ಸಾಂದರ್ಭಿಕ ಚಿತ್ರ (AI) 
ದೇಶ

ರಾಜಕೀಯ ರಣತಂತ್ರಕ್ಕೆ ಜೆನ್​ಜೀ ಹೊಸ ದಿಕ್ಕು: 2027ರಲ್ಲಿ ನಡೆಯಲಿದೆ ಸಪ್ತ ರಾಜ್ಯಗಳ ವಿಧಾನಸಭೆ ಚುನಾವಣೆ

ಚುನಾವಣಾ ಸಮೀಕರಣದಲ್ಲಿ ಮಹಿಳೆಯರು, ಹಿಂದುಳಿದ ವರ್ಗಗಳು, ರೈತರಂತೆಯೇ ಈಗ ಜೆನ್​ಜೀ ಕೂಡ ಒಂದು ನಿರ್ಣಾಯಕ ಮತದಾರರ ಗುಂಪಾಗಿ ಹೊರಹೊಮ್ಮುತ್ತಿದೆ. ವಿಧಾನಸಭೆ ಚುನಾವಣೆ ನಡೆಯಲಿರುವ 7 ರಾಜ್ಯಗಳಲ್ಲಿ ಶೇಕಡ 22ರಷ್ಟು ಮತದಾರರು 18ರಿಂದ 29 ವರ್ಷ ವಯಸ್ಸಿನವರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಜನರ ಮತಗಳು ಯಾವುದೇ ರಾಜಕೀಯ ಪಕ್ಷದ ಚುನಾವಣಾ ಲೆಕ್ಕಾಚಾರವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ರಾಜಕೀಯ ಪಕ್ಷಗಳು ಜೆನ್​ಜೀ ಪೀಳಿಗೆಯನ್ನು ಆಕರ್ಷಿಸಲು ಸ್ಪರ್ಧೆಗೆ ಬಿದ್ದವರಂತೆ ಹೊಸ ಕಾರ್ಯತಂತ್ರಗಳ ಮೊರೆ ಹೋಗುತ್ತಿದ್ದು, ಈ ಕುರಿತಾದ ವಿವರ ಇಲ್ಲಿದೆ.

ಮುಂದಿನ ವರ್ಷ (2027) ದೇಶದ 7 ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಉತ್ತರಾಖಂಡ್, ಹಿಮಾಚಲ ಪ್ರದೇಶ, ಮಣಿಪುರ ಮತ್ತು ಗೋವಾಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಬಾರಿಯ ಚುನಾವಣೆಯಲ್ಲಿ ಜೆನ್​ಜೀ ಅಂದರೆ 18ರಿಂದ 29 ವರ್ಷ ವಯಸ್ಸಿನ ಯುವ ಮತದಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಜುಲೈನಲ್ಲಿ ದೆಹಲಿಯ ಜಂತರ್-ಮಂತರ್​ನಲ್ಲಿ ನಡೆದ ಜೆನ್​ಜೀ ಚಳವಳಿಯು ಯುವಕರ ರಾಜಕೀಯ ಒಲವಿನ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಬಿಹಾರದ ಬಂಕಿಪುರ ಮತ್ತು ಮಧ್ಯಪ್ರದೇಶದ ದತಿಯಾ ಉಪಚುನಾವಣೆಯ ಆಘಾತಕಾರಿ ಫಲಿತಾಂಶಗಳು ರಾಜಕೀಯದಲ್ಲಿ ಯುವಕರ ಪ್ರಭಾವದ ಬಗ್ಗೆ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.

7 ರಾಜ್ಯಗಳ 257 ಕ್ಷೇತ್ರಗಳಲ್ಲಿ ಶೇ.5ರಷ್ಟು ಮತಗಳ ಅಂತರ!

