ರಾಹುಲ್ ಗಾಂಧಿ  
ದೇಶ

ಗುಜರಾತ್ ಯುವಕರನ್ನು ಡ್ರಗ್ಸ್​, ಅಪರಾಧದತ್ತ ದೂಡಲಾಗುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ! Rahul Gandhi

ಪ್ರಮುಖ ಮುಖ್ಯಾಂಶಗಳು

  • ಗುಜರಾತಿನಲ್ಲಿ ಮಾದಕ ದ್ರವ್ಯ ಮತ್ತು ಮದ್ಯದ ಹಾವಳಿ ಮಿತಿಮೀರಿದೆ ಎಂದ ರಾಹುಲ್​ ಗಾಂಧಿ
  • ಕಾಂಗ್ರೆಸ್‌ನ ಜನಾಕ್ರೋಶ ಯಾತ್ರೆಯ ಸಂದರ್ಭದಲ್ಲಿ ಈ ಮಾಹಿತಿ ತಿಳಿದುಬಂದಿದೆ ಎಂದ ರಾಗಾ
  • ತಮ್ಮ ಎಕ್ಸ್​ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡ ಕಾಂಗ್ರೆಸ್​ನ ವಿಪಕ್ಷ ನಾಯಕ
ಅಹಮದಾಬಾದ್​: ಗುಜರಾತಿನಲ್ಲಿ ಮಾದಕ ದ್ರವ್ಯ ಮತ್ತು ಮದ್ಯದ ಹಾವಳಿ ಮಿತಿಮೀರಿದ್ದು, ಯುವ ಜನಾಂಗ ಅದರ ಜಾಲಕ್ಕೆ ಸಿಲುಕಿದ್ದಾರೆಂದು ಸಂಸತ್ತಿನ ವಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ.
ಗುಜರಾತ್‌ನಲ್ಲಿ ಯುವಕರನ್ನು ಮಾದಕ ದ್ರವ್ಯ ಮತ್ತು ಅಪರಾಧ ಚಟುವಟಿಕೆಗಳತ್ತ ದೂಡಲಾಗುತ್ತಿದೆ ಎಂಬ ಭಯಾನಕ ಸಂಗತಿ ಕಾಂಗ್ರೆಸ್‌ನ ಜನಾಕ್ರೋಶ ಯಾತ್ರೆಯ ಸಂದರ್ಭದಲ್ಲಿ ತಿಳಿದುಬಂದಿದೆ. ಈ ಯಾತ್ರೆಯ ಸಂದರ್ಭದಲ್ಲಿ, ಜನರು, ವಿಶೇಷವಾಗಿ ಮಹಿಳೆಯರು, ಹೆಚ್ಚುತ್ತಿರುವ ಮಾದಕ ದ್ರವ್ಯ, ಅಕ್ರಮ ಮದ್ಯ ಮತ್ತು ಅಪರಾಧದ ಭೀತಿಯಿಂದ ತಮ್ಮ ಜೀವನದಲ್ಲಿ ಉಂಟಾಗಿರುವ ಅಭದ್ರತೆಯ ಭಾವನೆಯ ನಮ್ಮ ಬಳಿ ಪದೇಪದೆ ಹೇಳಿಕೊಂಡರು ಎಂದು ರಾಹುಲ್​ ಗಾಂಧಿ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗುಜರಾತ್, ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಾಡು, ಅಲ್ಲಿ ಸತ್ಯ, ನೈತಿಕತೆ ಮತ್ತು ನ್ಯಾಯದ ಸಂಪ್ರದಾಯಗಳು ಮೇಲುಗೈ ಸಾಧಿಸಬೇಕಿತ್ತು ಆದರೆ, ಕಳೆದ ಕೆಲವು ವರ್ಷಗಳಿಂದ ರಾಜ್ಯದ ಯುವಕರ ಭವಿಷ್ಯವನ್ನು ಮಾದಕ ದ್ರವ್ಯ ಮತ್ತು ಅಪರಾಧದ ಕತ್ತಲೆಯ ಲೋಕಕ್ಕೆ ತಳ್ಳಲಾಗುತ್ತಿದೆ ಎಂದು ರಾಹುಲ್​ ಗಾಂಧಿ ಹೇಳಿದರು.
