ಜೈಶಂಕರ್, ಕೇಜ್ರಿವಾಲ್, ಸಿಬಿಐ ನಿರ್ದೇಶಕರು... ವಿವಿಐಪಿಗಳಿಗೂ ತಲುಪಿದ ಎಸ್‌ಐಆರ್ ನೋಟಿಸ್ ಹಿಂದಿದೆ ಈ ಕಾರಣ | SIR Notice
- ಮತದಾರರ ಪಟ್ಟಿಯಲ್ಲಿ ಡಿಲೀಟ್ ಆದ ದೇಶದ ವಿವಿಐಪಿಗಳ ಹೆಸರು
- ಜೈಶಂಕರ್, ಸೂದ್, ದ್ವಿವೇದಿ ಕುಟುಂಬಗಳಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ
- 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ವಿವಿಐಪಿಗಳ ಹೆಸರುಗಳ ಉಲ್ಲೇಖದ ಹಿಂದಿರುವ ಕಾರಣವೇನು?
ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ, ಮತದಾರರ ಪಟ್ಟಿಯಿಂದ ಈಗಾಗಲೇ ಡಿಲೀಟ್ ಆಗಿರುವ ಜನಸಾಮಾನ್ಯರಿಗೆ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದೆ. ಈ ಮಧ್ಯೆ, ಇದು ನಮಗೆ ಮಾತ್ರ ಅನ್ವಯವೇ? ದೊಡ್ಡ ದೊಡ್ಡ ರಾಜಕಾರಣಿಗಳು, ಗಣ್ಯರಿಗೆ ಇದೇ ನಿಯಮ ಪಾಲನೆ ಆಗುತ್ತಾ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿರುವಾಗಲೇ ಇದೀಗ ವಿವಿಐಪಿಗಳಿಗೂ ನೋಟಿಸ್ಗಳು ಹೋಗಿವೆ.
ವಿವಿಐಪಿ ಮತದಾರರಿಗೆ ನೋಟಿಸ್
ಚುನಾವಣಾ ಅಧಿಕಾರಿಗಳು ಹಲವಾರು ವಿವಿಐಪಿ ಮತದಾರರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅವರ ಪತ್ನಿ ಕ್ಯೋಕೊ ಜೈಶಂಕರ್, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಮಾಜಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅವರ ಪತ್ನಿಗೂ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಇವರೆಲ್ಲರೂ ದೆಹಲಿ ವಿಧಾನಸಭಾ ಕ್ಷೇತ್ರದ ನೋಂದಾಯಿತ ಮತದಾರರಾಗಿದ್ದಾರೆ.
ಜೈಶಂಕರ್ ಮತ್ತು ಅವರ ಪತ್ನಿ ಕ್ಯೋಕೊ ಅವರ ಹೆಸರುಗಳನ್ನು '(ಹಿಂದಿನ ಎಸ್‌ಐಆರ್‌ನೊಂದಿಗೆ ಹೊಂದಾಣಿಕೆಯಾಗದ)' ವರ್ಗದಲ್ಲಿ ಸೇರಿಸಲಾಗಿದೆ. ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯ ವಿವರಗಳೊಂದಿಗೆ ಪ್ರಸ್ತುತ ಮತದಾರರ ದಾಖಲೆಗಳನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಈ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಶಂಕರ್ ದಂಪತಿ ನವದೆಹಲಿ ಕ್ಷೇತ್ರದ ಸುಂದರ್‌ಬಾಗ್ ಮತದಾನದ ಭಾಗದಲ್ಲಿ ನೋಂದಾಯಿತ ಮತದಾರರಾಗಿದ್ದಾರೆ.
ಸಿಬಿಐ ನಿರ್ದೇಶಕರಿಗೆ ಎಸ್‌ಐಆರ್ ನೋಟಿಸ್
ಇದೇ ಕಾರಣಕ್ಕಾಗಿ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್, ಅವರ ಪತ್ನಿ ವನಿತಾ ಸೂದ್ ಮತ್ತು ತಾಯಿ ಕಮಲೇಶ್ ಸೂದ್ ಅವರಿಗೂ ನೋಟಿಸ್ ಕಳುಹಿಸಲಾಗಿದೆ. ಮಾಜಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅವರ ಪತ್ನಿ ಸುನೀತಾ ದ್ವಿವೇದಿ ಅವರ ಹೆಸರುಗಳು ಹಿಂದಿನ ಎಸ್‌ಐಆರ್ ದಾಖಲೆಗಳೊಂದಿಗೆ ಹೊಂದಿಕೆಯಾಗದ ಕಾರಣ, ಅವರಿಗೂ ಇದೇ ವರ್ಗದಡಿ ನೋಟಿಸ್ ನೀಡಲಾಗಿದೆ.
ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಅವರ ಕುಟುಂಬ ಸದಸ್ಯರಿಗೆ ಇತರೆ ಕಾರಣಗಳಿಗಾಗಿ ನೋಟಿಸ್ ನೀಡಲಾಗಿದೆ. ಅವರ ಪತ್ನಿ ಶೀಬಾ ಬ್ರಿಟ್ಟಾಸ್ ಅವರಿಗೆ ಸ್ವಯಂ ಹೆಸರಿನ ಹೊಂದಾಣಿಕೆಯ ಕೊರತೆಯ (self-name mismatch) ಕಾರಣದಿಂದ ನೋಟಿಸ್ ಕಳುಹಿಸಲಾಗಿದೆ. ಇನ್ನು, ಅವರ ಪುತ್ರ ಆನಂದ್ ಬ್ರಿಟ್ಟಾಸ್ ಅವರ ವಿಷಯದಲ್ಲಿ, ಪೋಷಕರ ಹೆಸರಿನ ಹೊಂದಾಣಿಕೆಯ ಕೊರತೆಯ (Parent Name Mismatch) ವರ್ಗದಡಿ ಕಳುಹಿಸಲಾಗಿದೆ. ಇದೇ ಪ್ರಕ್ರಿಯೆಯಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅರವಿಂದ್ ಕೇಜ್ರಿವಾಲ್, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ಕುಟುಂಬ ಸದಸ್ಯರಿಗೂ ಚುನಾವಣಾ ಆಯೋಗದಿಂದ ನೋಟಿಸ್ಗಳು ಹೋಗಿವೆ.
ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ನೋಟಿಸ್ ಸ್ವೀಕರಿಸಿದ ಮಾತ್ರಕ್ಕೆ ಮತದಾನದ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ. ಪ್ರಸ್ತುತ, ಮತದಾರರ ವಿವರಗಳನ್ನು ಪರಿಶೀಲಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ನೋಟಿಸ್ ಮೂಲಕ ತಿಳಿಸಿದ್ದಾರೆ. ಪರಿಶೀಲನೆಯ ನಂತರ, ಅರ್ಹತೆಗೆ ಅನುಗುಣವಾಗಿ ಮತದಾರರ ನೋಂದಣಿ ಪ್ರಕ್ರಿಯೆಯು ಎಂದಿನಂತೆ ಮುಂದುವರಿಯಲಿದೆ,(ಏಜೆನ್ಸೀಸ್).