Ghee Tanker flip (ಚಿತ್ರ X)
ಕಡಪ: ತಿರುಮಲ ದೇವಸ್ಥಾನಕ್ಕೆ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್ (Ghee Tanker flip) ಭಾನುವಾರ ರಾತ್ರಿ (ಮಾ.08) ವೈಎಸ್‌ಆರ್ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆ ಬಳಿ ಅಪಘಾತಕ್ಕೀಡಾಗಿದ್ದು, ಸಾವಿರಾರು ಲೀಟರ್ ತುಪ್ಪ ರಸ್ತೆ ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಭಾನುವಾರ ರಾತ್ರಿ ಪುಣೆಯಿಂದ ತಿರುಮಲಕ್ಕೆ ಪ್ರಯಾಣಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಟ್ಯಾಂಕರ್ ಉರುಳಿಬಿದ್ದ ರಭಸಕ್ಕೆ ಅದರ ಮೇಲ್ಭಾಗ ಜಖಂಗೊಂಡಿದ್ದು, ರಸ್ತೆ ತುಂಬಾ ತುಪ್ಪ ಹರಿಯಲಾರಂಭಿಸಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಸ್ಥಳೀಯರು ಬಕೆಟ್ ಮತ್ತು ಪಾತ್ರೆಗಳೊಂದಿಗೆ ಆಗಮಿಸಿದ್ದು, ವಾಹನದಿಂದ ಸೋರುತ್ತಿರುವ ತುಪ್ಪವನ್ನು ಸಂಗ್ರಹಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿರುವುದನ್ನು ವಿಡಿಯೋವೊಂದು ತೋರಿಸಿದೆ.
ಪರಿಸ್ಥಿತಿ ಉಲ್ಬಣವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಜನಸಂದಣಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ (ಏಜೆನ್ಸೀಸ್).