ನಡುರಸ್ತೆಯಲ್ಲೇ ಕೊಲೆಯಾದ ಗೌರವ್ ಪಂಕಜ್ ರಾಗ್ಡೆ
- ತ್ರಿಕೋನ ಲವ್ ಸ್ಟೋರಿಯೊಂದು ಕೊಲೆಯಲ್ಲಿ ಅಂತ್ಯ
- ಯುವತಿಯೊಬ್ಬಳನ್ನು ಪ್ರೀತಿಸಿದ್ದ ಇಬ್ಬರೂ ಗ್ಯಾಂಗ್ಸ್ಟರ್ಗಳ ನಡುವೆ ಮಾರಾಮಾರಿ
- ನಡುರಸ್ತೆಯಲ್ಲೇ ಗೆಳೆಯನಿಂದ ಹೆಣವಾದ ರೌಡಿಶೀಟರ್
ನಾಗ್ಪುರ: ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಂತ್ಯ ಕಂಡ ಭೀಕರ ಘಟನೆ ಸದ್ಯ ಪೊಲೀಸರನ್ನು ಮಾತ್ರವಲ್ಲದೇ, ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಯುವತಿಯೊಬ್ಬಳನ್ನು ಪ್ರೀತಿಸಿದ್ದ ಇಬ್ಬರೂ ಗ್ಯಾಂಗ್ಸ್ಟರ್ಗಳ ನಡುವೆ ನಡೆದ ಮಾರಾಮಾರಿಯಲ್ಲಿ ಆಗ ತಾನೇ ಜಾಮೀನಿನ ಮೇರೆಗೆ ಜೈಲಿನಿಂದ ಹೊರಬಂದಿದ್ದ ಸ್ನೇಹಿತನನ್ನು ರೌಡಿಶೀಟರ್ ಕೊಲೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ವರದಿಯಾಗಿದೆ.
ಗೌರವ್ ಪಂಕಜ್ ರಾಗ್ಡೆ (27) ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಹತ್ಯೆ, ದರೋಡೆ ಸೇರಿದಂತೆ ಅಜ್ನಿ ಪೊಲೀಸ್ ಠಾಣೆಯಲ್ಲಿ ಸುಮಾರು 9 ಗಂಭೀರ ಪ್ರಕರಣಗಳು ದಾಖಲಾಗಿವೆ. ಗೌರವ್ ರಂಭಾವು ರಾವುತ್ ಹಾಗೂ ಆತನ ಸಹಚರ ಅಭಿಷೇಕ್ ವಾಸ್ನಿಕ್ ಸೇರಿ ಪಂಕಜ್ನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಕೊಲೆಗೆ ಒಬ್ಬಳನ್ನೇ ಇಬ್ಬರೂ ಪ್ರೀತಿಸಿದ್ದೇ ಕಾರಣ ಎನ್ನಲಾಗಿದೆ. ಆದರೆ, ಇದರಲ್ಲಿ ಬಿಗ್ ಟ್ವಿಸ್ಟ್ ಕೂಡ ಇದೆ.
ಘಟನೆಯ ಹಿನ್ನೆಲೆ ಏನು?
ಹತ್ಯೆಗೀಡಾದ ಗೌರವ್ ರಾಗ್ಡೆ ಮುಂಬೈ ಮೂಲದ ಯುವತಿಯೊಬ್ಬಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಗೌರವ್ ಜೈಲಿನಲ್ಲಿದ್ದಾಗ, ಆತನ ಗೆಳೆಯ ರಾವುತ್ ಜತೆ ಈ ಯುವತಿಗೆ ಪರಿಚಯವಾಗಿದೆ. ಕ್ರೈಂ ಲೋಕದಿಂದ ದೂರವಿರಲು ಬಯಸಿದ್ದ ಲವ್ವರ್, ರಾವುತ್ ಜತೆ ಸೇರಿ ನರೇಂದ್ರ ನಗರದಲ್ಲಿ 'ಕ್ಲೌಡ್ ಕಿಚನ್' ಆರಂಭಿಸಿ, ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಜೈಲಿನಿಂದ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದ ಗೌರವ್ ರಾಗ್ಡೆಗೆ ಈ ವಿಷಯ ತಿಳಿದು ತೀವ್ರ ಕೆರಳಿದ್ದ.
