- ಟ್ರಾವೆಲ್‌ಗೆ ಜೆನ್‌ಜೀಗಳ ಖರ್ಚು ಕೇವಲ ಶೇ.5 ಅಷ್ಟೇ
- ಒಟಿಟಿ, ಮ್ಯೂಸಿಕ್‌ಗೂ ಜೆನ್‌ಜೀಗಳ ಬಜೆಟ್‌ನಲ್ಲಿದೆ ಪಾಲು
- ಜೆನ್‌ಜೀಗಳ ಖರ್ಚಿನ ಶೇ.70ಕ್ಕೂ ಹೆಚ್ಚು ಹಣ ಬಿಲ್, ದಿನಸಿ, ಶಾಪಿಂಗ್‌ಗೆ ಮೀಸಲು
ನವದೆಹಲಿ: ಜೆನ್ಜೀ ಲೈಫ್ಸ್ಟೈಲ್ ಮತ್ತು ಕೆಲಸದ ಶೈಲಿ ಬಹುತೇಕರಿಗೆ ಗೊತ್ತೇ ಇದೆ. ಅದರಲ್ಲೂ, ಇತ್ತೀಚಿನ ದೆಹಲಿಯ ಜಂತರ್ ಮಂತರ್ ಪ್ರತಿಭಟನೆ ಸೇರಿದಂತೆ ಇತರೆ ವಿಷಯಗಳಿಂದ ನಮಗೆ ಜೆನ್ಜೀ (Gen Z) ಎಂಬ ಪದ ಆಗಾಗ್ಗೆ ನೆನಪಿಗೆ ಬರುತ್ತೆ. ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಜೀವನಶೈಲಿಗೆ ತಕ್ಕಂತೆ ಬದುಕುತ್ತಿರುವ ಈ ಪೀಳಿಗೆ, ತಮ್ಮ ತಿಂಗಳ ಸಂಬಳದ ಬಹುಪಾಲು ಹಣವನ್ನು ಯಾವುದಕ್ಕೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂಬ ಸಣ್ಣ ಸುಳಿವು ನಿಮಗೇನಾದರೂ ಇದೆಯಾ? ಅದಕ್ಕೆ ಇಲ್ಲಿದೆ ನೋಡಿ ಅಚ್ಚರಿ ಉತ್ತರ.
ಭಾರತದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು, ತಿಂಗಳ ಅಂತ್ಯದಲ್ಲಿ ಸಂಬಳ ಎಣಿಸುವ ಜೆನ್ಜೀ ಯುವಕರ ಚಿತ್ರಣ ಸ್ವಲ್ಪ ವಿಭಿನ್ನವಾಗಿದೆ. ಬಹುತೇಕರು ಈಗಾಗಲೇ ಅಂದಾಜು ಮಾಡಿರುವುದು, ಟ್ರಾವೆಲ್ ಮತ್ತು ಲಕ್ಸುರಿ ವಸ್ತುಗಳಿಗೆ ಹೆಚ್ಚು ಹಣ ವ್ಯಯಿಸುತ್ತಾರೆ ಅಂತ. ಅದು ನಿಜವೇ! ಆದ್ರೆ, ಬಹುಪಾಲು ಅಲ್ಲವೇ ಅಲ್ಲ. ಪ್ರವಾಸ ಮತ್ತು ಮನರಂಜನೆಗಿಂತ ದಿನಬಳಕೆಯ ವಸ್ತುಗಳು, ಬಿಲ್‌ಗಳು, ಒಟಿಟಿ ಸೇರಿದಂತೆ ಇನ್ನುಳಿದ ಸಬ್ಸ್ಕ್ರಿಪ್ಶನ್, ದಿನಸಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಸ್ಯಾಲರಿ ಸೇ (SalarySe) ನಡೆಸಿದ ಇತ್ತೀಚಿನ ಈ ಅಧ್ಯಯನದಲ್ಲಿ, 5.2 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವ ಜೆನ್ಜೀ ಬಳಕೆದಾರರ ಲಕ್ಷಾಂತರ ಯುಪಿಐ ವಹಿವಾಟುಗಳನ್ನು ಬಹಿರಂಗಪಡಿಸಲಾಗಿದೆ. ಈ ವಿಶ್ಲೇಷಣೆಯಲ್ಲಿ, ಜೆನ್ಜೀಗಳು ಲಕ್ಸುರಿ ಲೈಫ್ಸ್ಟೈಲ್ಗಿಂತಲೂ ಸಾಕಷ್ಟು ಅನುಭವಗಳಿಂದ ಸಾಧಾರಣ ಖರ್ಚುಗಳಿಗೆ ಹೆಚ್ಚು ಆದ್ಯತೆ ನೀಡುವ ಪೀಳಿಗೆ ಎಂಬುದಲ್ಲಿ ಇಲ್ಲಿ ಮತ್ತೊಮ್ಮೆ ನೆನಪಿಸಿದೆ.
