ವಿಶ್ವಕಪ್ ಗೆದ್ದ ನಾಯನಿಗೆ ಗೇಟ್‌ಪಾಸ್! ಶ್ರೇಯಸ್ಗೆ ಪಟ್ಟ ಸಿಕ್ಕಿದ್ದರ ಹಿಂದಿದೆ ಬಿಸಿಸಿಐ ಮಾಸ್ಟರ್ ಪ್ಲಾನ್! ಅಗರ್ಕರ್ ಮಾತಿಗೆ ಬೆಚ್ಚಿಬಿದ್ದ ಕ್ರಿಕೆಟ್ ಜಗತ್ತು!
ಮುಂಬೈ: ಕೇವಲ ಮೂರು ತಿಂಗಳ ಹಿಂದೆಯಷ್ಟೇ ಟಿ೨೦ ವಿಶ್ವಕಪ್ ಜಯಿಸಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav Sacked) ಇಂದು ಭಾರತ ತಂಡದಿಂದಲೇ ಹೊರಬಿದ್ದಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸರಣಿಗೆ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಸೂರ್ಯನನ್ನು ನಾಯಕತ್ವವನ್ನು ಕಸಿದುಕೊಂಡಿರುವುದು ಮಾತ್ರವಲ್ಲದೆ ತಂಡದಲ್ಲೂ ಸ್ಥಾನ ನೀಡಿಲ್ಲ. ಅವರ ಜಾಗಕ್ಕೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ನೂತನ ಸಾರಥಿಯನ್ನಾಗಿ ನೇಮಕ ಮಾಡಲಾಗಿದೆ.
ವಿಶ್ವಕಪ್ ಗೆದ್ದ ನಾಯಕನನ್ನೇ ಇಷ್ಟು ಬೇಗ ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಠಾತ್ ನಿರ್ಧಾರದ ಹಿಂದಿನ ಅಸಲಿ ಕಾರಣಗಳನ್ನು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ. ಫಾರ್ಮ್' ಮತ್ತು ಭವಿಷ್ಯದ ಯೋಜನೆ ಈ ಎರಡು ಪ್ರಮುಖ ಅಂಶಗಳೇ ಸೂರ್ಯಕುಮಾರ್ ಮುಳುವಾಗಿವೆ.
ಕಳಪೆ ಫಾರ್ಮ್ ಮತ್ತು ವಿಶ್ವಕಪ್ ನಂತರದ ಮರುಮೌಲ್ಯಮಾಪನ!
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸೂರ್ಯಕುಮಾರ್ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಮಾತನಾಡಿದ ಅಜಿತ್ ಅಗರ್ಕರ್, ವಿಶ್ವಕಪ್ ಗೆದ್ದ ತಕ್ಷಣ ಇಂತಹ ನಿರ್ಧಾರ ಕೈಗೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಸಾಮಾನ್ಯವಾಗಿ ಪ್ರತಿ ದೊಡ್ಡ ಟೂರ್ನಿಯ ನಂತರ ನಾವು ಮುಂದಿನ ಹಾದಿಯ ಬಗ್ಗೆ ಮರುಮೌಲ್ಯಮಾಪನ ಮಾಡುತ್ತೇವೆ. ಸೂರ್ಯಕುಮಾರ್ ಅವರ ಇತ್ತೀಚಿನ ಫಾರ್ಮ್ ಮತ್ತು ಮುಂದಿನ ಎರಡು ವರ್ಷಗಳ ಟಿ೨೦ ವಿಶ್ವಕಪ್ ಸೈಕಲ್ ಅನ್ನು ಗಮನದಲ್ಲಿಟ್ಟುಕೊಂಡು ನಾವು ಈ ಕಠಿಣ ತೀರ್ಮಾನಕ್ಕೆ ಬರಬೇಕಾಯಿತು ಎಂದಿದ್ದಾರೆ.
ಭಾರತವು ಸೂರ್ಯಕುಮಾರ್ ನೇತೃತ್ವದಲ್ಲಿ ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದರೂ, ಬ್ಯಾಟರ್ ಆಗಿ ಸೂರ್ಯಕುಮಾರ್ ಅವರ ಪ್ರದರ್ಶನ ಸಾಧಾರಣವಾಗಿತ್ತು. ವಿಶ್ವಕಪ್‌ನ ೯ ಇನ್ನಿಂಗ್ಸ್‌ಗಳಲ್ಲಿ ಅವರು ೧೩೬.೭೨ ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ ೨೪೨ ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಅಯ್ಯರ್ ಆಯ್ಕೆಯಾಗಿದ್ದು ಏಕೆ? ಇಲ್ಲಿದೆ ಅವರ ಬಲಿಷ್ಠ ಟ್ರ್ಯಾಕ್ ರೆಕಾರ್ಡ್
ಸೂರ್ಯ ಅವರ ಜಾಗಕ್ಕೆ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್ ಕಳೆದ ಕೆಲವು ಸೀಸನ್‌ಗಳಿಂದ ಬ್ಯಾಟರ್ ಆಗಿ ಹಾಗೂ ನಾಯಕನಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರ ಉಪಸ್ಥಿತಿಯಿಂದಾಗಿ ಡಿಸೆಂಬರ್ ೨೦೨೩ರ ನಂತರ ಶ್ರೇಯಸ್ ಭಾರತ ಟಿ೨೦ ತಂಡದಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಆದರೂ ಐಪಿಎಲ್‌ನಲ್ಲಿ ಅವರ ಯಶಸ್ಸು ಅವರನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಿದೆ.