ಚುನಾವಣೆ ನಡೆಯಲಿರುವ 7 ರಾಜ್ಯಗಳ ಕಳೆದ ವಿಧಾನಸಭಾ ಚುನಾವಣೆಯ ಅಂಕಿ-ಅಂಶಗಳನ್ನು ಪರಿಶೀಲಿಸಿದರೆ, ಒಟ್ಟು 940 ಕ್ಷೇತ್ರಗಳ ಪೈಕಿ 257 ಕ್ಷೇತ್ರಗಳಲ್ಲಿ (ಶೇಕಡ 27) ಗೆಲುವಿನ ಅಂತರವು ಶೇ.5 ಅಥವಾ ಅದಕ್ಕಿಂತ ಕಡಿಮೆಯಿತ್ತು. ಉತ್ತರ ಪ್ರದೇಶದ 403 ಕ್ಷೇತ್ರಗಳ ಪೈಕಿ 131 ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಶೇ.5ಕ್ಕಿಂತ ಕಡಿಮೆಯಿತ್ತು. ಗುಜರಾತ್​ನ 182 ಕ್ಷೇತ್ರಗಳ ಪೈಕಿ 27, ಪಂಜಾಬ್​ನ 117 ಕ್ಷೇತ್ರಗಳ ಪೈಕಿ 24, ಉತ್ತರಾಖಂಡದ 70 ಕ್ಷೇತ್ರಗಳ ಪೈಕಿ 15 ಮತ್ತು ಹಿಮಾಚಲ ಪ್ರದೇಶದ 68 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲೂ ಮತಗಳ ಅಂತರ ಶೇ.5ಕ್ಕಿಂತ ಕಡಿಮೆಯಿತ್ತು.

ಈ ಆಧಾರದ ಮೇಲೆ, ಸರಾಸರಿ ಶೇ.22ರಷ್ಟಿರುವ ಜೆನ್​ಜೀ ಮತದಾರರ ಪೈಕಿ ಶೇ.5ರಷ್ಟು ಮತದಾರರು ಒಗ್ಗಟ್ಟಿನಿಂದ ಯಾವುದಾದರೂ ಒಂದು ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಿದರೆ, ಈ ರಾಜ್ಯಗಳ ರಾಜಕೀಯ ಸಮೀಕರಣವೇ ಸಂಪೂರ್ಣವಾಗಿ ಬದಲಾಗಬಹುದು. ಇದೇ ಕಾರಣಕ್ಕಾಗಿ ರಾಜಕೀಯ ಪಕ್ಷಗಳು ತಮ್ಮ ಸಂಪೂರ್ಣ ಕಾರ್ಯತಂತ್ರವನ್ನು ಜೆನ್​ಜೀ ಮತದಾರರ ಸುತ್ತಲೇ ರೂಪಿಸಲು ಮುಂದಾಗಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್​ಪಿ) ಈಗಾಗಲೇ ಈ ಅಭಿಯಾನವನ್ನು ಆರಂಭಿಸಿವೆ.

ದೇಶದ ರಾಜಕಾರಣದಲ್ಲಿ ಸುದೀರ್ಘ ಕಾಲದಿಂದ ನಡೆದುಕೊಂಡು ಬಂದಿರುವ ಜಾತಿ ಮತ್ತು ಧರ್ಮ ಆಧಾರಿತ ಚುನಾವಣಾ ಸಮೀಕರಣಗಳಿಗೆ ಯುವ ಮತದಾರರು ಸವಾಲೊಡ್ಡುವ ಸಾಧ್ಯತೆಯಿದೆ. ಯುವ ಸಮುದಾಯವು ಒಂದು ಹೊಸ ಹಾಗೂ ಪ್ರಭಾವಿ ಧ್ವನಿಯಾಗಿ ಹೊರಹೊಮ್ಮುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಮುಂದಿನ ಚುನಾವಣೆಗಳಿಗೆ ಇನ್ನು 6-7 ತಿಂಗಳುಗಳ ಕಾಲಾವಕಾಶವಿದೆ. ಪ್ರಸ್ತುತ ಯುವಜನರಲ್ಲಿ ಕಂಡುಬರುತ್ತಿರುವ ಈ ಆಲೋಚನಾ ಶೈಲಿ ಮತ್ತು ಭಾವನಾತ್ಮಕ ಒಗ್ಗಟ್ಟು ಅಲ್ಲಿಯವರೆಗೆ ಎಷ್ಟು ಮಟ್ಟಿಗೆ ಬಲವಾಗಿ ಉಳಿಯಲಿದೆ ಎಂಬುದು ಕುತೂಹಲಕರ.

