- ಇರಾನ್-ಅಮೆರಿಕ ಮಧ್ಯೆ ಶಾಂತಿ ಒಪ್ಪಂದ ಸಹಿ
- ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆ
- ತೈಲ ಬೆಲೆ ಇಳಿದರೂ ಇಂಧನ ಬೆಲೆಯಲ್ಲಿ ಇಲ್ಲ ಯಾವುದೇ ಕಡಿತ
- ಕೇಂದ್ರ ಸರ್ಕಾರಕ್ಕೆ 12,000 ಕೋಟಿ ರೂ. ಹೊರೆ
ನವದೆಹಲಿ: ಹಲವು ತಿಂಗಳುಗಳ ಕಾಲ ಭೀಕರ ಯುದ್ಧಕ್ಕೆ ಸಾಕ್ಷಿಯಾಗಿದ್ದ ಇರಾನ್ ಮತ್ತು ಅಮೆರಿಕ ಇದೀಗ ಶಾಂತಿ ಒಪ್ಪಂದಕ್ಕೆ ಅಸ್ತು ಎಂದಿದ್ದು, ಡೀಲ್ಗೆ ಸಹಿ ಕೂಡ ಹಾಕಿವೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿಢೀರ್ ಕುಸಿತವಾಗಿದೆ. ಆದರೆ, ಭಾರತೀಯ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇನ್ನೂ ಇಳಿಕೆ ಕಾಣದಿರುವುದು ಕೊಂಚ ಕೆರಳಿಸಿದೆ.
ಕೇಂದ್ರ ಸಚಿವರ ಮಾತು
ಇಂಧನ ಬೆಲೆ ಕುಸಿಯುವುದು ಸದ್ಯಕ್ಕೆ ದೂರದ ಮಾತು. ಅಗ್ಗದ ತೈಲ ನಮ್ಮ ದೇಶವನ್ನು ತಲುಪಲು ತೆಗೆದುಕೊಳ್ಳುವ ಸಮಯ ಮತ್ತು ಇತರ ಹಲವು ಅಂಶಗಳು ಚಿಲ್ಲರೆ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರಾದ ಸುರೇಶ್ ಗೋಪಿ ಹೇಳಿದ್ದಾರೆ.
ಹೊರ್ಮುಜ್ ಜಲಮಾರ್ಗದ ಮೂಲಕ ಅಗ್ಗದ ಕಚ್ಚಾ ತೈಲವನ್ನು ಭಾರತಕ್ಕೆ ಸಾಗಿಸಬೇಕಾಗಿದೆ. ಪ್ರಸ್ತುತ ಅಲ್ಲಿ ಹೆಚ್ಚಿನ ಹಡಗು ಸಂಚಾರವಿದೆ. ಇದೆಲ್ಲವೂ ಸಹಜ ಸ್ಥಿತಿಗೆ ಮರಳಲು ಸಮಯದ ಅಗತ್ಯವಿದೆ. ಇತ್ತೀಚಿನ ಇಂಧನ ಬೆಲೆಗಳ ಹೆಚ್ಚಳವು ಗ್ರಾಹಕರಿಗೆ ತೊಂದರೆಯನ್ನು ಉಂಟುಮಾಡಿದೆ ಮತ್ತು ಅಂತಾರಾಷ್ಟ್ರೀಯ ಬೆಲೆಗಳು ಇಳಿಕೆಯಾದರೂ ಈ ಹೆಚ್ಚಳವನ್ನು ತಕ್ಷಣದ ಮಟ್ಟಿಗೆ ಇಳಿಸಲು ಸಾಧ್ಯವಿಲ್ಲ ಎಂದರು.
12,000 ಕೋಟಿ ರೂ. ಹೊರೆ!
ಈ ವರ್ಷದ ಫೆಬ್ರವರಿಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ತೈಲ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸಿವೆ ಮತ್ತು ಕೇಂದ್ರ ಸರ್ಕಾರವು ಅದರ ಪರಿಣಾಮವನ್ನು ಸಂಪೂರ್ಣವಾಗಿ ಜನರ ಮೇಲೆ ಬಿಡದೆ ನಿಭಾಯಿಸಿದೆ. ಈ ಪ್ರಕ್ರಿಯೆಯಲ್ಲಿ, ಕೇಂದ್ರವು 12,000 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಮತ್ತು ಯಾವುದೇ ರಾಜ್ಯ ಸರ್ಕಾರವು ತನ್ನ ಅಬಕಾರಿ ಸುಂಕವನ್ನು ಕಡಿತಗೊಳಿಸಿಲ್ಲ ಎಂದು ತಿಳಿಸಿದರು,(ಏಜೆನ್ಸೀಸ್).