CJP Protest ಚಿತ್ರ Instagram
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳವು ಕೇವಲ ಬ್ಯಾರಿಕೇಡ್‌ಗಳು, ಘೋಷಣೆಗಳು ಮತ್ತು ಪೊಲೀಸರ ಕಣ್ಗಾವಲಿಗೆ ಸೀಮಿತವಾಗಿಲ್ಲ. ರಸ್ತೆಯಲ್ಲಿ ತೀವ್ರ ಉದ್ವಿಗ್ನತೆ ನೆಲೆಸಿದ್ದರೂ, ಮತ್ತೊಂದೆಡೆ ಮೊಬೈಲ್ ಕ್ಯಾಮೆರಾಗಳು ಆನ್ ಆಗಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಶೂಟಿಂಗ್ ಭರದಿಂದ ಸಾಗಿತ್ತು. ಅದಾಗ್ಯೂ, ಕಾಕ್ರೋಚ್ ಜನತಾ ಪಾರ್ಟಿ (CJP Protest) ಆಯೋಜಿಸಿದ್ದ ಈ ಚಟುವಳಿಯಲ್ಲಿ ದೇಶದ ಜೆನ್ ಝಿ ಯುವಜನತೆ ತಮ್ಮದೇ ಆದ ವಿಶಿಷ್ಟ ಡಿಜಿಟಲ್ ಶೈಲಿಯಲ್ಲಿ ಪ್ರತಿಭಟಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆದಿದ್ದಾರೆ.
ಸಾಂಪ್ರದಾಯಿಕವಾಗಿ ಮಾಧ್ಯಮಗಳ ನ್ಯೂಸ್ ಕ್ಯಾಮೆರಾಗಳಲ್ಲಿ ಕಾಣ ಸಿಗುತ್ತಿದ್ದ ಸೀರಿಯಸ್ ಪ್ರತಿಭಟನೆಯ ದೃಶ್ಯಗಳು, ಈ ಬಾರಿ ಯುವಕರ ಸ್ಮಾರ್ಟ್‌ಫೋನ್‌ಗಳ ಫ್ರಂಟ್ ಕ್ಯಾಮೆರಾ, ಟ್ರೆಂಡಿಂಗ್ ಆಡಿಯೋ ಮತ್ತು ಕ್ವಿಕ್-ಕಟ್ ರೀಲ್ಸ್ ರೂಪದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
'GRWM'ನಿಂದ ಆರಂಭವಾಗುವ ಪ್ರತಿಭಟನಾ ಡೈರಿ!
ಸಾಮಾನ್ಯವಾಗಿ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಇನ್ಫ್ಲುಯೆನ್ಸರ್ಗಳು ಮಾಡುವ ಗೆಟ್ ರೆಡಿ ವಿತ್ ಮಿ ವಿಡಿಯೋಗಳು ಈ ಬಾರಿ ಪ್ರತಿಭಟನೆಯ ಅಖಾಡದಲ್ಲಿ ಸದ್ದು ಮಾಡುತ್ತಿವೆ. ಚಳವಳಿಗೆ ಹೊರಡುವ ಮುನ್ನ ಯುವಕ-ಯುವತಿಯರು ತಮ್ಮ ಮನೆಗಳಲ್ಲಿ ಧರಿಸುವ ಉಡುಪು, ಪರಿಕರಗಳನ್ನು ತೋರಿಸುತ್ತಾ ರೆಡಿಯಾಗುವ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂಟರ್ನೆಟ್‌ನಲ್ಲಿ ಆರಂಭವಾಗಿ ನಂತರ ರಸ್ತೆಗಿಳಿದ ಸಿಜೆಪಿ (CJP) ಪ್ರತಿಭಟನೆಗೆ ಈ 'ಲೈವ್ ಕಂಟೆಂಟ್ ಡೈರಿ' ಶೈಲಿಯ ವೀಡಿಯೊಗಳು ಭಾರಿ ಮೈಲೇಜ್ ತಂದುಕೊಟ್ಟಿವೆ.
