ಕೇರಳ ಟೆಕ್ಕಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ: ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದ SSLC ವಿದ್ಯಾರ್ಥಿನಿ ನಾಪತ್ತೆ! Girl Missing  
ದೇಶ

ಕೇರಳ ಟೆಕ್ಕಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ: ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದ SSLC ವಿದ್ಯಾರ್ಥಿನಿ ನಾಪತ್ತೆ!

ಪ್ರಮುಖ ಮುಖ್ಯಾಂಶಗಳು

  • ಕೇರಳ ಮೂಲದ ಟೆಕ್ಕಿ ಜಿ.ಎಸ್​. ಶರಣ್ಯ ಪತ್ತೆಯಾದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ನಾಪತ್ತೆ ಪ್ರಕರಣ
  • ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರ ಜಲಪಾತದ ಬಳಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನಾಪತ್ತೆ
  • ಕೇರಳದ ಪಾಲಕ್ಕಾಡ್ ಮೂಲದ ಹತ್ತನೇ ತರಗತಿ ವಿದ್ಯಾರ್ಥಿನಿ ನಂದನಾ ಕಾಣೆಯಾಗಿದ್ದಾರೆ
  • ಪ್ರವಾಸಿ ತಂಡದೊಂದಿಗೆ ಬಂದಿದ್ದ ನಂದನಾ ಕುಟುಂಬದವರ ಕಣ್ಣೆದುರೇ ನಿಗೂಢವಾಗಿ ನಾಪತ್ತೆ
ಚಿಕ್ಕಮಗಳೂರು: ಮಡಿಕೇರಿಯ ತಡಿಯಾಂಡಮೋಲ್‌ ಚಾರಣಕ್ಕೆ ಹೋದ ಸಂದರ್ಭದಲ್ಲಿ ದಾರಿ ತಪ್ಪಿ ನಾಪತ್ತೆಯಾಗಿ ಸುಮಾರು ನಾಲ್ಕು ದಿನಗಳ ಬಳಿಕ ದಟ್ಟ ಅರಣ್ಯದಲ್ಲಿ ಕೇರಳ ಮೂಲದ ಟೆಕ್ಕಿ ಜಿ.ಎಸ್​. ಶರಣ್ಯ ಪತ್ತೆಯಾದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರ ಜಲಪಾತದ ಬಳಿ ಕೇರಳದ ಪಾಲಕ್ಕಾಡ್ ಮೂಲದ ಹತ್ತನೇ ತರಗತಿ ವಿದ್ಯಾರ್ಥಿನಿ ನಂದನಾ ನಾಪತ್ತೆಯಾಗಿದ್ದಾರೆ ( Girl Missing ) .
ಸುಮಾರು 40 ಮಂದಿಯ ಪ್ರವಾಸಿ ತಂಡದೊಂದಿಗೆ ಬಂದಿದ್ದ ಈ ಬಾಲಕಿ, ಕುಟುಂಬದವರ ಕಣ್ಣೆದುರೇ ನಿಗೂಢವಾಗಿ ಮಾಯವಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಅಖಾಡಕ್ಕಿಳಿದ ಪೊಲೀಸ್ ಮತ್ತು ಅರಣ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿಗಳು ಮಂಗಳವಾರ ಮಧ್ಯರಾತ್ರಿ 1 ಗಂಟೆಯವರೆಗೆ ಬೆಟ್ಟದ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ದಟ್ಟವಾದ ಮಂಜು ಮತ್ತು ಕತ್ತಲೆಯ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಯಾವುದೇ ಸುಳಿವು ಸಿಗದೆ ತಂಡಗಳು ವಾಪಸ್ಸಾಗಿದ್ದವು.
ಬುಧವಾರ ಮುಂಜಾನೆಯಿಂದಲೇ ಶೋಧ ಕಾರ್ಯ ಮತ್ತಷ್ಟು ಬಿರುಸುಗೊಂಡಿದ್ದು, ಕಾಡಿನ ದುರ್ಗಮ ಹಾದಿಗಳಲ್ಲಿ ಬಾಲಕಿಯನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಈಗ ಆಧುನಿಕ ಡೋನ್‌ ಕ್ಯಾಮೆರಾಗಳನ್ನು ಬಳಸುತ್ತಿವೆ. ಪಶ್ಚಿಮ ಘಟ್ಟದ ಕಡಿದಾದ ಬೆಟ್ಟಗಳು ಮತ್ತು ದಟ್ಟಾರಣ್ಯದ ಸವಾಲುಗಳ ನಡುವೆಯೂ ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರವಾಸಕ್ಕೆಂದು ಬಂದು ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಬಾಲಕಿಯ ಪತ್ತೆಗಾಗಿ ಸರ್ವ ಪ್ರಯತ್ನಗಳು ನಡೆಯುತ್ತಿವೆ.

