Modi Selfie Video | ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ!  
ದೇಶ

ಒಂದೇ ಒಂದು ವೀಡಿಯೋ, 10 ಲಕ್ಷ ಫಾಲೋವರ್ಸ್!...ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ! | Modi Selfie Video

ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಸಾಲು ಸಾಲು ವಿವಾದಗಳ ನಡುವೆಯೇ, ಪ್ರಧಾನಮಂತ್ರಿ ನರೇಂದ್ರ ಮೋದಿ ತಡರಾತ್ರಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಂಚಿಕೊಂಡ ಸೆಲ್ಫಿ ವೀಡಿಯೊ (Modi Selfie Video) ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಲೆಯನ್ನೇ ಎಬ್ಬಿಸಿದೆ. ಈ ವೀಡಿಯೊ ಪ್ರಸಾರವಾದ ಒಂದೇ ರಾತ್ರಿಯಲ್ಲಿ ಪ್ರಧಾನಿಯವರ ಇನ್‌ಸ್ಟಾಗ್ರಾಮ್ ಖಾತೆಗೆ ಸರಿ ಸುಮಾರು 10 ಲಕ್ಷ (1 ಮಿಲಿಯನ್) ಹೊಸ ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದಾರೆ.
ನಾಳಿನ ಕ್ಯಾಬಿನೆಟ್ ಸಭೆಯಲ್ಲಿ ಪರೀಕ್ಷಾ ಪತ್ರಿಕೆ ಸೋರಿಕೆ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳು ಬರಲಿವೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ವೀಡಿಯೊ ಸಂದೇಶವು ಇನ್‌ಸ್ಟಾಗ್ರಾಮ್‌ನಲ್ಲಿ 27.1 ಕೋಟಿಗೂ (271 ಮಿಲಿಯನ್) ಹೆಚ್ಚು ವೀಕ್ಷಣೆಗಳು, 1.5 ಕೋಟಿಗೂ (15 ಮಿಲಿಯನ್) ಹೆಚ್ಚು ಲೈಕ್ಸ್ ಹಾಗೂ 13 ಲಕ್ಷಕ್ಕೂ (1.3 ಮಿಲಿಯನ್) ಹೆಚ್ಚು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ದಿಢೀರ್ ಬೆಳವಣಿಗೆಯಿಂದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿಯವರ ಒಟ್ಟು ಫಾಲೋವರ್ಸ್‌ಗಳ ಸಂಖ್ಯೆ ಬರೋಬ್ಬರಿ 10.2 ಕೋಟಿಗೆ (102 ಮಿಲಿಯನ್) ಏರಿಕೆಯಾಗಿದೆ.

ಪ್ರಧಾನಿ ಮೋದಿ ಹೇಳಿದ್ದೇನು..?

ಪರೀಕ್ಷಾ ಅಕ್ರಮಗಳಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಉಂಟಾಗಿದ್ದ ಆತಂಕ ಹಾಗೂ ಆಕ್ರೋಶವನ್ನು ಶಮನಗೊಳಿಸಲು ಯತ್ನಿಸಿದ ಪ್ರಧಾನಿ ಮೋದಿ, ಬಾಧಿತ ಅಭ್ಯರ್ಥಿಗಳು ಮತ್ತು ಪೋಷಕರಿಗೆ ನೇರವಾಗಿ ಧೈರ್ಯ ತುಂಬುವ ಕೆಲಸ ಮಾಡಿದರು. ವಿಡಿಯೋದಲ್ಲಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ಸಾಮಾನ್ಯ ವಿಷಯವಲ್ಲ ಎಂಬುದು ನನಗೆ ತಿಳಿದಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ ಎಂದಿದ್ದಾರೆ.
ಪೇಪರ್​ ಲೀಕ್​ ನಂತರ ಕೈಗೊಳ್ಳಲಾದ ಕ್ರಮಗಳನ್ನು ಎತ್ತಿಹಿಡಿದ ಪ್ರಧಾನಿಯವರು, ಸರ್ಕಾರದ ತಕ್ಷಣದ ಆದ್ಯತೆಗಳು ಮತ್ತು ಕೈಗೊಂಡ ಪ್ರತಿಕ್ರಿಯೆಗಳನ್ನು ವಿಸ್ತಾರವಾಗಿ ವಿವರಿಸಿದರು. ಪತ್ರಿಕೆ ಸೋರಿಕೆ ಘಟನೆ ನಡೆದ ಕಳೆದ ಎರಡೂವರೆ ತಿಂಗಳಿನಿಂದ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪರಾಧಿಗಳನ್ನು ಬಂಧಿಸಲಾಗಿದ್ದು, ಅವರು ಈಗ ಜೈಲಿನಲ್ಲಿದ್ದಾರೆ. ವಿದ್ಯಾರ್ಥಿಗಳ ಒಂದು ವರ್ಷ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿತ್ತು. ಅತ್ಯಂತ ಕನಿಷ್ಠ ಸಮಯದಲ್ಲಿ 22 ಲಕ್ಷ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನು ಬರೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತನ್ನ ಎಲ್ಲಾ ಶಕ್ತಿಯನ್ನು ಬಳಸಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣದ ಈ ಭಾಷಣದ ಬೆನ್ನಲ್ಲೇ, ಶುಕ್ರವಾರ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು ಪರೀಕ್ಷಾ ಪತ್ರಿಕೆ ಸೋರಿಕೆ ತಡೆ ಕಾಯ್ದೆಯ ತಿದ್ದುಪಡಿಗಳಿಗೆ ಅನುಮೋದನೆ ನೀಡಿದ್ದು, ಪರೀಕ್ಷಾ ಅಕ್ರಮಗಳಿಗೆ ಇನ್ಮುಂದೆ ಅತ್ಯಂತ ಕಠಿಣ ಶಿಕ್ಷೆಗಳನ್ನು ಪ್ರಸ್ತಾಪಿಸಿದೆ. ಪರಿಷ್ಕೃತ ಕಾಯ್ದೆಯಡಿ, ಅಕ್ರಮ ಎಸಗುವ ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಕೋಟಿ ರೂಪಾಯಿಯವರೆಗೆ ದಂಡ ವಿಧಿಸಬಹುದಾಗಿದೆ. ಜೊತೆಗೆ ಕನಿಷ್ಠ ಜೈಲು ಶಿಕ್ಷೆಯ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಕ್ಕೆ ಏರಿಕೆ ಮಾಡಲಾಗಿದೆ.

47 ಅಧಿಕಾರಿಗಳನ್ನು ವಜಾ ಮಾಡಿದ ಎನ್​ಟಿಎ

ನೀಟ್​​ ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ತನ್ನ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಇಷ್ಟೇ ಅಲ್ಲದೆ, ಇನ್ನು ಹಲವು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಏಜೆನ್ಸಿಯ ಸಂಪೂರ್ಣ ಪುನಾರಚನೆ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಭಾಗವಾಗಿ, ಎನ್‌ಟಿಎ ಕೆಲವು ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಕ್ರಿಮಿನಲ್ ಕ್ರಮಗಳನ್ನು ಸಹ ಜರುಗಿಸಲಿದೆ. ಮುಂದಿನ ದಿನಗಳಲ್ಲಿ ಇನ್ನು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಪರೀಕ್ಷೆಗಳನ್ನು ಹೊರಗುತ್ತಿಗೆ ನೀಡುವ ಮಾದರಿಯನ್ನು ಸಹ ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).