ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಭೀಕರ ಅಗ್ನಿ ದುರಂತ
- ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಭೀಕರ ಅಗ್ನಿ ದುರಂತ
- ಗೌರ್ ಗ್ರೀನ್ ಸೊಸೈಟಿಯ ಏಳು ಮಹಡಿಗಳು ಬೆಂಕಿಗೆ ಆಹುತಿ
- 17 ಅಗ್ನಿಶಾಮಕ ವಾಹನಗಳಿಂದ ಮುಂದುವರಿದ ಕಾರ್ಯಾಚರಣೆ
ಗಾಜಿಯಾಬಾದ್: ಇಂದು (ಏ.29) ಬೆಳಿಗ್ಗೆ ಉತ್ತರ ಪ್ರದೇಶದ ಗಾಜಿಯಾಬಾದ್ (Ghaziabad Fire Accident) ನಲ್ಲಿರುವ ಗೌರ್ ಗ್ರೀನ್ ಸೊಸೈಟಿಯ ಡಿ ಟವರ್ ಎಂಬ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಕಟ್ಟಡದ ಹಲವಾರು ಮಹಡಿಗಳಿಗೆ ಬೆಂಕಿ ಹರಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದಾರೆ.
ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 8.30 ಕ್ಕೆ ಈ ಘಟನೆ ಸಂಭವಿಸಿದ್ದು, ಕಟ್ಟಡದ ಸುಮಾರು ಏಳು ಮಹಡಿಗಳವರೆಗೆ ಬೆಂಕಿ ಆವರಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು ಕಳೆದ 2.5 ಗಂಟೆಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.
ನಾವು ಕೆಲಸ ಮಾಡುತ್ತಿದ್ದೆವೆ
ಮಾಧ್ಯಮದವರೊಂದಿಗೆ ಮಾತನಾಡಿದ ಗಾಜಿಯಾಬಾದಿನ ಅಗ್ನಿಶಾಮಕ ಮುಖ್ಯಸ್ಥ ರಾಹುಲ್ ಪಾಲ್, ಈ ಅಪಾರ್ಟ್ಮೆಂಟ್ಗೆ ಕೇವಲ ಒಂದೇ ವಾಹನ ಪ್ರವೇಶ ಮಾಡಲು ಸಾಧ್ಯವಿರುವ ಕಾರಣ ಅಗ್ನಿಶಾಮಕ ದಳದ ಕೆಲವೇ ವಾಹನಗಳು ಕೆಲಸದಲ್ಲಿ ನಿರತವಾಗಿದೆ. ಆದ್ದರಿಂದ ತ್ವರಿತವಾಗಿ ಬೆಂಕಿ ನಂದಿಸುವ ಕಾರ್ಯ ಸಾಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಆದರೂ ಸಹ 17 ಅಗ್ನಿಶಾಮಕ ವಾಹನಗಳು ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಇಲ್ಲಿವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕಟ್ಟಡದ ಏಳು ಮಹಡಿಗಳಿಗೆ ಬೆಂಕಿ ಹಬ್ಬಿದ್ದು, ಅದನ್ನು ನಮ್ಮ ಸಿಬ್ಬಂದಿಗಳು ನಂದಿಸಲು ಕಾರ್ಯಪ್ರವರ್ತರಾಗಿದ್ದಾರೆಂದು ಹೇಳಿದ್ದಾರೆ. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ತನಿಖೆ ನಂತರ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸೂಚನೆ!
ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆದಷ್ಟು ಬೇಗ ಪರಿಸ್ಥಿತಿಯನ್ನು ಹತೋಟಿಗೆ ತನ್ನಿ ಹಾಗೂ ಯಾವುದೇ ರೀತಿಯ ಸಾವು-ನೋವಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).