ಯುವತಿ ವಿಚಾರಕ್ಕೆ ಗಲಾಟೆ
ಯುವತಿ ರಾವುತ್ ಜತೆ ಮನೆಯಲ್ಲಿ ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿರುವ ವಿಷಯ ತಿಳಿದ ಕೂಡಲೇ ಕಂಠಪೂರ್ತಿ ಕುಡಿದು ರಾವುತ್ ಮನೆಯ ಬಾಗಿಲು ಬಡಿದಿದ್ದಾನೆ ಪಂಕಜ್. ಯಾವಾಗ ಬಾಗಿಲು ತೆರೆಯಲು ಹಿಂದೇಟು ಹಾಕಿದರೋ, ಆಗ ಕಿಟಕಿಗಳಿಗೆ ಕಲ್ಲು ತೂರಿ, ಗಾಜುಗಳನ್ನು ಒಡೆದು ಜೋರು ಗಲಾಟೆ ಮಾಡಿದ್ದಾನೆ. ಜೀವಭಯದಿಂದ ರಾವುತ್ ಮತ್ತು ಆತನ ಗೆಳೆಯರು ಹಿಂಬಾಗಿಲ ಮೂಲಕ ಓಡಿಹೋಗಿದ್ದಾರೆ. ಅವರನ್ನು ಬೆನ್ನಟ್ಟಿದ ಪಂಕಜ್, ಸುಂದರಬನ್ ನಾಲಾದ ಬಳಿ ಕೈಕೈ ಮಿಲಾಯಿಸಿದ್ದಾನೆ. ಈ ವೇಳೆ, ಗೌರವ್ ಪಂಕಚ್ ಕೈಯಲ್ಲಿದ್ದ ಚಾಕುವನ್ನೇ ಕಸಿದ ರಾವುತ್ ಮತ್ತು ವಾಸ್ನಿಕ್ (ಸಹಚರ), ಹಲವು ಬಾರಿ ಇರಿದು ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಿನಿಮಿಯ ಶೈಲಿಯಲ್ಲಿ ಚೇಸಿಂಗ್
ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಅಜ್ನಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಮನೀಶ್ ಭಾಲ್ಮೆ ಎಂಬುವವರು, ಗಾಬರಿಯಿಂದ ಓಡಿ ಹೋಗುತ್ತಿದ್ದ ಆರೋಪಿ ಗೌರವ್ ರಾವುತ್‌ನನ್ನು ಕಂಡು ಹೆಚ್ಚು ಸಮಯ ವ್ಯರ್ಥ ಮಾಡದೆ, 1.5 ಕಿ.ಮೀ. ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಕಡೆಗೂ ಬಂಧಿಸುವಲ್ಲಿ ಯಶಸ್ವಿಯಾದರು. ಕೊಲೆಗೆ ಬಳಸಿದ್ದ ಚಾಕುವನ್ನೂ ವಶಪಡಿಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಗಲಾಟೆ ಆರಂಭವಾಗಿದ್ದು ಅಜ್ನಿ ಠಾಣಾ ವ್ಯಾಪ್ತಿಯಲ್ಲಾದರೂ ಕೊಲೆ ನಡೆದದ್ದು ಬೆಲ್ತಾರೋಡಿ ಠಾಣಾ ವ್ಯಾಪ್ತಿಯಲ್ಲಿ ಎಂಬ ಕಾರಣಕ್ಕೆ, ಬೆಲ್ತಾರೋಡಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).