ಯಾರು ಜೆನ್​ಜೀ?

1997ರಿಂದ 2012ರ ಅವಧಿಯಲ್ಲಿ ಜನಿಸಿದವರನ್ನು ಜೆನ್​ಜೀ ಪೀಳಿಗೆ ಎಂದು ಕರೆಯಲಾಗುತ್ತಿದೆ. ಇವರು 14ರಿಂದ 29 ವಯೋಮಾನದವರು.

ರಾಜಕೀಯ ಪಕ್ಷಗಳು ಮಾಡಲು ಹೊರಟಿರುವ 5 ಪ್ರಮುಖ ಬದಲಾವಣೆಗಳು

1. ಯುವಕರನ್ನೇ ಕೇಂದ್ರೀಕರಿಸಿದ ರಾಜಕಾರಣ: ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಯುವಕರ ವಿಷಯಗಳು ಸೀಮಿತವಾಗಿದ್ದವು. ಆದರೆ ಈಗ ಉದ್ಯೋಗ ಮತ್ತು ಕೌಶಲಾಭಿವೃದ್ಧಿಯಂತಹ ವಿಷಯಗಳು ನೇರವಾಗಿ ನಾಯಕರ ಭಾಷಣಗಳಲ್ಲಿ ಸ್ಥಾನ ಪಡೆಯಲಿವೆ. ಕೇವಲ ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡುವ ಬದಲು, ಉದ್ಯೋಗ ಮತ್ತು ಕೌಶಲವನ್ನು ಹೇಗೆ ಹೆಚ್ಚಿಸಲಿದ್ದೇವೆ ಎಂಬುದನ್ನು ಪಕ್ಷಗಳು ವಿವರಿಸಬೇಕಾಗುತ್ತದೆ. ಉದ್ಯೋಗ, ಶಿಕ್ಷಣ, ಡಿಜಿಟಲ್ ಮೂಲಸೌಕರ್ಯ ಮತ್ತು ಕೌಶಲಾಭಿವೃದ್ಧಿಯಂತಹ ವಿಷಯಗಳನ್ನು ಎತ್ತಿಹಿಡಿಯುವ ಪಕ್ಷಗಳ ಪರವಾಗಿ ಯುವಕರು ನಿಲ್ಲಲಿದ್ದಾರೆ.

2. ಜಾತಿ ಸಮೀಕರಣಗಳ ಬದಲಾವಣೆ: ಈ ಸನ್ನಿವೇಶ ಹೀಗೆಯೇ ಮುಂದುವರಿದರೆ, ಜೆನ್​ಜೀ ಯುವಕರ ಆಶಯಗಳಿಂದಾಗಿ ಸಾಂಪ್ರದಾಯಿಕ ಜಾತಿ ಮತ್ತು ಧಾರ್ವಿುಕ ಸಮೀಕರಣಗಳು ಬಹುಮಟ್ಟಿಗೆ ಸಡಿಲಗೊಳ್ಳಲಿವೆ. ಇಲ್ಲಿಯವರೆಗೆ ಜಾತಿ-ಧರ್ಮದ ಆಧಾರದಲ್ಲಿದ್ದ ಯುವಕರಲ್ಲಿ ಈಗ ಬದಲಾವಣೆ ಕಾಣಿಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಾತಿನಿಧ್ಯದಲ್ಲಿ ಇದರ ಪ್ರಭಾವ ಸ್ಪಷ್ಟವಾಗಿ ಕಾಣಿಸಲಿದೆ. ಜೆನ್​ಜೀ ಯುವಕರಿಗೆ ಉತ್ತಮ ಪ್ರಾತಿನಿಧ್ಯ ನೀಡಲು ರಾಜಕೀಯ ಪಕ್ಷಗಳು ಯುವ ನಾಯಕರಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಸಾಧ್ಯತೆಯಿದೆ.