ಇದಾದ ನಂತರ ನಡೆದ ಐಪಿಎಲ್ ೨೦೨೬ರ ಸೀಸನ್‌ನಲ್ಲೂ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸೂರ್ಯಕುಮಾರ್ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ೧೩ ಇನ್ನಿಂಗ್ಸ್‌ಗಳಲ್ಲಿ ಕೇವಲ ೨೦.೭೬ ರ ಸರಾಸರಿಯಲ್ಲಿ ೨೭೦ ರನ್ ಗಳಿಸಲಷ್ಟೇ ಅವರು ಶಕ್ತರಾಗಿದ್ದರು. ಈ ಕಳಪೆ ಪ್ರದರ್ಶನವೇ ಬಿಸಿಸಿಐ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಮುಖ ಕಾರಣವಾಯಿತು.
ನಾಯಕನಾಗಿ ಶ್ರೇಯಸ್ ಸಾಧನೆ:
2024: ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಮುನ್ನಡೆಸಿ ಐಪಿಎಲ್ ಚಾಂಪಿಯನ್ ಪಟ್ಟ ಗೆಲ್ಲಿಸಿಕೊಟ್ಟರು.
2020 & 2025: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ನಾಯಕನಾಗಿ ಫೈನಲ್‌ವರೆಗೂ ಮುನ್ನಡೆಸಿದ್ದರು.
ಬ್ಯಾಟಿಂಗ್‌ನಲ್ಲೂ ಅಬ್ಬರ:
ಐಪಿಎಲ್ 2025 ರಲ್ಲಿ 175.07 ರ ಭೀಕರ ಸ್ಟ್ರೈಕ್ ರೇಟ್‌ನಲ್ಲಿ 604 ರನ್ ಚಚ್ಚಿದ್ದ ಶ್ರೇಯಸ್, ಇತ್ತೀಚಿನ ಐಪಿಎಲ್ 2026 ರಲ್ಲೂ 168.81 ರ ಸ್ಟ್ರೈಕ್ ರೇಟ್‌ನಲ್ಲಿ 498 ರನ್ ಗಳಿಸಿ ಮಿಂಚಿದ್ದಾರೆ. ಶ್ರೇಯಸ್ ವಿಭಿನ್ನ ಐಪಿಎಲ್ ಫ್ರಾಂಚೈಸಿಗಳನ್ನು ಮುನ್ನಡೆಸಿ ತಮ್ಮ ನಾಯಕತ್ವದ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರೊಬ್ಬರೇ ನಾಯಕತ್ವಕ್ಕೆ ಅತ್ಯಂತ ಸೂಕ್ತ ಹಾಗೂ ಅರ್ಹ ಅಭ್ಯರ್ಥಿ ಎಂದು ಅಗರ್ಕರ್ ಕೊಂಡಾಡಿದ್ದಾರೆ.
ಭವಿಷ್ಯದತ್ತ ಬಿಸಿಸಿಐ ಚಿತ್ತ
ಬಿಸಿಸಿಐನ ಈ ನಿರ್ಧಾರವು ಕೇವಲ ತಾತ್ಕಾಲಿಕ ಬದಲಾವಣೆಯಲ್ಲ, ಬದಲಿಗೆ ಮುಂದಿನ ಟಿ೨೦ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟುವ ದೂರದೃಷ್ಟಿಯಾಗಿದೆ. ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಸೂರ್ಯಕುಮಾರ್ ಅವರ ಕ್ಯಾಪ್ಟನ್ಸಿ ಜರ್ನಿ ಇಷ್ಟು ಬೇಗ ಅಂತ್ಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಕ್ರಿಕೆಟ್‌ನಲ್ಲಿ ಫಾರ್ಮ್ ಇಲ್ಲದಿದ್ದರೆ ಯಾರೂ ಅನಿವಾರ್ಯವಲ್ಲ ಎಂಬ ಕಠಿಣ ಸಂದೇಶವನ್ನು ಬಿಸಿಸಿಐ ಈ ಮೂಲಕ ರವಾನಿಸಿದೆ. ಜೂನ್ ತಿಂಗಳಿನಿಂದ ಆರಂಭವಾಗಲಿರುವ ಐರ್ಲೆಂಡ್ ಪ್ರವಾಸದೊಂದಿಗೆ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಹೊಸ ಪರ್ವ ಅಧಿಕೃತವಾಗಿ ಆರಂಭವಾಗಲಿದೆ,(ಏಜೆನ್ಸೀಸ್).