ಬಿಲ್, ಸಬ್‌ಸ್ಕ್ರಿಪ್ಶನ್‌ಗೆ ಜಾಸ್ತಿ ಖರ್ಚು
ಅಧ್ಯಯನದ ಪ್ರಕಾರ, ಜೆನ್ಜೀ ಯುವಜನರ ತಿಂಗಳ ಖರ್ಚಿನಲ್ಲಿ ಬಿಲ್‌ಗಳು ಮತ್ತು ಸಬ್‌ಸ್ಕ್ರಿಪ್ಶನ್‌ಗಳಿಗೆ ಶೇ.20.1ರಷ್ಟು ಪಾಲಿದೆ. ಇದರ ಬಳಿಕ ದಿನಸಿ ವಸ್ತುಗಳಿಗೆ ಶೇ.15.7, ಹಣಕಾಸು ಸೇವೆಗಳಿಗೆ ಶೇ.12.2, ಶಾಪಿಂಗ್ ಶೇ.11.9 ಮತ್ತು ಊಟಕ್ಕೆ ಶೇ.11.5ರಷ್ಟು ಖರ್ಚು ಮಾಡುತ್ತಿದ್ದಾರೆ ಎಂದು ವಿವರಿಸಲಾಗಿದೆ. ಈ ಐದು ವಿಭಾಗಗಳನ್ನು ಗಮನಿಸಿ ನೋಡಿದರೆ, ಜೆನ್‌ಜೀಗಳ ಮಾಸಿಕ ಖರ್ಚಿನ ಶೇ.70ಕ್ಕೂ ಅಧಿಕ ಹಣ ಇವುಗಳಿಗೆ ಮೀಸಲಿಡಲಾಗಿದೆ.
ಸುತ್ತಾಟಕ್ಕೆ ಶೇ.5 ಅಷ್ಟೇ!
ಜೆನ್ಜೀ ಅಥವಾ ಅದರ ನಂತರದ ಪೀಳಿಗೆಯವರು ಟ್ರಾವೆಲ್ ಮತ್ತು ಸುತ್ತುವುದಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಾರೆ ಎಂಬ ಅಭಿಪ್ರಾಯ ನಮ್ಮಲ್ಲಿ ಹೆಚ್ಚಿದೆ. ಆದರೆ, ಅಧ್ಯಯನದ ಅಂಕಿಅಂಶಗಳು ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ತೋರಿಸಿರುವುದು ಒಂದು ರೀತಿ ಶಾಕಿಂಗ್ ವಿಚಾರವೇ ಸರಿ. ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವ ಜೆನ್ಜೀ ಯುವಕರ ಮಾಸಿಕ ಖರ್ಚಿನಲ್ಲಿ ಪ್ರವಾಸಕ್ಕೆ ಕೇವಲ ಶೇ.5ರಷ್ಟು ಮಾತ್ರ ಹೋಗುತ್ತೆ ಎಂದಿದೆ. ಟ್ರಾವೆಲ್ ಆಸೆಯಿದ್ದರೂ, ಅದು ಪ್ರತೀ ತಿಂಗಳ ಬಜೆಟ್‌ನಲ್ಲಿ ಹೆಚ್ಚು ಸ್ಥಾನ ಪಡೆದಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಒಟಿಟಿ, ಮ್ಯೂಸಿಕ್ ಆ್ಯಪ್ಗೆ ಖರ್ಚು
ಮೊಬೈಲ್, ಸ್ಮಾರ್ಟ್ ಟಿವಿಯಲ್ಲಿ ಭರಪೂರ ಮನರಂಜನೆ ಒದಗಿಸುವ ಒಟಿಟಿ ಮತ್ತು ಮ್ಯೂಸಿಕ್ ಪ್ಲಾಟ್ಫಾರ್ಮ್ಗಳ ಸಬ್‌ಸ್ಕ್ರಿಪ್ಶನ್‌ಗಳಿಗೆ ಜೆನ್ಜೀಗಳು ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ಅಧ್ಯಯನದ ಪ್ರಕಾರ, ಜಿಯೋ ಹಾಟ್ಸ್ಟಾರ್ ಶೇ.12.4ರಷ್ಟು, ನೆಟ್ಫ್ಲಿಕ್ಸ್ ಶೇ.10.7 ಮತ್ತು ಸ್ಪಾಟಿಫೈ ಶೇ.5.6ರಷ್ಟು ಪಾಲನ್ನು ಹೊಂದಿವೆ ಎಂದು ಹೇಳಲಾಗಿದೆ. ಆದರೆ, ಇದು ಅವರ ಒಟ್ಟು ಮಾಸಿಕ ಖರ್ಚಿನ ಬಹುಪಾಲಿನ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ,(ಏಜೆನ್ಸೀಸ್).