100 ರೂ. ಹುಣಸೆ ಬೀಜಕ್ಕೆ ಲಕ್ಷ ಲಕ್ಷ ಬೆಲೆ, ನೂರಕ್ಕೂ ಹೆಚ್ಚು ವಿಡಿಯೋ... ಮಹಾರಾಷ್ಟ್ರ ರಾಜಕೀಯದಲ್ಲಿ 'ಖಾರತ್' ಕಂಪನ! Ashok Kharat
- ಅಶೋಕ್ ಖಾರತ್ ಪ್ರಕರಣವು ಭಕ್ತಿ ಮತ್ತು ಶೋಷಣೆಯ ನಡುವಿನ ಕರಾಳ ಮುಖವನ್ನು ಅನಾವರಣಗೊಳಿಸಿದೆ
- ತನ್ನಲ್ಲಿ ಪವಾಡದ ಶಕ್ತಿಯಿದೆಯೆಂದು ನಂಬಿಸಿ, ಅಮಾಯಕ ಭಕ್ತರ ಹಣದ ಮೇಲೆ ಕಣ್ಣಿಟ್ಟಿದ್ದ ಈತ
- ಧರ್ಮದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದಲ್ಲದೆ ಲೈಂಗಿಕ ದೌರ್ಜನ್ಯದಂತಹ ಆರೋಪ ಹೊತ್ತಿದ್ದಾನೆ
- ಆತ ಸೃಷ್ಟಿಸಿದ್ದ ಸುಳ್ಳಿನ ಸಾಮ್ರಾಜ್ಯ ಕ್ಷಣಾರ್ಧದಲ್ಲಿ ಕುಸಿದು ಬಿದ್ದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ
Ashok Kharat : ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಆಧ್ಯಾತ್ಮದ ಮುಖವಾಡ ಧರಿಸಿ ಜನಸಾಮಾನ್ಯರನ್ನು ವಂಚಿಸುತ್ತಿದ್ದ ಸ್ವಯಂ ಘೋಷಿತ ದೇವಮಾನವ ಅಶೋಕ್ ಖಾರತ್ ಪ್ರಕರಣವು ಭಕ್ತಿ ಮತ್ತು ಶೋಷಣೆಯ ನಡುವಿನ ಕರಾಳ ಮುಖವನ್ನು ಅನಾವರಣಗೊಳಿಸಿದೆ. ತನ್ನಲ್ಲಿ ಪವಾಡದ ಶಕ್ತಿಯಿದೆಯೆಂದು ನಂಬಿಸಿ, ಅಮಾಯಕ ಭಕ್ತರ ಹಣದ ಮೇಲೆ ಕಣ್ಣಿಟ್ಟಿದ್ದ ಈತ, ಧರ್ಮದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದಲ್ಲದೆ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳನ್ನು ಹೊತ್ತುಕೊಂಡಿದ್ದಾನೆ. ನಂಬಿಕೆಯೇ ಬಂಡವಾಳವಾಗಿಸಿಕೊಂಡು ದೈವತ್ವದ ಪಟ್ಟಕ್ಕೇರಿದ್ದ ಈ 'ಬೂಟಾಟಿಕೆ ಸಂತ'ನ ಅಸಲಿ ಬಣ್ಣ ಬಯಲಾದಾಗ, ಆತ ಸೃಷ್ಟಿಸಿದ್ದ ಸುಳ್ಳಿನ ಸಾಮ್ರಾಜ್ಯ ಕ್ಷಣಾರ್ಧದಲ್ಲಿ ಕುಸಿದು ಬಿದ್ದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಅಶೋಕ್ ಖಾರತ್, ಕಳೆದ ವಾರ ಮಹಿಳೆಯೊಬ್ಬರ ಮೇಲೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ಬಳಿಕ ಭಾರಿ ಸುದ್ದಿಯಾದನು. ಆತನ ಒಂದೊಂದೇ ಕರಾಳ ಮುಖ ಮಹಾರಾಷ್ಟ್ರ ಪೊಲೀಸರ ತನಿಖೆಯಿಂದ ಅನಾವಾರಣ ಆಗುತ್ತಿದ್ದಂತೆ ಅಶೋಕ್ ಖಾರತ್ ಹೆಸರು ಇದೀಗ ಮಹಾರಾಷ್ಟ್ರದಲ್ಲಿ ಭಾರಿ ಸಂಚಲವನ್ನು ಮೂಡಿಸಿದೆ.
