ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರ ಹೆಚ್ಚಳ?Fuel Price Hike
- ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್‌ಗೆ 4-5 ರೂ. ಏರಿಕೆ ಸಾಧ್ಯತೆ.
- 2022ರ ನಂತರ ಮೊದಲ ಬಾರಿಗೆ ಇಂಧನ ದರ ಬದಲಾವಣೆಗೆ ಸಿದ್ಧತೆ
- ಮುಂದಿನ ಒಂದು ವಾರದೊಳಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ ಸಾಧ್ಯತೆ
ನವ ದೆಹಲಿ: ಪಂಚ ರಾಜ್ಯಗಳ ಚುನಾವಣೆ ಕಾರ್ಯ ಮುಗಿದ ಬೆನ್ನಲ್ಲೇ ಎಲ್‌ಪಿಜಿ ಮತ್ತು ಪೆಟ್ರೋಲ್ ಮತ್ತು ಡೀಸೆಲ್(Fuel Price Hike) ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ. ಮುಂದಿನ ಒಂದು ವಾರದ ಒಳಗೆ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಪಶ್ಚಿಮ ಏಷ್ಯಾ, ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷವು ಬೂದಿ ಮುಚ್ಚಿದ ಕೆಡಂದಂತೆ ಆರದೆ ಉದ್ವಿಗ್ನತೆಯಿಂದ ಕೂಡಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ, ಜಾಗತಿಕ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಈ ಸಮಸ್ಯೆಗಳನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಿಸಲು ಗಂಭೀರವಾಗಿ ಆಲೋಚಿಸುತ್ತಿದೆ ಎನ್ನಲಾಗಿದೆ.
ಯಾವುದರ ಬೆಲೆ ಎಷ್ಟಾಗಬಹುದು?
ಈಗಾಗಲೇ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸುಮಾರು 4 ರಿಂದ 5 ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಗೃಹ ಬಳಕೆ ಸಾಧನ ಅಡುಗೆ ಅನಿಲ (ಎಲ್‌ಪಿಜಿ) 40 ರಿಂದ 50 ರೂಪಾಯಿಗಳಷ್ಟು ಏರಿಕೆ ಕಾಣಬಹುದು ಎಂದು ಅಂದಾಜಿಸಲಾಗಿದೆ.
ಅಕಸ್ಮಾತ್ ಈ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ದೊರೆತರೆ ಸುಮಾರು ನಾಲ್ಕು ವರ್ಷಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಆಗುತ್ತಿರುವ ಮೊದಲ ದೊಡ್ಡ ಹೆಚ್ಚಳ ಇದಾಗಲಿದೆ. 2022 ರಿಂದ ಚಿಲ್ಲರೆ ಮಾರಾಟ ದರಗಳನ್ನು ಬಹುತೇಕ ಸ್ಥಗಿತಗೊಳಿಸಲಾಗಿತ್ತು.
ಬೆಲೆ ಏರಿಕೆಗೆ ಕಾರಣವೇನು?
ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ತೈಲ ಪೂರೈಕೆಯಲ್ಲಿ ಅಡಚಣೆ, ಹಡಗು ಸಾಗಣೆಯಲ್ಲಿನ ಅಪಾಯಗಳು ಮತ್ತು ಸುದೀರ್ಘ ಅಸ್ಥಿರತೆಯು ಬೆಲೆ ಏರಿಕೆಗೆ ಪ್ರಚೋದನೆ ನೀಡಿವೆ.
ಚಿಲ್ಲರೆ ಮಾರಾಟ ದರದಲ್ಲಿ ಬದಲಾವಣೆಯಾಗದ ಕಾರಣ, ತೈಲ ಮಾರಾಟ ಕಂಪನಿಗಳು ಸದ್ಯ ಭಾರಿ ನಷ್ಟವನ್ನು ಅನುಭವಿಸುತ್ತಿದೆ. ಇನ್‌ಪುಟ್ ವೆಚ್ಚ ಹೆಚ್ಚಾಗಿರುವುದರಿಂದ ಕಂಪನಿಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ.ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗಳ ಬೆನ್ನಲ್ಲೇ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಸರ್ಕಾರ ಹೇಳಿತ್ತಾದರೂ, ಬದಲಾದ ಜಾಗತಿಕ ಸನ್ನಿವೇಶವು ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಾಡಿದೆ.
ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ
ಬೆಲೆ ಏರಿಕೆ ಬಗ್ಗೆ ತೀರ್ಮಾನಿಸುತ್ತಿದೆ. ಜೊತೆಗೆ ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. 5 ರಿಂದ 7 ದಿನಗಳಲ್ಲಿ ಬೆಲೆ ಏರಿಕೆ ಬಗ್ಗೆ ಅಂತಿಮ ತೀರ್ಮಾನವನ್ನು ಕೊಡಲಿದ್ದಾರೆ. ತೈಲ ಕಂಪನಿಗಳ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಸಾಮಾನ್ಯ ಜನರ ಮೇಲೆ ಹಣದುಬ್ಬರದ ಹೊರೆ ಬೀಳದಂತೆ ನೋಡಿಕೊಳ್ಳುವುದು - ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ,(ಏಜೆನ್ಸೀಸ್).