ಗಾಂಜಾ ಬೆಳೆಯುತ್ತಿದ್ದ ದೇವಸ್ಥಾನದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ 
ದೇಶ

ಹೂವು ಅರಳಿತು, ಗಾಂಜಾ ಬೆಳೆಯಿತು: ಅರ್ಚಕನ ಅತಿ ಬುದ್ಧಿವಂತಿಕೆಗೆ ಬ್ರೇಕ್ ಹಾಕಿದ ಖಾಕಿ! | Ganja Seized

ತೆಲಂಗಾಣ: ಅರ್ಚಕನೊಬ್ಬ ಭಕ್ತರ ಕಣ್ಣಿಗೆ ಮಣ್ಣೆರಚಿ ಅದೇ ಪವಿತ್ರ ಕ್ಷೇತ್ರದಲ್ಲಿ ಗಾಂಜಾ(Ganja Seized) ಕೃಷಿ ಮಾಡುತ್ತಿದ್ದ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಂತಿ (ಚೆಂಡು ಹೂ) ಗಿಡಗಳ ನಡುವೆ ಚಾಣಾಕ್ಷತನದಿಂದ ಗಾಂಜಾ ಬೆಳೆಯುತ್ತಿದ್ದ ದೇವಸ್ಥಾನದ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಾಂ ಗ್ರಾಮದ ದೇವಸ್ಥಾನವೊಂದರಲ್ಲಿ ಈ ಕೃಪ್ಯ ನಡೆದಿದೆ. ಬಂಧಿತ ಅರ್ಚಕನನ್ನು ಅವುತಿ ನಾಗಯ್ಯ (48) ಎಂದು ಗುರುತಿಸಲಾಗಿದೆ. ಈತ ದೇವಸ್ಥಾನದ ಆವರಣದಲ್ಲಿ ದೊಡ್ಡ ಮಟ್ಟದ ಹೂವಿನ ತೋಟವನ್ನು ಹೊಂದಿದ್ದು, ಪೂಜೆಗೆ ಬೇಕಾದ ಬಂತಿ ಹೂವುಗಳನ್ನು ಬೆಳೆಸುತ್ತಿರುವುದಾಗಿ ಬಿಂಬಿಸಿಕೊಂಡಿದ್ದ. ಆದರೆ, ಯಾರೂ ಸಂಶಯ ಪಡದ ರೀತಿಯಲ್ಲಿ ಬಂತಿ ಗಿಡಗಳ ಸಾಲುಗಳ ಮಧ್ಯೆ ನೂರಾರು ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ.

ಪೊಲೀಸರ ಮಿಂಚಿನ ದಾಳಿ

ಅರ್ಚಕನ ಈ ಕಳ್ಳಾಟದ ಬಗ್ಗೆ ರಹಸ್ಯ ಮಾಹಿತಿ ಪಡೆದ ಎಕ್ಸೈಸ್ ಮತ್ತು ಡಿಟಿಎಫ್ (DTF) ತಂಡವು ಸೋಮವಾರ ದೇವಸ್ಥಾನದ ಮೇಲೆ ದಾಳಿ ನಡೆಸಿತು. ದಾಳಿಯ ವೇಳೆ ಹೂವಿನ ಗಿಡಗಳ ಮರೆಯಲ್ಲಿ ಅಡಗಿದ್ದ ಗಾಂಜಾ ಗಿಡಗಳನ್ನು ಕಂಡು ಅಧಿಕಾರಿಗಳೇ ಶಾಕ್​ ಆಗಿದ್ದಾರೆ.
685 ಹಸಿ ಗಾಂಜಾ ಗಿಡಗಳು, ಸುಮಾರು 18 ಕೆಜಿ ಒಣ ಗಾಂಜಾ, 1 ಕೆಜಿ ಗಾಂಜಾ ಬೀಜಗಳು ಮುತ್ತು 30,000 ನಗದು ಹಣ ಮತ್ತು ಡಿಜಿಟಲ್ ತೂಕದ ಯಂತ್ರ ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.ಅಧಿಕಾರಿಗಳ ಅಂದಾಜಿನ ಪ್ರಕಾರ ವಶಪಡಿಸಿಕೊಳ್ಳಲಾದ ಒಟ್ಟು ಮಾದಕ ದ್ರವ್ಯದ ಮೌಲ್ಯ ಸುಮಾರು 70 ಲಕ್ಷ ರೂಪಾಯಿಗಳು.

ಆಧ್ಯಾತ್ಮಿಕ ಗುರುವಿನ ಸೋಗು

ಬಂಧಿತ ನಾಗಯ್ಯ ಗ್ರಾಮಸ್ಥರ ಪಾಲಿಗೆ ಒಬ್ಬ ಆಧ್ಯಾತ್ಮಿಕ ಗುರುವಾಗಿ ಗುರುತಿಸಿಕೊಂಡಿದ್ದ. ಪೂಜೆ-ಪುನಸ್ಕಾರಗಳ ಮೂಲಕ ಜನರ ವಿಶ್ವಾಸ ಗಳಿಸಿದ್ದ ಈತ, ಅದರ ಮರೆಯಲ್ಲೇ ಈ ದಂಧೆ ನಡೆಸುತ್ತಿದ್ದ ಎಂಬುದು ಈಗ ಬಯಲಾಗಿದೆ. ತಾನು ಬೆಳೆದ ಗಾಂಜಾವನ್ನು ಈತ ಪ್ಯಾಕ್ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​).