3. ನಿರ್ಣಾಯಕ ಬದಲಾವಣೆ: ಮಹಿಳಾ ಮತದಾರರು ಜಾತಿ ಸಮೀಕರಣಗಳನ್ನು ಮೀರಿ ಎನ್​ಡಿಎಗೆ ಮತ ಚಲಾಯಿಸಿದ ಮಾದರಿಯಲ್ಲೇ, ಯುವ ಮತದಾರರು ಕೂಡ ಯಾವುದೇ ಒಂದು ಸಿದ್ಧಾಂತ ಅಥವಾ ಅಭಿವೃದ್ಧಿ ಕೇಂದ್ರೀತ ರಾಜಕೀಯದ ಕಡೆಗೆ ಒಟ್ಟಾಗಿ ವಾಲುವ ಸಾಧ್ಯತೆಯಿದೆ.

4. ಉಚಿತ ಯೋಜನೆಗಳಿಗೆ ವಿರಾಮ: ಯುವಜನತೆಗೆ ಉಚಿತ ಕೊಡುಗೆಗಳು ಅಥವಾ ಆಕರ್ಷಕ ಯೋಜನೆಗಳ ಅಗತ್ಯವಿಲ್ಲ; ಬದಲಿಗೆ ರಾಜಕೀಯ ಪಕ್ಷಗಳಿಂದ ತಮ್ಮ ಭವಿಷ್ಯಕ್ಕೆ ಶಾಶ್ವತ ಪರಿಹಾರಗಳನ್ನು ಅವರು ಬಯಸುತ್ತಿದ್ದಾರೆ.

5. ವಾಸ್ತವಿಕ ಹಾಗೂ ಪ್ರಾಯೋಗಿಕ ಭರವಸೆಗಳು: ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಕೇವಲ ಕಾಗದದ ಮೇಲಷ್ಟೇ ಉಳಿಯುವ ಭರವಸೆಗಳನ್ನು ನೀಡದೆ, ತಳಹಂತದಲ್ಲಿ ಜಾರಿಗೆ ತರಲು ಸಾಧ್ಯವಾಗು ವಂತಹ ವಾಸ್ತವಿಕ ಹಾಗೂ ಪ್ರಾಯೋಗಿಕ ಭರವಸೆಗಳನ್ನು ನೀಡಲು ಮುಂದಾಗಲಿವೆ.

ಬಿಜೆಪಿಯಲ್ಲಿ ಇನ್​ಸ್ಟಾಗ್ರಾಂ ಯುಗ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಎನ್​ಡಿಎ ಸಂಸದರ ‘ಮಂಗಳ ಮಿಲನ’ ಸಭೆಯು ಸಂಪೂರ್ಣವಾಗಿ ಯುವಕರನ್ನೇ ಕೇಂದ್ರೀಕರಿಸಿತ್ತು. ಸಭೆಯಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ವಿಶೇಷ ಪ್ರಸ್ತುತಿ ನೀಡಲಾಯಿತು. ಜೆನ್​ಜೀ ಯುವಜನತೆಗೆ ಸಂಬಂಧಿಸಿದ ವಿಷಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಈ ಪೀಳಿಗೆಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಪಕ್ಷದ ವಿವಿಧ ಘಟಕಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಲವು ನಾಯಕರು ಇನ್​ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದಾರೆ.

