ದೆಹಲಿ ಸರ್ಕಾರಿ ಉದ್ಯೋಗಿ ಶಶಾಂಕ್ ಕಂಥಾರಿಯಾ ಮೇಲೆ ಚಾಕುವಿನಿಂದ ದಾಳಿ
ಪತ್ನಿ ಪ್ರಿಯಾ (32) ಹಾಗೂ ಜಿಮ್ ಟ್ರೈನರ್ ಪ್ರತಾಪ್ ಸಿಂಗ್ (30) ಬಂಧನ.
ಪತ್ನಿಗಿದ್ದ ಅನೈತಿಕ ಸಂಬಂಧ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಕೊಲೆಗೆ ಸಂಚು.
ಮಗಳು ಅಳಲು ಆರಂಭಿಸಿದ್ದರಿಂದ ನೆರೆಹೊರೆಯವರು ಸೇರಿ ಶಶಾಂಕ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ನವ ದೆಹಲಿ: ಜಿಮ್ ಟ್ರೈನರ್ ಜೊತೆಗಿನ ಪತ್ನಿಯ ಅನೈತಿಕ ಸಂಬಂಧವನ್ನು ಪತ್ತೆ ಹಚ್ಚಿದ ಪತಿ, ಬೇರೆಡೆಗೆ ಶಿಫ್ಟ್ ಆಗಲು ನಿರ್ಧರಿಸಿದ್ದ. ಇದರಿಂದ ಸಿಟ್ಟಾದ ಪ್ರೇಮಿಗಳು.. ಆತನ ಕೊಲೆಗೆ ಯತ್ನಿಸಿದ್ದ ಘಟನೆ ದೆಹಲಿಯ ವಸುಂಧರಾದಲ್ಲಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 26 ರ ಬೆಳಿಗ್ಗೆ ದೆಹಲಿ ಬಳಿಯ ವಸುಂಧರಾದ ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವಸುಂಧರಾ ಸೆಕ್ಟರ್ -1 ರಲ್ಲಿರುವ ಜಾಗೃತಿ ನಿವಾಸಿ ಕಲ್ಯಾಣ ಸಂಘ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಪತ್ನಿ ಪ್ರಿಯಾ (32) ಹಾಗೂ ಜಿಮ್ ಟ್ರೈನರ್ ಪ್ರತಾಪ್ ಸಿಂಗ್ (30) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಗಂಭೀರ ಗಾಯಗೊಂಡ 35 ವರ್ಷದ ದೆಹಲಿ ಸರ್ಕಾರಿ ಉದ್ಯೋಗಿ ಶಶಾಂಕ್ ಕಂಥಾರಿಯಾ ಐಸಿಯುವಿನಲ್ಲಿದ್ದಾರೆ.
ಶಶಾಂಕ್ ಮೂಲತಃ ಝಾನ್ಸಿಯ ಪುರಾಣಿ ಪಸಾರತ್ ಪ್ರದೇಶದವರು. ನಾಲ್ಕು ವರ್ಷದ ಹಿಂದೆ ಪ್ರಿಯಾ ಶರ್ಮಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಶಶಾಂಕ್ ಜೊತೆಗೆ ಪ್ರಿಯಾಳದು ಎರಡನೇ ಮದುವೆ. ಇಬ್ಬರು ದೆಹಲಿಯಲ್ಲಿ ಹಿರಿಯ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಅ.26ರ ಬೆಳಿಗ್ಗೆ ವಸುಂಧರಾದ ತಮ್ಮ ಮನೆಯಲ್ಲಿ ದೆಹಲಿ ಸರ್ಕಾರದ ಹಿರಿಯ ವೃತ್ತಿಪರ ಲೆಕ್ಕಿಗರಾದ 35 ವರ್ಷದ ಶಶಾಂಕ್ ಕಂಥಾರಿಯಾ ಅವರು ತಮ್ಮ ಪುಟ್ಟ ಮಗಳ ಪಕ್ಕದಲ್ಲಿ ಮಲಗಿದ್ದರು. ಅವರ ಪತ್ನಿ ಪ್ರಿಯಾ ಶರ್ಮಾ ಜಿಮ್ಗೆ ಹೋಗಲು ಮನೆಯಿಂದ ಹೊರಟಿದ್ದರು. ಈ ವೇಳೆ ಜಿಮ್ ಟ್ರೈನರ್ ಬಾಗಿಲು ತೆರೆದು ಒಳ ನುಗ್ಗಿ ಅವರ ಮೇಲೆ ಪದೇ ಪದೇ ಚಾಕುವಿನಿಂದ ಇರಿದಿದ್ದಾನೆ. ಒಂದೆಡೆ ತೀವ್ರವಾಗಿ ಗಾಯಗೊಂಡ ಶಶಾಂಕ್ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದರು. ಅಲ್ಲದೇ ಮಗಳು ಸಹ ಜೋರಾಗಿ ಅಳಲು ಆರಂಭಿಸಿದಾಗ, ದಾಳಿಕೋರ ಓಡಿಹೋದ.