ಜಂತರ್ ಮಂತರ್‌ನಲ್ಲಿ 'ಉನೋ' ಕಾರ್ಡ್ ಆಟ!
ಪ್ರತಿಭಟನಾ ಸ್ಥಳದಲ್ಲಿ ವಾತಾವರಣ ಭುಗಿಲೆದ್ದಾಗ ಜಂತರ್ ಮಂತರ್‌ನಲ್ಲಿ ಮತ್ತೊಂದು ರೋಚಕ ದೃಶ್ಯ ಕಂಡುಬಂದಿತು. ಪೊಲೀಸರು ಯುವಕರನ್ನು ನಿಯಂತ್ರಿಸುವ ಸಮಯದಲ್ಲಿ ಯುವ ಪ್ರತಿಭಟನಾಕಾರರ ಗುಂಪೊಂದು ರಸ್ತೆಯಲ್ಲಿ ಕುಳಿತು ಉನೋ ಕಾರ್ಡ್ ಗೇಮ್ ಆಡುತ್ತಿರುವ ವಿಡಿಯೋವೊಂದನ್ನು ಕಾಣಬಹುದು. ಸಾಮಾನ್ಯವಾಗಿ ಕಾಲೇಜು ಬ್ರೇಕ್ ಅಥವಾ ಪಾರ್ಟಿಗಳಲ್ಲಿ ಕಾಣಸಿಗುವ ಈ ಆಟ, ಚಳವಳಿಯ ಬ್ಯಾನರ್‌ಗಳ ನಡುವೆ ಪ್ರತ್ಯಕ್ಷವಾಗಿದ್ದು ನೆಟ್ಟಿಗರಲ್ಲಿ ಭಾರಿ ಕುತೂಹಲ ಮೂಡಿಸಿತು.
ಘರ್ಷಣೆಯ ನಡುವೆಯೂ ರೀಲ್ಸ್ ಮತ್ತು ಡ್ಯಾನ್ಸ್!
ಪೊಲೀಸರ ಆಕ್ಷನ್, ತಳ್ಳಾಟ ಮತ್ತು ಬಿಗುವಿನ ವಾತಾವರಣದ ನಡುವೆಯೂ ಯುವಕರ ವಿಡಿಯೋ ರೆಕಾರ್ಡಿಂಗ್ ನಿಲ್ಲಲಿಲ್ಲ. ಉದ್ವಿಗ್ನ ಸಂದರ್ಭಗಳಲ್ಲೂ ಟ್ರೆಂಡಿಂಗ್ ಮ್ಯೂಸಿಕ್ ಹಾಕಿಕೊಂಡು ನೃತ್ಯ ಮಾಡುವುದು, ಸೋಷಿಯಲ್ ಮೀಡಿಯಾಕ್ಕೆ ತಕ್ಕಂತೆ ಕಂಟೆಂಟ್ ಕ್ರಿಯೇಟ್ ಮಾಡುವುದನ್ನು ಗಮನಿಸಬಹುದು. ಪ್ರತಿಭಟನೆಯ ಗಂಭೀರತೆ ಮತ್ತು ಇಂಟರ್ನೆಟ್ ಜಗತ್ತಿನ ಈ ಕ್ಯಾಶುಯಲ್ ಶೈಲಿ ಪರಸ್ಪರ ವೈದೃಶ್ಯವಾಗಿದ್ದರೂ, ಯುವಪೀಳಿಗೆ ತಮ್ಮ ಧ್ವನಿಯನ್ನು ಜಗತ್ತಿಗೆ ತಲುಪಿಸಲು ಕಂಡುಕೊಂಡ ಹೊಸ ಹಾದಿಯಾಗಿ ಹೊರಹೊಮ್ಮಿದೆ (ಏಜೆನ್ಸೀಸ್).