ನಿನ್ನ ಗಂಡನಿಗೆ ಜೀವ ಬೆದರಿಕೆ ಇದು ಹೇಳಿ ಸಂತ್ರಸ್ತ ಮಹಿಳೆಯನ್ನು ತನ್ನ ಕಚೇರಿಗೆ ಕರೆಸಿಕೊಂಡು, ಮದ್ಯ ಬೆರೆಸಿದ ಡ್ರಿಂಕ್ಸ್ ನೀಡಿ ಅತ್ಯಾಚಾರ ಮಾಡುತ್ತಿದ್ದ ಎಂದು ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾಳೆ. ಇದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಮಹಿಳೆ ಖಾರತ್ ವಿರುದ್ಧ ದೂರು ದಾಖಲಿಸಿದರು. ನಾನು ಗರ್ಭಿಣಿ ಮತ್ತು ಪೂಜೆಯ ಹೆಸರಿನಲ್ಲಿ ಖಾರತ್ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ನನ್ನ ಗಂಡನನ್ನು ಹೊರಗೆ ನಿಲ್ಲಿಸಿ, ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಆತ ತನಗೆ ಬೆದರಿಕೆ ಹಾಕಿದ್ದಾನೆ ಅಂತಾನೂ ಆರೋಪಿಸಿದ್ದಾಳೆ.
ಖಾರತ್ ಕಾರ್ಯತಂತ್ರ ಹೇಗಿತ್ತು?
ಅಂದಹಾಗೆ, ಖಾರತ್ ವಿರುದ್ಧ ಅನೇಕ ಮಹಿಳೆಯರು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಈತ ಭಯ ಮತ್ತು ಮೂಢನಂಬಿಕೆಗಳನ್ನು ಬಳಸಿಕೊಂಡು ನೂರಾರು ಮಹಿಳೆಯರನ್ನು ಶೋಷಿಸಿ, ತನ್ನ ಸಾಮ್ರಾಜ್ಯವನ್ನು ಹೇಗೆ ಕಟ್ಟಿದ ಎಂಬ ವಿಚಾರವನ್ನು ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ. ತನ್ನ ಕಚೇರಿಯಲ್ಲಿ ಮಾಟ-ಮಂತ್ರದ ವಾತಾವರಣ ನಿರ್ಮಿಸುತ್ತಿದ್ದ ಈತ, ಜನರಿಗೆ 'ವಶೀಕರಣ' ವಿದ್ಯೆಯ ಆಮಿಷವೊಡ್ಡುತ್ತಿದ್ದನು. ಅಲ್ಲದೆ, ತನ್ನ ಸೂಚನೆಗಳನ್ನು ಪಾಲಿಸದಿದ್ದರೆ ಜೀವನದಲ್ಲಿ ಘೋರ ಅನಾಹುತಗಳಾಗುತ್ತವೆ ಎಂದು ಬೆದರಿಸಿ ಸಂತ್ರಸ್ತರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದನು ಎಂದು ಅವನಿಂದ ದೌರ್ಜನ್ಯಕ್ಕೆ ಒಳಗಾದವರು ತಿಳಿಸಿದ್ದಾರೆ.
ರಿಮೋಟ್ ಕಂಟ್ರೋಲ್ ಹಾವು
ಖಾರತ್ ಬಳಿ ರಿಮೋಟ್ ಕಂಟ್ರೋಲ್ ಹಾವು ಇತ್ತು. ಇದರ ಮೂಲಕ ತಾನು ಅತಿಂದ್ರೀಯ ಶಕ್ತಿಗಳನ್ನು ಹೊಂದಿದ್ದೇನೆ ಎಂದು ಸಂತ್ರಸ್ತತರನ್ನು ನಂಬಿಸುತ್ತಿದ್ದ. ಅಲ್ಲದೆ, ತನ್ನ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಹುಲಿ ಚರ್ಮ ಮತ್ತು ವನ್ಯಜೀವಿಗಳ ಕಲಾಕೃತಿಗಳನ್ನು ಬಳಸಿ, ತಾನೊಬ್ಬ ಮಾಯಾವಿ ಎಂದು ಬಿಂಬಿಸಿದ್ದ. ಆತನ ಸೆಟಪ್ ನೋಡಿದವರು ಆತನನ್ನು ನಂಬಿಯೇ ಬಿಟ್ಟಿದ್ದರು. ಈ ಖಾರತ್ ಯಾವ ಮಟ್ಟಿಗೆ ಜನರಿಗೆ ವಂಚನೆ ಮಾಡುತ್ತಿದ್ದ ಅಂದರೆ, ಕೇವಲ ನೂರು ರೂಪಾಯಿ ಬೆಲೆಬಾಳುವ ಕಾಡು ಹುಣಸೆ ಬೀಜಗಳನ್ನು "ಮಂತ್ರಿಸಿದ ಪ್ರಸಾದ" ಎಂದು ನಂಬಿಸಿ ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಜನರ ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಳ್ಳುತ್ತಿದ್ದ ಈತ, ವ್ಯಕ್ತಿಗೆ ಅನುಗುಣವಾಗಿ 10,000 ದಿಂದ 1 ಲಕ್ಷ ರೂಪಾಯಿಗಳವರೆಗೆ ಹಣ ವಸೂಲಿ ಮಾಡುತ್ತಿದ್ದನು. ಅಷ್ಟೇ ಅಲ್ಲದೆ, ದೈವಿಕ ಶಕ್ತಿ ಮತ್ತು ಗುಣಪಡಿಸುವ ಸಾಮರ್ಥ್ಯವಿದೆ ಎಂದು ಸುಳ್ಳು ಹೇಳಿ ನಕಲಿ ರತ್ನಗಳನ್ನು ಕೂಡ ಜನರಿಗೆ ಮಾರಿ ವಂಚಿಸುತ್ತಿದ್ದನು.
