Narendra Modi Prediction | ಬಿಹಾರದ ವೇದಿಕೆಯಲ್ಲಿ ಅಂದೇ ಬರೆಯಲಾಗಿತ್ತು ಬಂಗಾಳದ ವಿಜಯಗಾಥೆ!
Narendra Modi Prediction: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಐತಿಹಾಸಿಕ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿಯಲು ಸಜ್ಜಾಗಿದೆ. ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಒಟ್ಟು 294 ಕ್ಷೇತ್ರಗಳ ಪೈಕಿ ಬಿಜೆಪಿ ಈಗಾಗಲೇ ಬರೊಬ್ಬರಿ 194 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಬಹುಮತದ ಮ್ಯಾಜಿಕ್ ಸಂಖ್ಯೆಯನ್ನು (148) ಸುಲಭವಾಗಿ ದಾಟಿದೆ.
ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕೇವಲ 94 ಸ್ಥಾನಗಳಿಗೆ ಕುಸಿದು ಮುಜುಗರದ ಸೋಲಿಗೆ ಸಿದ್ಧವಾಗಿದೆ.
ನಿಜವಾಯ್ತು ಮೋದಿ ಭವಿಷ್ಯ!...
ಕಳೆದ ವರ್ಷ ನವೆಂಬರ್‌ನಲ್ಲಿ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಗಾಳದ ಬದಲಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದರು. ಬಿಹಾರದಿಂದ ಬಂಗಾಳಕ್ಕೆ ಹರಿಯುವ ಗಂಗಾ ನದಿಯಂತೆ, ಈ ವಿಜಯದ ಆಲೆ ಬಂಗಾಳದಲ್ಲೂ ಬದಲಾವಣೆ ತರಲಿದೆ ಎಂದು ಮೋದಿ ಅಂದು ಹೇಳಿದ್ದರು. ಬಂಗಾಳದಲ್ಲಿ ಜಂಗಲ್ ರಾಜ್ ಅಂತ್ಯಗೊಳಿಸುವುದಾಗಿ ಅವರು ನೀಡಿದ್ದ ಭರವಸೆ ಈಗ ವಾಸ್ತವಕ್ಕೆ ಹತ್ತಿರವಾಗುತ್ತಿದೆ. ವಿಪಕ್ಷ ನಾಯಕ ಸುವೇಂದು ಅಧಿಕಾರಿ ತಮ್ಮ ಭದ್ರಕೋಟೆಯಾದ ನಂದಿಗ್ರಾಮದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಹೈವೋಲ್ಟೇಜ್ ಕ್ಷೇತ್ರವಾದ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ.
ಉತ್ತರ ಬಂಗಾಳದ ಪ್ರಭಾವಿ ನಾಯಕ ನಿಶಿತ್ ಪ್ರಾಮಾಣಿಕ್ ತಮ್ಮ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದು, ವಿಶೇಷವೆಂದರೆ, ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಕೂಡ ಚುನಾವಣಾ ಕಣದಲ್ಲಿದ್ದು, ಅವರ ಸ್ಪರ್ಧೆಯು ಈ ಚುನಾವಣೆಯಲ್ಲಿ ಭಾವನಾತ್ಮಕ ಮತ್ತು ರಾಜಕೀಯ ಬದಲಾವಣೆಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಬಂಗಾಳದ ಉದ್ದಗಲಕ್ಕೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ದಶಕಗಳ ಕಾಲದ ಟಿಎಂಸಿ ಆಳ್ವಿಕೆ ಅಂತ್ಯಗೊಳ್ಳುವುದು ಬಹುತೇಕ ಖಚಿತವಾಗಿದೆ(ಏಜೆನ್ಸೀಸ್).