ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್​ ಮತ್ತು ಪವನ್ ಖೇರಾ 
ದೇಶ

ಗೋಡ್ಸೆ ಸಂಘಟನೆಯಿಂದ ಗಾಂಧಿ ಸಂಘಟನೆ ಕಲಿಯುವಂಥದ್ದು ಎನೂ ಇಲ್ಲ; RSS ಹೊಗಳಿದ್ದ ದಿಗ್ವಿಜಯ್ ಸಿಂಗ್​ಗೆ ಖೇರಾ ತಿರುಗೇಟು

ನವದೆಹಲಿ: ನಾಥುರಾಮ್ ಗೋಡ್ಸೆಗೆ ಹೆಸರುವಾಸಿಯಾದ ಸಂಘಟನೆಯಿಂದ ಗಾಂಧಿಯ ಸ್ಥಾಪಿಸಿದ ಸಂಘಟನೆ ಕಲಿಯುವಂಥದ್ದು ಏನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು(RSS) ಹೊಗಳಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್​ಗೆ ಇನ್ನೊಬ್ಬ ಕಾಂಗ್ರೆಸ್ ನಾಯಕ ಪವನ್ ಖೇರಾ ತಿರುಗೇಟು ನೀಡಿದ್ದಾರೆ. 
ಬಿಜೆಪಿಯ ಹಿರಿಯ ನಾಯಕ ಎಲ್​.ಕೆ.ಅಡ್ವಾನಿ ಮುಂದೆ ನೆಲದ ಮೇಲೆ ಕುಳಿತಿರುವ ಪ್ರಧಾನಿ ನರೇಂದ್ರ ಮೋದಿಯ ಹಳೆಯ ಚಿತ್ರವನ್ನು ಎಕ್ಸ್​ನಲ್ಲಿ ಫೋಸ್ಟ್ ಮಾಡಿ ಆರ್‌ಎಸ್‌ಎಸ್‌ನ ಸಾಂಸ್ಥಿಕ ರಚನೆಗಳನ್ನು ದಿಗ್ವಿಜಯ್ ಸಿಂಗ್ ಶ್ಲಾಘಿಸಿದ್ದು, ಕಾಂಗ್ರೆಸ್​ನೊಳಗೆ ಆಂತರಿಕ ವಿವಾದ ಹುಟ್ಟಿಕೊಂಡಿದೆ. 
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಸಂವಹನ ಕಾರ್ಯದರ್ಶಿ ಪವನ್ ಖೇರಾ, ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಕಲಿಯಲು ಏನೂ ಇಲ್ಲ. ಗೋಡ್ಸೆ ಸಿದ್ದಾಂತಕ್ಕೆ ಹೆಸರುವಾಸಿಯಾದ ಸಂಘಟನೆಯು ಗಾಂಧಿ ಸ್ಥಾಪಿಸಿದ ಸಂಘಟನೆಗೆ ಏನು ಕಲಿಸಬಹುದು? ಎಂದು ವಾಗ್ದಾಳಿ ನಡೆಸಿದ್ದಾರೆ. 

ದಿಗ್ವಿಜಯ್ ಸಿಂಗ್ ಹೇಳಿದ್ದೇನು?

1990ರ ದಶಕದ ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಬಳಿ ನೆಲದ ಮೇಲೆ ಕುಳಿತಿರುವ ಯುವ ನರೇಂದ್ರ ಮೋದಿಯನ್ನು ಕಪ್ಪು-ಬಿಳುಪಿನ ಫೋಟೋವನ್ನು ಸಾಮಾಜಿಕ ಪ್ರಶ್ನೋತ್ತರ ವೆಬ್​ಸೈಟ್ ಕೋರಾದಿಂದ ಎತ್ತಿಕೊಂಡು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ದಿಗ್ವಿಜಯ್ ಸಿಂಗ್ ಪಕ್ಷದ ಸಂಘಟನೆಯ ಶಕ್ತಿಯನ್ನು ಹೊಗಳಿದ್ದಾರೆ. 
 X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ನಾನು ಈ ಚಿತ್ರವನ್ನು Quora ಸೈಟ್‌ನಲ್ಲಿ ನೋಡಿದೆ. ಇದು ತುಂಬಾ ಪ್ರಭಾವಶಾಲಿಯಾಗಿದೆ. RSSನ ತಳಮಟ್ಟದ ಸ್ವಯಂಸೇವಕ ಮತ್ತು ಜನಸಂಘದ ಕಾರ್ಯಕರ್ತ ಹೇಗೆ ನಾಯಕರ ಪಾದಗಳ ಮುಂದೆ ನೆಲದ ಮೇಲೆ ಕುಳಿತು ರಾಜ್ಯದ ಸಿಎಂ ಮತ್ತು ದೇಶದ ಪ್ರಧಾನ ಮಂತ್ರಿಯಾದರು? ಇದು ಸಂಘಟನೆಯ ಶಕ್ತಿ. ಜೈ ಸಿಯಾ ರಾಮ್ ಎಂದು ಬರೆದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿ ಹಲವು ನಾಯಕರಿಗೆ ಟ್ಯಾಗ್ ಮಾಡಿದ್ದಾರೆ.
ಇನ್ನೂ ಪೋಸ್ಟ್ ಪಕ್ಷದಲ್ಲಿ ವಿವಾದವನ್ನು ಎಬ್ಬಿಸುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ನಾನು ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ವಿರೋಧಿಸುತ್ತೇನೆ. ಅವರು ಸಂವಿಧಾನ ಅಥವಾ ದೇಶದ ಕಾನೂನುಗಳನ್ನು ಗೌರವಿಸುವುದಿಲ್ಲ, ಅದು ನೋಂದಾಯಿಸದ ಸಂಸ್ಥೆ. ಆದರೆ ಅವರ ಸಂಘಟನಾ ಸಾಮರ್ಥ್ಯವನ್ನು ಮೆಚ್ಚುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).