ಹೊಸದೆಹಲಿ: ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು, ದೇಶದಲ್ಲಿ ಇಂಧನ ದರಗಳು ಸಾರ್ವಕಾಲಿಕ ದಾಖಲೆ ಬರೆಯುತ್ತಿವೆ. ಸೋಮವಾರ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ರೂ. 2.61 ಹಾಗೂ ಡೀಸೆಲ್ ದರವನ್ನು ರೂ. 2.71 ರಷ್ಟು ಭಾರಿ ಏರಿಕೆ ಮಾಡಿವೆ. ಈ ತೀವ್ರ ಏರಿಕೆಯೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಕೊನೆಗೂ ರೂ. 100ರ ಗಡಿ ದಾಟಿದ್ದು, ಪ್ರತಿ ಲೀಟರ್‌ಗೆ ರೂ. 102.12 ತಲುಪಿದೆ.
ಕಳೆದ ಕೇವಲ ಹತ್ತು ದಿನಗಳಲ್ಲಿ ಇಂಧನ ದರ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದ್ದು, ಸಾರ್ವಜನಿಕರು ತತ್ತರಿಸುವಂತೆ ಮಾಡಿದೆ. ಶನಿವಾರವಷ್ಟೇ (ಮೇ 23) ಪೆಟ್ರೋಲ್ ಮೇಲೆ 87 ಪೈಸೆ ಮತ್ತು ಡೀಸೆಲ್ ಮೇಲೆ 91 ಪೈಸೆ ಹೆಚ್ಚಿಸಲಾಗಿತ್ತು. ಅದಾಗಿ ಎರಡೇ ದಿನಗಳಲ್ಲಿ ಮತ್ತೆ ದೊಡ್ಡ ಪ್ರಮಾಣದ ಬರೆ ಎಳೆಯಲಾಗಿದೆ.
ಪೆಟ್ರೋಲ್ ದರ ವಿವರ
ದೆಹಲಿ: ರೂ. 102.12 (ಏರಿಕೆ: +2.61)
ಮುಂಬೈ: ರೂ. 111.21 (ಏರಿಕೆ: +2.72)
ಕೊಲ್ಕತ್ತಾ: ರೂ. 113.51 (ಏರಿಕೆ: +2.87)
ಚೆನ್ನೈ: ರೂ. 107.77 (ಏರಿಕೆ: +2.46)
ಡೀಸೆಲ್ ದರ ವಿವರ
ದೆಹಲಿ: ರೂ. 95.20 (ಏರಿಕೆ: +2.71)
ಮುಂಬೈ: ರೂ. 97.83 (ಏರಿಕೆ: +2.81)
ಕೊಲ್ಕತ್ತಾ: ರೂ. 99.82 (ಏರಿಕೆ: +2.80)
ಚೆನ್ನೈ: ರೂ. 99.55 (ಏರಿಕೆ: +2.57)
ಬೆಲೆ ಏರಿಕೆಗೆ ಇರಾನ್ ಯುದ್ಧವೇ ಕಾರಣವೇ?
ಫೆಬ್ರವರಿ 28 ರಿಂದ ಆರಂಭವಾಗಿರುವ ಇರಾನ್ ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾದ 'ಸ್ಟ್ರೇಟ್ ಆಫ್ ಹಾರ್ಮುಜ್' (ಹಾರ್ಮುಜ್ ಜಲಸಂಧಿ) ಭಾಗದಲ್ಲಿ ಸೃಷ್ಟಿಯಾಗಿರುವ ಆತಂಕಕಾರಿ ವಾತಾವರಣವು ಕಚ್ಚಾ ತೈಲದ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿದೆ.
ಕಳೆದ ಎರಡು ತಿಂಗಳುಗಳಿಂದ ದೇಶದ ಸರ್ಕಾರಿ ತೈಲ ಮಾರಾಟ ಕಂಪನಿಗಳು (OMCs) ಸಾರ್ವಜನಿಕರ ಹಿತದೃಷ್ಟಿಯಿಂದ ಹಳೆಯ ದರದಲ್ಲೇ ಇಂಧನ ಮಾರಾಟ ಮಾಡುತ್ತಿದ್ದವು. ಆದರೆ ಕಚ್ಚಾ ತೈಲದ ಬೆಲೆ ಏರುತ್ತಲೇ ಹೋದ ಕಾರಣ ತೈಲ ಕಂಪನಿಗಳ ನಷ್ಟವು ದಿನಕ್ಕೆ ಸುಮಾರು 1,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿತ್ತು. ಈ ಭಾರಿ ನಷ್ಟವನ್ನು ತಡೆದುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಭೀತಿ
ಈಗಾಗಲೇ ಹಣದುಬ್ಬರದಿಂದ ಕಷ್ಟಪಡುತ್ತಿರುವ ಸಾಮಾನ್ಯ ಜನರಿಗೆ ಈ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಲಾರಿ ಮತ್ತು ಇತರೆ ಸರಕು ಸಾಗಣೆ ವಾಹನಗಳ ಬಾಡಿಗೆ ಹೆಚ್ಚಾಗಲಿದೆ. ಇದು ನೇರವಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಸಾಗಣೆ ವೆಚ್ಚ ಹೆಚ್ಚಾಗುವುದರಿಂದ ಹಾಲು, ಬ್ರೆಡ್, ತರಕಾರಿ ಸೇರಿದಂತೆ ನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಆತಂಕ ಎದುರಾಗಿದೆ,(ಏಜೆನ್ಸೀಸ್).