ಇಂಧನ ಬೆಲೆ ಏರಿಕೆ: ಸಾಮಾನ್ಯ ಜನರನ್ನು ಲೂಟಿ ಮಾಡಿ ಅದಾನಿಗೆ ಫ್ರೀ ಪಾಸ್ ನೀಡುತ್ತಿದ್ದಾರೆ! ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ!  
ದೇಶ

ಇಂಧನ ಬೆಲೆ ಏರಿಕೆ: ಸಾಮಾನ್ಯ ಜನರನ್ನು ಲೂಟಿ ಮಾಡಿ ಅದಾನಿಗೆ ಫ್ರೀ ಪಾಸ್ ನೀಡುತ್ತಿದ್ದಾರೆ! ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ! Mallikarjun Kharge

ನವದೆಹಲಿ: ದೇಶದಲ್ಲಿ ತೈಲ ಬೆಲೆ ಏರಿಕೆಯ ಬಿಸಿ ಮತ್ತೊಮ್ಮೆ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದ್ದು, ಇದರ ಬೆನ್ನಲ್ಲೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಭೀಕರ ಆಕ್ರೋಶ ಹೊರಹಾಕಿದ್ದಾರೆ. ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಳ ಮಾಡಲಾಗಿದ್ದು, ಇದು ಕೇವಲ ಒಂದು ವಾರದ ಅವಧಿಯಲ್ಲಿ ನಡೆದಿರುವ ಎರಡನೇ ಭಾರಿ ಏರಿಕೆಯಾಗಿದೆ.
ಸುಮಾರು ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ದರ ಪರಿಷ್ಕರಣೆಗೆ ಕೈಹಾಕಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿದ್ಯಮಾನವನ್ನು ತೀವ್ರವಾಗಿ ಖಂಡಿಸಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯ ಮತ್ತು ಉದ್ಯಮಿ ಗೌತಮ್ ಅದಾನಿ ಅವರಿಗೆ ನೀಡಲಾಗುತ್ತಿದೆ ಎನ್ನಲಾದ ರಕ್ಷಣೆಯನ್ನು ಜಾಗತಿಕ ಮಟ್ಟದಲ್ಲಿ ಬಯಲಿಗೆಳೆದಿದ್ದಾರೆ.

ಅದಾನಿಗೆ ಅಮೆರಿಕದಿಂದ ಫ್ರೀ ಪಾಸ್; ಇದು ಮೋದಿಯವರ ಕಾಂಪ್ರಮೈಸ್ಡ್ ಮಾಡೆಲ್!"

ಇಂಧನ ಬೆಲೆ ಏರಿಕೆಯ ಬೆನ್ನಲ್ಲೇ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ನೇರ ಯುದ್ಧ ಸಾರಿರುವ ಮಲ್ಲಿಕಾರ್ಜುನ ಖರ್ಗೆ, ಉದ್ಯಮಿ ಗೌತಮ್ ಅದಾನಿ ಅವರ ಮೇಲಿನ ಅಮೆರಿಕದ ಕೋರ್ಟ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ. ನ್ಯೂಯಾರ್ಕ್‌ನ ಸೆಕ್ಯುರಿಟೀಸ್ ಮತ್ತು ವೈರ್ ವಂಚನೆ ಪ್ರಕರಣದಲ್ಲಿ ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಮೇಲಿನ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆಯು ಸಂಪೂರ್ಣವಾಗಿ ಕೈಬಿಟ್ಟಿರುವ ನಿರ್ಧಾರದ ಬೆನ್ನಲ್ಲೇ ಖರ್ಗೆ ಈ ವಾಗ್ದಾಳಿ ನಡೆಸಿದ್ದಾರೆ.
ದರ ಏರಿಕೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಮೋದಿ ಸರ್ಕಾರ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ತಾವೇ ವೇದಿಕೆ ಸಿದ್ಧಪಡಿಸಿ, ಜನರಿಗೆ ಉಳಿತಾಯದ ಬಗ್ಗೆ ಪಾಠ ಮಾಡುತ್ತಾ, ತಮ್ಮದೇ ವೈಫಲ್ಯಗಳ ಹೊರೆಯನ್ನು ಸಾರ್ವಜನಿಕರ ಮೇಲೆ ಹೊರಿಸುವ ಕೆಲಸ ಭರದಿಂದ ಸಾಗಿದೆ. ಸಾಮಾನ್ಯ ಜನರನ್ನು ಲೂಟಿ ಮಾಡುವುದು ಮತ್ತು ಅದಾನಿಗೆ ಅಮೆರಿಕದಿಂದ ಮುಕ್ತಿ ಕೊಡಿಸುವುದು ಇದೇ ಮೋದಿಜಿಯವರ ಕಾಂಪ್ರಮೈಸ್ಡ್ ಮಾಡೆಲ್ ಎಂದು ಖರ್ಗೆ ಗಂಭೀರವಾಗಿ ಆರೋಪಿಸಿದ್ದಾರೆ.

ರಷ್ಯಾ ತೈಲ ಖರೀದಿಗಾಗಿ ಅಮೆರಿಕದ ಮುಂದೆ ಮಂಡಿಯೂರಿ ನಿಂತ ಭೀಕರ ಸತ್ಯ ಬಯಲು!

ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ವಿಷಯದಲ್ಲೂ ಪ್ರಧಾನಿ ಮೋದಿಯವರ ವಿಶ್ವಗುರು ಇಮೇಜ್ ಅನ್ನು ಖರ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಷ್ಯಾದ ಸಮುದ್ರದ ಕಚ್ಚಾ ತೈಲ ಮಾರಾಟ ಮತ್ತು ವಿತರಣೆಯ ಮೇಲಿನ ಅಮೆರಿಕದ ತಾತ್ಕಾಲಿಕ ನಿರ್ಬಂಧಗಳ ವಿನಾಯಿತಿ ಮೇ 16ಕ್ಕೆ ಕೊನೆಗೊಂಡಿದೆ.
ಇದನ್ನು ಪ್ರಸ್ತಾಪಿಸಿರುವ ಖರ್ಗೆ, ತಾವೊಬ್ಬರೇ 'ವಿಶ್ವಗುರು' ಎಂದು ವಿದೇಶಗಳಲ್ಲಿ ಸುಳ್ಳು ಹೆಮ್ಮೆಯ ಪ್ರಚಾರ ಮಾಡುವ ಮೋದಿ ಜಿ, ರಷ್ಯಾದ ತೈಲವನ್ನು ಖರೀದಿಸಲು ಅಮೆರಿಕದ ಮುಂದೆ ಕೇವಲ ಒಂದು ತಿಂಗಳ ವಿನಾಯಿತಿಯ ಅನುಮತಿಗಾಗಿ ಕೈಯೊಡ್ಡಿ ಬೇಡಿಕೊಂಡಿದ್ದಾರೆ. ಪ್ರತಿ ಬಾರಿಯೂ ಅವರು ಹೀಗೆ ಮಾಡಿದಾಗ 140 ಕೋಟಿ ಭಾರತೀಯರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಈ ಹಿಂದಿನ ಯಾವುದೇ ಸರ್ಕಾರ ಇಷ್ಟು ಕೀಳು ಮಟ್ಟಕ್ಕೆ ಇಳಿದಿರಲಿಲ್ಲ ಎಂದು ಗುಡುಗಿದ್ದಾರೆ. ಒಂದು ವೇಳೆ ಸರ್ಕಾರದ ಪ್ರಕಾರ ನಮಗೆ ಅನುಮತಿ ಸಿಕ್ಕಿದೆ ಎಂದಾದರೆ, ರಷ್ಯಾ ತೈಲದ ಲಾಭ ಸಾರ್ವಜನಿಕರಿಗೆ ಸಿಗದೆ, ಪೆಟ್ರೋಲ್-ಡೀಸೆಲ್ ದರ ಏರಿಕೆಯ ಹೊರೆಯನ್ನು ಸಾಮಾನ್ಯ ಜನರ ಮೇಲೆ ಏಕೆ ಹೇರಲಾಗುತ್ತಿದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

"ಸಾರ್ವಜನಿಕರಿಗೆ ಉತ್ತರದಾಯಿಯಾಗಿರಿ, ರಿಯಲ್ ಪ್ರಶ್ನೆಗಳಿಂದ ಓಡಿಹೋಗಬೇಡಿ!"

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಬಿಜೆಪಿಯು ಬಿಕ್ಕಟ್ಟಿನ ಸಮಯದಲ್ಲಿ ಆಡಳಿತಕ್ಕಿಂತ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ವಿದೇಶಗಳಲ್ಲಿ ಪ್ರಾಯೋಜಿತ ಪಿಆರ್ ಮಾಡುವುದರಿಂದ ಯಾರೂ ವಿಶ್ವಗುರು ಆಗುವುದಿಲ್ಲ. ಮೋದಿ ನೀವು ಜನರಿಗೆ ಉತ್ತರದಾಯಿಯಾಗುವುದನ್ನು ಕಲಿಯಬೇಕು. ಅಸಲಿ ಪ್ರಶ್ನೆಗಳಿಂದ ಓಡಿಹೋಗಬೇಡಿ. ನೀವು ಮಾವಿನ ಹಣ್ಣನ್ನು ಹೇಗೆ ತಿನ್ನುತ್ತೀರಿ ಅಥವಾ ಯಾವ ಟಾನಿಕ್ ಕುಡಿಯುತ್ತೀರಿ ಎಂಬ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆಸಕ್ತಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಸ್ತುತ ತೈಲ ಬಿಕ್ಕಟ್ಟಿನ ಬಗ್ಗೆ ನೀವು ವಾಸ್ತವವಾಗಿ ಏನು ಮಾಡುತ್ತಿದ್ದೀರಿ ಎಂದು ಉತ್ತರಿಸಿದರೆ ಮಾತ್ರ ನಿಮ್ಮನ್ನು ನಿಜವಾದ ಪ್ರಧಾನ ಸೇವಕ ಎಂದು ಕರೆಯಬಹುದು. ಇಲ್ಲದಿದ್ದರೆ, ನೀವು ಕೇವಲ ಒಬ್ಬ ಪ್ರಚಾರಕ ಆಗಿ ಉಳಿಯುತ್ತೀರಿ ಎಂದು ಖರ್ಗೆ ಹೇಳಿದ್ದಾರೆ. ಅದರೆ, ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಅಮೆರಿಕದ ನಿರ್ಬಂಧಗಳ ವಿನಾಯಿತಿಯನ್ನು ಲೆಕ್ಕಿಸದೆ ಭಾರತವು ತನ್ನ ಇಂಧನ ಭದ್ರತೆಯ ಅಗತ್ಯತೆಗಳ ಆಧಾರದ ಮೇಲೆ ರಷ್ಯಾ ತೈಲ ಖರೀದಿಯನ್ನು ಮುಂದುವರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್​).