ಐಎಎಸ್ (IAS Officer) ಅಧಿಕಾರಿ ವಂದನಾ ವೈದ್ಯ ಅವರ ಫಾರ್ಮ್‌ಹೌಸ್ ಮೇಲೆ ಪೊಲೀಸರ ದಾಳಿ
- ಐಎಎಸ್ ಅಧಿಕಾರಿ ವಂದನಾ ವೈದ್ಯ ಅವರ ಫಾರ್ಮ್‌ಹೌಸ್ ಮೇಲೆ ಪೊಲೀಸರ ದಾಳಿ
- ಜೂಜಾಟದಲ್ಲಿ ತೊಡಗಿದ್ದ 18 ಜನರ ಬಂಧನ; 13.68 ಲಕ್ಷ ರೂಪಾಯಿ ನಗದು ವಶ
- ಪೊಲೀಸರಿಂದ ಮುಂದುವರಿದ ತನಿಖೆ
ಇಂದೋರ್: ಐಎಎಸ್ ಅಧಿಕಾರಿ (IAS Officer) ವಂದನಾ ವೈದ್ಯ ಅವರಿಗೆ ಸೇರಿದ್ದ ಫಾರ್ಮಹೌಸ್ ಮೇಲೆ ದಾಳಿ ನಡೆಸಿದ ಇಂದೋರ್ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 18 ಜನರನ್ನು ಬಂಧಿಸಿದ ಕುರಿತು ವರದಿಯಾಗಿದೆ.
ಪ್ರಸ್ತುತ ರಾಜ್ಯ ಸರ್ಕಾರದ ಹಣಕಾಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ವಂದನಾ ವೈದ್ಯ ಅವರಿಗೆ ಸೇರಿರಿವ ಫಾರ್ಮಹೌಸ್ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಬುಧವಾರ ತಡರಾತ್ರಿ, ನಿಖರ ಮಾಹಿತಿಯ ಮೇರೆಗೆ ಇಂದೋರ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಅವಲಿಪುರ ಗ್ರಾಮದಲ್ಲಿರುವ ಫಾರ್ಮ್‌ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 18 ಜನ ಜೂಜುಕೋರರು ತಗಲಾಕೊಂಡಿದ್ದು, ಇತರ ಆರು ಜನ ಓಡಿಹೋಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಪೊಲೀಸರು ನಡೆಸಿದ ದಾಳಿಯಲ್ಲಿ, ಹತ್ತು ಡೆಕ್ ಇಸ್ಪೀಟ್ ಎಲೆಗಳು, ಮೂವತ್ತು ಮೊಬೈಲ್ಗಳು ಹಾಗೂ ಸುಮಾರು 13.68 ಲಕ್ಷ ನಗದನ್ನು ವಶ ಪಡಿಸಿಕೊಂಡಿರುವುದಾಗಿ ಪೋಲಿಸ್ ಮೂಲಗಳು ತಿಳಿಸಿವೆ.
ದಾಳಿಯ ನಂತರ, ಐಎಎಸ್ ಅಧಿಕಾರಿ ಅಪರಿಚಿತ ವ್ಯಕ್ತಿಗಳು ತಮ್ಮ ಫಾಮ್ಹೌಸ್ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಮತ್ತು ಕಳ್ಳತನ ಸಹ ನಡೆದಿದೆ ಎಂದು ವಂದನಾ ವೈದ್ಯ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಐಎಎಸ್ ಅಧಿಕಾರಿಯ ದೂರಿನ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ವ್ಯಕ್ತಿಗಳು ಫಾರ್ಮ್ಹೌಸ್ಗೆ ಹೇಗೆ ಪ್ರವೇಶಿಸಿದರು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಯಾಂಗ್ಚೆನ್ ಡೋಲ್ಕರ್ ಭುಟಿಯಾ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾನ್ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ, ಬೀಟ್‌ನ ಉಸ್ತುವಾರಿ ಸಬ್-ಇನ್‌ಸ್ಪೆಕ್ಟರ್ ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).