ಎಸ್ಟಿಡಿ ಬೂತ್ನಿಂದ ದೊಡ್ಡ ಸಾಮ್ರಾಜ್ಯ
ಅಶೋಕ್ ಖಾರತ್ ತನ್ನ ವೃತ್ತಿಜೀವನವನ್ನು ಅತ್ಯಂತ ಸಾಮಾನ್ಯ ಮಟ್ಟದಿಂದ ಆರಂಭಿಸಿದ್ದನು. ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಕೇವಲ 150 ಚದರ ಅಡಿಯ ಒಂದು ಸಣ್ಣ ಬಾಡಿಗೆ ಅಂಗಡಿಯಲ್ಲಿ ಈತ 'STD-PCO' ಬೂತ್ ನಡೆಸುತ್ತಿದ್ದನು. ಅಂದು ಕೇವಲ ಪೋನ್ ಕರೆಗಳ ಸೌಲಭ್ಯ ನೀಡುತ್ತಿದ್ದ ಈತ, ನಂತರದ ದಿನಗಳಲ್ಲಿ ಜನರ ಮುಗ್ಧತೆ ಮತ್ತು ಮೂಢನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು 'ದೇವಮಾನವ'ನಂತೆ ನಟಿಸಲು ಆರಂಭಿಸಿದನು. ಈ ಸಣ್ಣ ಅಂಗಡಿಯಿಂದಲೇ ತನ್ನ ಸಂಪರ್ಕಗಳನ್ನು ಬೆಳೆಸಿಕೊಂಡ ಖಾರತ್, ಹಂತಹಂತವಾಗಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಸಾಮ್ರಾಜ್ಯವನ್ನು ಕಟ್ಟಿದ ಎನ್ನುವುದು ಈಗ ಎಲ್ಲರನ್ನೂ ಬೆರಗುಗೊಳಿಸಿದೆ.
52 ಆಸ್ತಿಗಳಿಗೆ ದಾಖಲೆಗಳಿವೆ
ಖಾರತ್ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳು ಆತನ ಐಷಾರಾಮಿ ಜೀವನಶೈಲಿಯನ್ನು ಬೆಳಕಿಗೆ ತಂದಿವೆ. ಖಾರತ್ ವ್ಯವಹಾರವು ದೊಡ್ಡದಾಗಿ ಬೆಳೆದ ಬಳಿಕ ಆತ ಸುಮಾರು 150 ವಿದೇಶ ಪ್ರವಾಸಗಳನ್ನು ಮಾಡಿದ್ದಾನೆ. ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ದಕ್ಷಿಣ ಕೊರಿಯಾಕ್ಕೆ ಮಾಡಿದ ಪ್ರವಾಸದ ಫೋಟೋಗಳು ಇದೀಗ ವೈರಲ್ ಆಗಿವೆ. ಈ ಐಷಾರಾಮಿ ಪ್ರವಾಸಗಳಿಗೆ ಸುಲಿಗೆ ಮತ್ತು ಮೋಸದ ಆಚರಣೆಗಳಿಂದ ಸಂಗ್ರಹಿಸಿದ ಹಣವನ್ನು ಬಳಸಲಾಗಿದೆಯೇ ಎಂಬ ಆಯಾಮದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು, ಖಾರತ್ಗೆ ದೇವಾಲಯದ ಟ್ರಸ್ಟ್‌ನೊಂದಿಗೆ ಸಂಪರ್ಕವಿದೆ ಎಂದು ಕಂಡುಹಿಡಿದ ನಂತರ, ಈಶಾನೇಶ್ವರ ಮಹಾದೇವ ದೇವಾಲಯದೊಂದಿಗೆ ಸಂಪರ್ಕ ಹೊಂದಿರುವ ಜನರನ್ನು ವಿಚಾರಣೆ ನಡೆಸಿದೆ. ಖಾರತ್, ನಾಸಿಕ್‌ನ ಮಿರ್ಗಾಂವ್‌ನಲ್ಲಿರುವ ಟ್ರಸ್ಟ್ ಅನ್ನು ನಡೆಸುವ ಟ್ರಸ್ಟ್‌ನ ಅಧ್ಯಕ್ಷನು ಕೂಡ ಹೌದು. ಸ್ವಯಂ ಘೋಷಿತ ದೇವಮಾನವನಿಗೆ ಒಂದು ತೋಟದ ಮನೆ ಮತ್ತು ಬಂಗಲೆ ಕೂಡ ಇದೆ. ಕೆಲವು ದೂರುಗಳ ಪ್ರಕಾರ ಆತನ ಬಳಿ 52 ಆಸ್ತಿಗಳಿಗೆ ದಾಖಲೆಗಳಿವೆ ಎಂದು ಆರೋಪಿಸಲಾಗಿದೆ.
ರಾಜಕೀಯ ಲಿಂಕ್
