ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ 28 ರೂ. ಹೆಚ್ಚಾಗುತ್ತಾ? ಕೇಂದ್ರದಿಂದ ಬಂತು ಸ್ಪಷ್ಟನೆ! Fuel Prices
- ದೇಶದಲ್ಲಿ ಪ್ರಸ್ತುತ ಪಂಚ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ
- ಮತದಾನ ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ
- ಹಣಕಾಸು ವಿಶ್ಲೇಷಣಾ ಸಂಸ್ಥೆ ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ನಿಂದ ವರದಿ
- ಇಂಧನ ಬೆಲೆಗಳ ಕುರಿತು ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ
ನವದೆಹಲಿ: ದೇಶದಲ್ಲಿ ಪ್ರಸ್ತುತ ಪಂಚ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ( Fuel Prices ) ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ವಿಶ್ಲೇಷಣಾ ಸಂಸ್ಥೆ ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಎಚ್ಚರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪ್ರತಿ ಲೀಟರ್‌ಗೆ 25 ರಿಂದ 28 ರೂ.ಗಳಷ್ಟು ಹೆಚ್ಚಾಗಬಹುದು ಎಂದು ವರದಿಯಾಗಿದೆ. ಯಾವಾಗ ಈ ವರದಿ ವೈರಲ್ ಆಯಿತೋ ಕೂಡಲೇ ಕೇಂದ್ರ ಸರ್ಕಾರವೂ ಕೂಡ ಸ್ಪಷ್ಟನೆ ನೀಡಿದೆ.
ಚುನಾವಣೆ ಹಿನ್ನೆಲೆಯಲ್ಲಿ ಪ್ರಸ್ತುತ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದರೆ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಗೆ ಮತದಾನ ಮುಗಿಯುತ್ತಿದ್ದಂತೆ ತೈಲ ಸಂಸ್ಕರಣಾ ಕಂಪನಿಗಳು ಎದುರಿಸುತ್ತಿರುವ ಬೃಹತ್ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಇಂಧನ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ವರದಿ ಹೇಳುತ್ತದೆ.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿಗಳಿಂದಾಗಿ ಜಾಗತಿಕ ಕಚ್ಚಾ ತೈಲ ಪೂರೈಕೆ ಗಮನಾರ್ಹ ಏರಿಳಿತವನ್ನು ಎದುರಿಸುತ್ತಿದೆ. ಭಾರತದ ತೈಲ ಆಮದು ಪ್ರಮಾಣದಲ್ಲಿ ಶೇ. 15 ರಷ್ಟು ಕುಸಿತ ಕಂಡಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದಾಗಿ ದೈನಂದಿನ ಆಮದು ವೆಚ್ಚವು ಸುಮಾರು 190 ರಿಂದ 210 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇನ್ನೂ ಏಪ್ರಿಲ್ 29 ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಇದರ ನಂತರ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ ಎಂಬ ವರದಿ ಇದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ನಲ್ಲೇ ಮುಂದುವರಿದರೆ, ಲೀಟರ್‌ಗೆ ರೂ.28 ವರೆಗಿನ ಹೆಚ್ಚಳ ಅನಿವಾರ್ಯವಾಗಿದೆ. ಆದರೆ, ಸರ್ಕಾರ ಇದನ್ನು ಹಂತ ಹಂತವಾಗಿ ಜಾರಿಗೆ ತರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಸರ್ಕಾರದ ಸ್ಪಷ್ಟನೆ ಏನು?
ಯಾವಾಗ ಇಂಧನ ದರ ಏರಿಕೆ ಸುದ್ದಿ ಹೊರಬಂತೋ ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿದೆ. ಇಂಧನ ಬೆಲೆಗಳ ಕುರಿತು ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಹರಿದಾಡುತ್ತಿರುವ ಸುದ್ದಿಗಳು ಆಧಾರರಹಿತವಾಗಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ, (ಏಜೆನ್ಸೀಸ್).