ಅಪರಾಧಿಗಳನ್ನು ಬಿಜೆಪಿ ಸಚಿವರು ರಕ್ಷಿಸುತ್ತಿದ್ದಾರೆ ಮತ್ತು ಅದಕ್ಕಾಗಿಯೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರ ಏಕೆ ಮೌನವಾಗಿದೆ? ಯಾವೆಲ್ಲ ಬಿಜೆಪಿ ಸಚಿವರು ರಕ್ಷಣೆ ನೀಡುತ್ತಿದ್ದಾರೆ? ಗುಜರಾತ್‌ನ ದೇಶದ್ರೋಹಿಗಳನ್ನು ಏಕೆ ರಕ್ಷಿಸಲಾಗುತ್ತಿದೆ? ಎಂದು ಹರಿಹಾಯ್ದರು.
ಇತ್ತೀಚಿನ ವಿನಾಶಕಾರಿ ಪ್ರವಾಹವು ಸಾವಿರಾರು ಗುಜರಾತಿ ಕುಟುಂಬಗಳನ್ನು ನಾಶಮಾಡಿದೆ ಮತ್ತು ರೈತರ ಬೆಳೆಗಳನ್ನು ಹಾಳು ಮಾಡಿದೆ. ಇದರಿಂದ ಇಂದು ಗುಜರಾತ್ ಮುಳುಗುತ್ತಿದೆ. ನಿಮಗೆ ಗೊತ್ತು ಅಲ್ಲಿ ಡಬಲ್-ಎಂಜಿನ್ ಸರ್ಕಾರವಿದೆ. ಪ್ರಧಾನಿ ಕೂಡಾ ಗುಜರಾತ್​ನವರೇ ಆದರೆ, ಯಾವುದೇ ಪರಿಹಾರ ಅಥವಾ ಸಹಾನುಭೂತಿ ಮಾತ್ರ ಅಲ್ಲಿ ಕಾಣ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್​ನಿಂದ ಗುಜರಾತಿನಲ್ಲಿ ಜನ ಆಕ್ರೋಶ ಯಾತ್ರೆ
ರೈತರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಸಣ್ಣ ವ್ಯವಹಾರಗಳು ಮತ್ತು ಅಂಚಿನಲ್ಲಿರುವ ಗುಂಪುಗಳ ಕಳವಳಗಳನ್ನು ಎತ್ತಿ ತೋರಿಸಲು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ನವೆಂಬರ್ 21 ರಿಂದ ರಾಜ್ಯಾದ್ಯಂತ 'ಜನ ಆಕ್ರೋಶ ಯಾತ್ರೆ'ಯನ್ನು ಪ್ರಾರಂಭಿಸಿತು. ಉತ್ತರ ಗುಜರಾತ್‌ನ ಧೀಮಾದಿಂದ ಆರಂಭವಾದ ಯಾತ್ರೆಯು ಮೊದಲ ಹಂತದಲ್ಲಿ ಏಳು ಜಿಲ್ಲೆಗಳು, 40 ತಾಲೂಕುಗಳು ಮತ್ತು 12 ನಗರಗಳಲ್ಲಿ ಸಂಚರಿಸಲಿದೆ. ಈ ಅಭಿಯಾನವು 1,100 ಕಿಮೀ ವ್ಯಾಪಿಸಲಿದ್ದು, ಡಿಸೆಂಬರ್ 3 ರಂದು ಮೆಹ್ಸಾನಾ ಜಿಲ್ಲೆಯ ಬೆಚರಾಜಿ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳಲಿದೆ, (ಏಜನ್ಸೀಸ್).