ಈ ವಂಚಕ 'ದೇವಮಾನವ'ನ ಪತನವು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಹಿರಿಯ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಖಾರತ್‌ನ ಭಕ್ತರಾಗಿದ್ದರು ಎಂಬ ವಿಷಯ ತನಿಖೆಯಿಂದ ಹೊರಬಂದಿದೆ. ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ರೂಪಾಲಿ ಚಾಕಂಕರ್ ಅವರು ಖಾರತ್ ಜೊತೆಗಿನ ನಂಟಿನ ಕಾರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆಯ ಮೇರೆಗೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರೂಪಾಲಿ ಚಾಕಂಕರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ನನ್ನ ಕುಟುಂಬವು ಧಾರ್ಮಿಕ ಕಾರಣಗಳಿಗಾಗಿ ಖಾರತ್‌ನ ಟ್ರಸ್ಟ್ ಜೊತೆ ಸಂಪರ್ಕ ಹೊಂದಿತ್ತು, ಆದರೆ ಆತನ ಈ ಕೆಟ್ಟ ಮುಖದ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ವೈರಲ್ ಆಗಿರುವ ವೀಡಿಯೊಗಳು ಸುಮಾರು ಆರು ವರ್ಷ ಹಳೆಯವು ಮತ್ತು ಕೇವಲ ಆಧ್ಯಾತ್ಮಿಕ ನಂಬಿಕೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, "ನಾನು ಮಹಿಳೆಯಾಗಿರುವ ಕಾರಣಕ್ಕಾಗಿಯೇ ನನ್ನನ್ನು ಗುರಿಯಾಗಿಸಿ ಆರೋಪ ಮಾಡಲಾಗುತ್ತಿದೆ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
100 ವಿಡಿಯೋಗಳಿವೆ
ಅಶೋಕ್ ಖಾರತ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಆತನ ಮನೆಯಲ್ಲಿ ಇದುವರೆಗೆ 100ಕ್ಕೂ ಹೆಚ್ಚು ವಿಡಿಯೋ ಕ್ಲಿಪ್‌ಗಳು ಲಭ್ಯವಾಗಿವೆ. ಆರಂಭದಲ್ಲಿ ಸುಮಾರು 58 ವಿಡಿಯೋಗಳು ಮಾತ್ರ ಇರಬಹುದು ಎಂದು ಶಂಕಿಸಲಾಗಿತ್ತು, ಆದರೆ ತಪಾಸಣೆಯ ನಂತರ ಈ ಸಂಖ್ಯೆ ಹೆಚ್ಚಾಗಿದೆ. ಈ ವಿಡಿಯೋಗಳಲ್ಲಿ ಖಾರತ್ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಾಗೂ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಹೇಳಲಾಗುತ್ತಿದೆ. ಸಂತ್ರಸ್ತೆಯರನ್ನು ಬ್ಲ್ಯಾಕ್‌ಮೇಲ್ ಮಾಡಲು ಮತ್ತು ಅವರನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಈ ವಿಡಿಯೋಗಳನ್ನು ಆತ ಬಳಸುತ್ತಿದ್ದನೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್).