Gary Kirsten | ಟೀಮ್ ಇಂಡಿಯಾದ ಹೆಡ್​ ಕೋಚ್​ ಗೌತಮ್ ಗಂಭೀರ್ ಮತ್ತು ಮಾಜಿ ಕೋಚ್​ ಗ್ಯಾರಿ ಕರ್ಸ್ಟನ್ 
ದೇಶ

ಗೌತಮ್ ಗಂಭೀರ್ ಪ್ಲಾನ್​ ಸೂಪರ್ ಎಂದ ಗ್ಯಾರಿ ಕರ್ಸ್ಟನ್.. ಭಾರತದ ಬಲಿಷ್ಠ ಪಡೆ ಬಗ್ಗೆ ಮೆಚ್ಚುಗೆಯ ಮಾತು | Gary Kirsten

Gary Kirsten: ಟೀಮ್ ಇಂಡಿಯಾದ ಹೆಡ್​ ಕೋಚ್​ ಗೌತಮ್ ಗಂಭೀರ್ ಅವರ ವ್ಯಕ್ತಿಗಿಂತ ತಂಡವೇ ದೊಡ್ಡದು ಎಂಬ ಕಠಿಣ ನಿಲುವಿಗೆ 2011ರ ವಿಶ್ವಕಪ್ ವಿಜೇತ ಕೋಚ್ ಗ್ಯಾರಿ ಕರ್ಸ್ಟನ್ ಬೆಂಬಲ ನೀಡಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ದಶಕಗಳಿಂದ ಮನೆ ಮಾಡಿದ್ದ ಸೂಪರ್‌ಸ್ಟಾರ್ ಸಂಸ್ಕೃತಿಗೆ ಈಗ ಬ್ರೇಕ್ ಬೀಳುವ ಸಮಯ ಬಂದಿದೆ ಎಂದು ಕರ್ಸ್ಟನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ಕಳೆದ 15 ವರ್ಷಗಳಿಂದ ವ್ಯಕ್ತಿಗಳ ಸ್ಟಾರ್‌ಗಿರಿ ಸುತ್ತ ಸುತ್ತುತ್ತಿತ್ತು, ಇದಕ್ಕೆ ವಾಣಿಜ್ಯ ಕಾರಣಗಳೂ ಇದ್ದವು. ಆದರೆ ಈಗ ಭಾರತದಲ್ಲಿ ಗುಣಮಟ್ಟದ ಆಟಗಾರರ ದೊಡ್ಡ ಪಡೆಯೇ ಇದೆ. ಗಂಭೀರ್ ಅವರ ಟೀಮ್ ಫಸ್ಟ್ ಸಿದ್ಧಾಂತ ಈಗಿನ ಟೀಮ್​ ಇಂಡಿಯಾಗೆ ಅತ್ಯಂತ ಸೂಕ್ತವಾಗಿದೆ ಎಂದು ಕರ್ಸ್ಟನ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಮಹಿಮೆ ಹೀಗಿದೆ

ಐಪಿಎಲ್ ಆರಂಭವಾದ ಬಳಿಕ ಭಾರತೀಯ ಕ್ರಿಕೆಟ್‌ನ ಚಿತ್ರಣ ಬದಲಾಗಿದೆ ಎಂದಿರುವ ಕರ್ಸ್ಟನ್, ಭಾರತ ಈಗ ಎಷ್ಟೊಂದು ಬಲಿಷ್ಠವಾಗಿದೆ ಎಂದರೆ ಏಕಕಾಲಕ್ಕೆ ಮೂರು ವಿಭಿನ್ನ ತಂಡಗಳನ್ನು ಕಣಕ್ಕಿಳಿಸುವಷ್ಟು ಪ್ರತಿಭಾವಂತ ಆಟಗಾರರು ಇಲ್ಲಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (NCA) ನಂತಹ ಸೌಲಭ್ಯಗಳು ಜಗತ್ತಿನಲ್ಲೇ ಅತ್ಯುತ್ತಮವಾಗಿವೆ ಎಂದು ಶ್ಲಾಘಿಸಿದ್ದಾರೆ.

ಸೂಪರ್‌ಸ್ಟಾರ್ ಸಂಸ್ಕೃತಿಗೆ ಗಂಭೀರ್ ಬ್ರೇಕ್

ವಿಶ್ವಕಪ್​ ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗಂಭೀರ್, ಮಾಧ್ಯಮಗಳು ಕೇವಲ ಸೂಪರ್‌ಸ್ಟಾರ್‌ಗಳನ್ನು ಸೃಷ್ಟಿಸಲು ಬಯಸುತ್ತವೆ. ಆದರೆ ಮುಖ್ಯ ತರಬೇತುದಾರನಾಗಿ ನನ್ನ ಕೆಲಸ ಸೂಪರ್ ತಂಡವನ್ನು ರಚಿಸುವುದು. ಡ್ರೆಸ್ಸಿಂಗ್ ರೂಮ್‌ನಲ್ಲಿರುವ 15 ಮಂದಿ ಆಟಗಾರರು ನನಗೆ ಸಮಾನ. ಅವರು ಎಷ್ಟು ರನ್ ಗಳಿಸಿದ್ದಾರೆ, ಎಷ್ಟು ಟಿಆರ್‌ಪಿ ತರುತ್ತಾರೆ ಅಥವಾ ಅವರ ಫಾಲೋಯರ್ಸ್ ಸಂಖ್ಯೆ ಎಷ್ಟು ಎಂಬುದು ನನಗೆ ಮುಖ್ಯವಲ್ಲ.
ನಮ್ಮ ಆಟಗಾರರು ದೇಶಕ್ಕಾಗಿ ಮತ್ತು ತಂಡಕ್ಕಾಗಿ ಏನು ನೀಡುತ್ತಾರೆ ಎಂಬುದು ಮಾತ್ರ ನನಗೆ ಮುಖ್ಯ, ಟೀಮ್​ ಹಿತದೃಷ್ಟಿಯಿಂದ ಯಾರನ್ನಾದರೂ ಖಳನಾಯಕನನ್ನಾಗಿ ಮಾಡಬೇಕಾದರೂ ತಾವು ಹಿಂಜರಿಯುವುದಿಲ್ಲ ಎಂದು ಗಂಭೀರ್​ ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).