ನೆರೆಹೊರೆ ಜನರು ಎಚ್ಚರಗೊಂಡು ಧಾವಿಸಿದರು. ಅದೃಷ್ಟವಶಾತ್ ಮಗುವಿಗೆ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿ ಪಾರಾಗಿದೆ. ಗಾಯಗೊಂಡ ಶಶಾಂಕ್ ಅವರನ್ನು ತಕ್ಷಣವೇ ಹತ್ತಿರದ ಯಶೋದಾ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರತಾಪ್ ಸಿಂಗ್ "ಫಿಟ್ನೆಸ್ ಹೆಡ್ಕ್ವಾರ್ಟರ್ಸ್" ಜಿಮ್ನಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದ. ಪ್ರಿಯಾ ಅದೇ ಜಿಮ್ಗೆ ಏಳೆಂಟು ತಿಂಗಳಿನಿಂದ ತೆರಳುತ್ತಿದ್ದಳು. ಇಬ್ಬರು ಪರಿಚಿತರಾದರು. ವಾಟ್ಸಾಪ್ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಜೊತೆಗೆ ಮದುವೆಯಾಗಲು ಬಯಸಿದ್ದರು ಎಂದರು ಪೊಲೀಸರು.
ಈ ಇಬ್ಬರ ಪ್ರೇಮ ಸಂಬಂಧದ ಬಗ್ಗೆ ಮಾಹಿತಿ ಪಡೆದುಕೊಂಡ ಶಶಾಂಕ್ ದೀಪಾವಳಿ ಬಳಿಕ ಮನೆ ಶಿಫ್ಟ್ ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದ್ದರು. ಅಕ್ಟೋಬರ್ 25 ರ ಬೆಳಿಗ್ಗೆ ಓಡಿಹೋಗಲು ನಿರ್ಧರಿಸಿಕೊಂಡಿದ್ದ ಪ್ರತಾಪ್ ಮತ್ತು ಪ್ರಿಯಾ ಅದೇ ವೇಳೆ ಆತನನ್ನು ಕೊಲೆ ಮಾಡಲು ಯೋಜನೆ ರೂಪಿಸಿದರು. ಮರುದಿನ, ಪ್ರತಾಪ್ ಚಾಕುವಿನೊಂದಿಗೆ ಪ್ರಿಯಾಳ ಮನೆಗೆ ಹೋದನು. ಪ್ರಿಯಾ ಗೇಟ್ ಬೀಗ ಹಾಕದೆ ಇದ್ದ ಕಾರಣ ಅವನು ಮನೆಗೆ ನುಗ್ಗಿ ಶಶಾಂಕ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು ಎಂದು ಹೇಳಿದರು.
ಘಟನೆ ನಡೆದ ಹಿಂದಿನ ರಾತ್ರಿ ಕೊಲೆ ಬಗ್ಗೆ ವಾಟ್ಸಾಪ್ನಲ್ಲಿ ಪ್ರಿಯಾ ಮತ್ತು ಪ್ರತಾಪ್ ಮಾತನಾಡಿಕೊಂಡಿದ್ದರು. ಪ್ರಿಯಾ ಶಶಾಂಕ್ ಕೊಲೆಗೆ ಬೇಡಿಕೆಯಿಟ್ಟಿದ್ದ ಹಿನ್ನೆಲೆ, ಈ ಕೊಲೆಯನ್ನು ಮಾಡಲು ಪ್ರತಾಪ್ ಯತ್ನಿಸಿದ್ದ ಎನ್ನಲಾಗಿದೆ. ಪ್ರಿಯಾ ಕೆಲವೊಮ್ಮೆ ಹುಷಾರಿಲ್ಲ ಎಂದು ಹೇಳಿ ಮನೆಯಲ್ಲಿಯೇ ಇರುತ್ತಿದ್ದಳು. ಶಶಾಂಕ್ ಕಚೇರಿಗೆ ಹೋದ ನಂತರ, ಅವಳು ಪ್ರತಾಪ್ನನ್ನು ಆಹ್ವಾನಿಸುತ್ತಿದ್ದಳು ಎನ್ನಲಾಗಿದೆ.
ಶಶಾಂಕ್ ಅವರ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರತಾಪ್ ಸಿಂಗ್ ಮತ್ತು ಪ್ರಿಯಾ ಶರ್ಮಾ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಲಾಗಿದೆ, (ಏಜೆನ್ಸೀಸ್).