- ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ
- ಮೀನಾಕ್ಷಿ ದೇಗಲುದ ಬಳಿಯ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ 17 ವರ್ಷದ ಹುಡುಗನ ಹತ್ಯೆ
- ಸರ್ಕಾರ ಇನ್ನೂ ಗೆಲುವಿನ ಸಂಭ್ರಮಾಚರಣೆಯ ಮೂಡ್‌ನಿಂದ ಹೊರಬಂದಿಲ್ಲ ಎಂದು ಕಿಡಿ
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗಿ 15 ದಿನಕ್ಕೆ ಒಂದು ಅತ್ಯಾಚಾರ ಪ್ರಕರಣ, ಮತ್ತೊಂದು ಕೇಸ್ನಲ್ಲಿ ಅಪ್ರಾಪ್ತ ಬಾಲಕನ ಹತ್ಯೆಯಾಗಿದೆ. ಕಾನೂನು ಸುವ್ಯವಸ್ಥೆ ಹಾಳಾಗಿರುವುದು ಕಾಣುತ್ತಿದ್ದರೂ. ಸಿಎಂ ಜೋಸೆಫ್ ವಿಜಯ್(TamilNadu CM Vijay ) ಅವರ ಸರ್ಕಾರ ಇನ್ನು ಸಂಭ್ರಮದ ಮೂಡ್ನಲ್ಲಿದೆ. ಅದರಿಂದ ಹೊರಬಂದು ಈ ಕಠಿಣ ವಾಸ್ತವ ನೋಡಬೇಕು ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕಿಡಿಕಾರಿದ್ದಾರೆ.
ತಮಿಳುನಾಡಿನಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಆರಂಭದಲ್ಲಿಯೇ ಕಾನೂನು ಸುವ್ಯವಸ್ಥೆಯ ಸವಾಲು ಎದುರಾಗಿದೆ. ಸರ್ಕಾರ ರಚನೆಯಾದ ಕೇವಲ 15 ದಿನಗಳಲ್ಲಿ ಇಬ್ಬರು ಅಪ್ರಾಪ್ತರು ಭೀಕರ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟಿದ್ದಾರೆ. ಇದು ಭಾರಿ ತಲ್ಲಣ ಮೂಡಿಸಿದೆ.
ಅಣ್ಣಾಮಲೈ ಹೇಳಿದ್ದೇನು?
ಲೈಂಗಿಕ ದೌರ್ಜನ್ಯ ಕೋರರು, ಕೊಲೆಗಡುಕರು, ಡ್ರಗ್ ವ್ಯಸನಿಗಳು ಮತ್ತು ಮಾರಾಟಗಾರರಿಗೆ ತಮಿಳುನಾಡಿನಲ್ಲಿ ಉಚಿತವಾಗಿ ಪ್ರವೇಶ ಸಿಗುತ್ತದೆ. ರಾಜ್ಯದಲ್ಲಿ ಇವರಿಗೆ ಆರಾಮಾಗಿ ಎಲ್ಲಾದರೂ ಅಡ್ಡಾಡಲು ಮುಕ್ತ ಅವಕಾಶವಿದೆ. ಪೊಲೀಸರು ಹಳೆಯ ಘಟನೆಗಳಿಂದ ಯಾವುದೇ ಪಾಠ ಕಲಿತಿಲ್ಲ. ಟಿವಿಕೆ ಸರ್ಕಾರವು ಚುನಾವಣೆ ಗೆದ್ದ ಮೂಡ್‌ನಿಂದ ಹೊರಬಂದು, ನೆಲದ ಮೇಲಿನ ಕಠೋರವಾದ ಘಟನೆಗಳನ್ನು ಗಮನಿಸಿ ಕ್ರಮ ಕೈಗೊಳ್ಳಿ ಎಂದು ಅಣ್ಣಾಮಲೈ(Annamalai) ಅವರು ಕಿಡಿಕಾರಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೇ 25 ರಂದು ಮಧುರೈನ ಸುಪ್ರಸಿದ್ಧ ದೇಗುಲವಾದ ಮೀನಾಕ್ಷಿ ಸುಂದರೇಶ್ವರದ ಬಳಿ ಇರುವ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ 17 ವರ್ಷದ ಬಾಲಕನಾದ ಎ.ಗುಬೇಂದ್ರನ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಐವರ ಗ್ಯಾಂಗ್ ಆತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿತ್ತು. ಇನ್ನು ಮೇ.22ರಂದು ಕೊಯಮತ್ತೂರಿನ ಸುಲೂರು ಬಳಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಗಿತ್ತು.
ಸಚಿವೆ ಕೀರ್ತನಾ ಹೇಳಿಕೆ ವಿರುದ್ಧ ಕಿಡಿ
ಅಪ್ರಾಪ್ತ ಬಾಲಕಿ ಹತ್ಯೆ ವಿರುದ್ಧ ಸಚಿವೆ ಕೀರ್ತನಾ ಅವರ ಬಳಿ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಆಡಳಿತಾತ್ಮಕ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡುವುದು ಎಂದು ಹೇಳಿಕೆ ಕೊಟ್ಟು ಜಾರಿ ಕೊಂಡಿದ್ದರು. ಇದು ಬಿಜೆಪಿಗೆ ಬಂಡವಾಳವಾಗಿದ್ದು, ಕೀರ್ತನಾ ಅವರ ನಡೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಸಚಚಿವೆಯೊಬ್ಬರು, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾದ ಘಟನೆ ಬಗ್ಗೆ ಪ್ರಶ್ನೆ ಕೇಳಿದಾಗ ನಕ್ಕಿದ್ದಾರೆ ಎಂದು ಬಿಜೆಪಿ ನಾಯಕ ವಿನೋಜ್ ಪಿ ಸೆಲ್ವಂ ಆರೋಪಿಸಿದರು.
ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ, ತೂತುಕುಡಿ ಪೋಕ್ಸೋ ನ್ಯಾಯಾಲಯವು ಕೇವಲ ಮೂರೇ ತಿಂಗಳಲ್ಲಿ ವಿಚಾರಣೆ ಮುಗಿಸಿ ಆರೋಪಿ ಧರ್ಮ ಮುನಿಸ್ವರನ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು ಶ್ಲಾಘಿಸಿರುವ ಸಿಎಂ ವಿಜಯ್, ನಮ್ಮ ಸರ್ಕಾರದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಅತ್ಯಂತ ವೇಗವಾಗಿ ನ್ಯಾಯ ಒದಗಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿರುವುದು ಸಹ ಆಕ್ಷೇಪಕ್ಕೆ ಕಾರಣವಾಗಿದೆ, (ಏಜೆನ್ಸೀಸ್).