ಗಾಜೀಯಾಬಾದ್: ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ ಎಂಬ ಸುದ್ದಿ ತಿಳಿದ ಪ್ರಿಯಕರ, ಆಕೆಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಗಾಜೀಯಾಬಾದ ಜಿಲ್ಲೆಯ ನಂಗ್ಲಾಬಾರ್ನಲ್ಲಿ ನಡೆದಿದೆ.
28 ವರ್ಷದ ಪ್ರದೀಪ್ ಕುಮಾರ ಎಂಬಾತ, 22 ವರ್ಷದ ಯುವತಿಯನ್ನು ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ, ಆದರೆ ಆಕೆಯ ಮದುವೆ ಬೇರೊಬ್ಬನೊಂದಿಗೆ ನಿಶ್ಚಯವಾಗಿದೆ ಎಂದು ತಿಳಿದ ಪ್ರೇಮಿ ಪ್ರದೀಪ್, ಅವಳ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ದಾಳಿಗೊಳಗಾದ ಯುವತಿ ಕುಸಿದು ಬಿದ್ದಿದ್ದಾಳೆ, ಅವಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಆಕೆಯ ಪ್ರಿಯಕರ ಹಾರಿಸಿದ ಗುಂಡು ನೇರವಾಗಿ ಯುವತಿಯ ತಲೆಗೆ ತಗುಲಿದ್ದರಿಂದ ಮರಣ ಹೊಂದಿದ್ದಾಳೆ ಎಂದು ವೈಧ್ಯಕೀಯ ಮೂಲಗಳು ತಳಿಸಿದ್ದು, ಯುವತಿಯು ಎಂಎಸ್ಸಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು ಮದುವೆ ನಿಶ್ಚಯವಾದ ದಿನದಿಂದ ಪ್ರದೀಪ್ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದಳು ಎಂದು ತಿಳಿದುಬಂದಿದೆ.
ಪೊಲೀಸರು ಹೇಳಿದ್ದೇನು..?
ಪ್ರಿಯಕರ ಪ್ರದೀಪ್ ಆಕೆಯ ಮೇಲೆ ತುಂಬಾ ಹಣ ಖರ್ಚು ಮಾಡಿದ್ದು, ಅವಳ ಮನೆಗೆ ಎಸಿ ಸಹ ಕೊಡಿಸಿದ್ದಾನೆ. ಈಗ ಇದ್ದಕ್ಕಿದ್ದ ಹಾಗೇ ತನ್ನ ಪ್ರೇಯಸಿಯ ಮದುವೆ ಬೇರೆಯವನ ಜೊತೆ ನಿಗದಿ ಆಗಿದೆ ಎಂದು ಸ್ನೇಹಿತರು ಚುಚ್ಚು ಮಾತುಗಳನ್ನಾಡಿದ್ದರಿಂದ ತೀವ್ರ ನೊಂದಿದ್ದ ಪ್ರದೀಪ್ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದು ಪೋಲಿಸ್ ಉಪಆಯುಕ್ತ ಅಮಿತ್ ಸಕ್ಸೆನಾ ತಿಳಿಸಿದ್ದು, ಆರೋಪಿ ಪತ್ತೆ ಮಾಡಲು ಪೋಲಿಸರು ಬಲೆ ಬೀಸಿದ್ದಾರೆ ಎಂದು ತಿಳಿಸಿದರು(ಏಜೆನ್ಸೀಸ್).