್ ಎಂದು ಭಾವಿಸುವ ಆತನನ್ನು ನನ್ನ ಜೀವನಸಂಗಾತಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ. ನನಗೆ ಕಳೆದ ತಿಂಗಳಷ್ಟೇ 18 ವರ್ಷ ಪೂರೈಸಿದೆ ಎಂದು ತಿಳಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಈ ಸಿದ್ದಾಂತಕ್ಕೆ ಪರ-ವಿರೋಧ ಚರ್ಚೆಯನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು 40 ಲಕ್ಷ ಪ್ಯಾಕೇಜ್ ರಿಜೆಕ್ಟ್ ಮಾಡೋಕೆ ಎಂಥಾ ರೀಸನ್ ಗುರು! ನಮಗಂತೂ ಆ ತರಹದ ಪ್ರಪೋಸಲ್ ಬಂದ್ರೆ ಕಾಲಿಗೆ ಬಿದ್ದು ಒಪ್ಕೋತಿದ್ವಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಬಳಕೆದಾರ ರಾಹುಲ್ ಗಾಂಧಿ ರೋಲ್ ಮಾಡೆಲ್ ಅಂದಿದ್ದಕ್ಕೆ ಮದುವೆನೇ ಕ್ಯಾನ್ಸಲ್ ಮಾಡ್ಕೊಂಡ್ಲಾ? ಪಾಪ ಆ ಹುಡುಗನ ಪರಿಸ್ಥಿತಿ ನೆನೆದ್ರೆ ಬೇಸರ ಆಗುತ್ತೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೆಲವರು 18 ವರ್ಷಕ್ಕೆ ರಾಜಕೀಯದ ಬಿಸಿ ತಲೆಗೆ ಏರಿದೆ. ಮದುವೆ ಅಂದ್ರೆ ವ್ಯಕ್ತಿತ್ವ ಮತ್ತು ಗುಣ ನೋಡಬೇಕು, ಇಷ್ಟಪಡೋ ನಾಯಕರನ್ನಲ್ಲ. 40 ಲಕ್ಷ ಸಂಪಾದಿಸೋ ಸಾಮರ್ಥ್ಯ ಆ ಹುಡುಗನಲ್ಲಿದೆ. ರಾಜಕೀಯ ಅಭಿಪ್ರಾಯ ಬೇರೆಯಾಗಿದ್ದಕ್ಕೆ ಇಷ್ಟು ದೊಡ್ಡ ಆಫರ್ ಬೇಡ ಅಂದಿದ್ದು ಮೂರ್ಖತನ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).