ಬದಲಾದ ಆರೆಸ್ಸೆಸ್ ಶೈಲಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಜೆನ್​ಜೀ ಮತ್ತು ಜೆನ್​ಆಲ್ಪಾ ಯುವಜನರೊಂದಿಗೆ ವಿಶೇಷ ಕಾರ್ಯಕ್ರಮ ನಡೆಸಿದರು. ಆಪ್ ಒಂದರ ಮೂಲಕ ಪ್ರತಿ ತಿಂಗಳು 10 ಸಾವಿರ ಹೊಸ ಯುವಕರನ್ನು ಸಂಘಟನೆಯೊಂದಿಗೆ ಜೋಡಿಸುವ ಗುರಿಯನ್ನು ಆರೆಸ್ಸೆಸ್ ಹೊಂದಿದೆ. ತನ್ನ ಶತಮಾನೋತ್ಸವದ ಕಾರ್ಯಕ್ರಮಗಳು, ಕಿಶೋರ ಗಣ ಮತ್ತು ತರುಣ ಗಣ ಶಾಖೆಗಳ ಮೂಲಕ ಯುವಜನರ ಸಹಭಾಗಿತ್ವಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ.

80 ಲಕ್ಷ ಸದಸ್ಯತ್ವ ನೋಂದಣಿ ಗುರಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ದೇಶಾದ್ಯಂತ ಒಂದು ವರ್ಷದಲ್ಲಿ 80 ಲಕ್ಷ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಿದ್ದು, ಶಾಲಾ-ಕಾಲೇಜುಗಳಿಂದ ಆಚೆಗೆ ತರಬೇತಿ ಕೇಂದ್ರಗಳು ಮತ್ತು ವಿವಿಧ ಕ್ಲಬ್​ಗಳನ್ನು ತಲುಪುತ್ತಿದೆ. ಜೊತೆಗೆ ಯುವಕರಿಗಾಗಿ ವೃತ್ತಿ ಮಾರ್ಗದರ್ಶನ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.

ಯುವಕರಿಗೆ ಉಚಿತ ಕಾನೂನು ನೆರವು

ಪ್ರತಿಭಟನೆಯಲ್ಲಿ ನಿರತ ಯುವಕರಿಗೆ ಕಾಂಗ್ರೆಸ್ ಉಚಿತ ಕಾನೂನು ನೆರವು ಒದಗಿಸಲು ಮುಂದಾಗಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಮೇಲ್ವಿಚಾರಣೆಯಲ್ಲಿ, ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ಅವರು ದೆಹಲಿಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಿದ ಯುವಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಯುವಕರಿಗೆ ನೆರವಾಗಲು 150 ವಕೀಲರ ಜಾಲವನ್ನು ರಚಿಸಲಾಗಿದೆ. ಸಣ್ಣ ವಿಡಿಯೋಗಳು, ಪಿಪಿಟಿ, ಪಾಡ್​ಕಾಸ್ಟ್​ಗಳು ಮತ್ತು ‘ಛಾತ್ರೋಂ ಕಿ ಗೂಂಜ್’ನಂತಹ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದೆ. ಎನ್​ಎಸ್​ಯುುಐ ಮತ್ತು ಯೂತ್ ಕಾಂಗ್ರೆಸ್ ಕೂಡ ಹಲವು ವಿಶೇಷ ಪ್ರಚಾರ ಅಭಿಯಾನಗಳನ್ನು ಆರಂಭಿಸಿವೆ.

ಸಮಾಜವಾದಿ ಪಕ್ಷವೂ ಹಿಂದೆ ಬಿದ್ದಿಲ್ಲ

ಸಮಾಜವಾದಿ ಪಕ್ಷದ ಯುವ ಅಭಿಯಾನದ ಜವಾಬ್ದಾರಿಯನ್ನು ಸಂಸತ್ ಸದಸ್ಯೆ ಡಿಂಪಲ್ ಯಾದವ್ ಅವರಿಗೆ ವಹಿಸಲಾಗಿದೆ. ಕಾಲೇಜು ಕ್ಯಾಂಪಸ್​ಗಳಲ್ಲಿ ನಿರಂತರ ಸಂವಾದ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಯುವಜನ ಸಭಾ ಮತ್ತು ಸಮಾಜವಾದಿ ವಿದ್ಯಾರ್ಥಿ ಸಭಾದ ಮೂಲಕ ಈ ಕಾರ್ಯತಂತ್ರವನ್ನು ಜಾರಿಗೆ ತರಲು ಎಸ್​ಪಿ ಮುಂದಾಗಿದೆ.