ಟೆಕ್ಕಿ ಶರಣ್ಯ ಪ್ರಕರಣವೇನು?

ಅಂದಹಾಗೆ, 36 ವರ್ಷದ ಶರಣ್ಯ ಓರ್ವ ಐಟಿ ಉದ್ಯೋಗಿ. ಈಕೆ ಕೇರಳದ ಕೋಯಿಕ್ಕೋಡ್​ ಜಿಲ್ಲೆಯ ನಾಡಪುರಂ ನಿವಾಸಿ. ಕೊಡಗಿನಲ್ಲಿರುವ ಅತಿ ಎತ್ತರದ ತಡಿಯಾಂಡಮೋಲ್‌ ಶಿಖರಕ್ಕೆ ಚಾರಣಕ್ಕೆಂದು ಏಪ್ರಿಲ್​ 2ರಂದು ತೆರಳಿದ್ದಳು. ಶಿಖರದ ತುತ್ತ ತುದಿಯನ್ನು ಏರಿ, ವಾಪಸ್​ ಕೆಳಗೆ ಇಳಿಯುವಾಗ ಚಾರಣಕ್ಕೆ ಬಂದಿದ್ದ ಗುಂಪಿನಿಂದ ಬೇರ್ಪಟ್ಟು, ದಾರಿತಪ್ಪಿದ್ದಳು. ಮರಳಿ ತನ್ನ ದಾರಿಯನ್ನು ಕಂಡುಕೊಂಡು ತನ್ನ ಚಾರಣ ಗುಂಪನ್ನು ಸೇರಲು ಸಾಕಷ್ಟು ಪ್ರಯತ್ನ ಮಾಡಿದಳು. ಆದರೆ, ಆ ಪ್ರಯತ್ನ ವಿಫಲವಾಯಿತು. ಅಂತಿಮವಾಗಿ ಕಾಡಿನಲ್ಲಿ ದಾರಿತಪ್ಪಿದ ಶರಣ್ಯ ಸುಮಾರು ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಸಿಲುಕಿದಳು. ಆ ನಾಲ್ಕು ದಿನ ಕೇವಲ ಒಂದು ನೀರಿನ ಬಾಟಲಿನ ಸಹಾಯದಿಂದ ಬದುಕುಳಿದಳು. ಸಹಾಯಕ್ಕಾಗಿ ಸಂಪರ್ಕಿಸೋಣ ಅಂದರೆ ಮೊಬೈಲ್​ ಬ್ಯಾಟರಿ ಕೂಡ ಡೆಡ್​ ಆಗಿತ್ತು. ವಿಧಿ ಇಲ್ಲದೇ ರಕ್ಷಣೆ ಮಾಡುತ್ತಾರೆ ಅನ್ನೋ ಭರವಸೆಯಲ್ಲೇ ಆಕೆ ಕಾಡಿನಲ್ಲೇ ಕಾಲ ಕಳೆದಳು. ಸುಮಾರು ನಾಲ್ಕು ದಿನಗಳ ಬಳಿಕ ಆಕೆ ಪತ್ತೆಯಾದಳು. ಇದೀಗ ಕೇರಳ ಮೂಲದ ಮತ್ತೊಬ್ಬ ಹುಡುಗಿ ಕಾಣೆಯಾಗಿದ್ದಾಳೆ.