ಹೋಳಿ ಆಚರಣೆಯ ಚಿತ್ರಗಳು 
ದೇಶ

ಹೂವಿನ ಓಕುಳಿಯಿಂದ ಸ್ಮಶಾಣದ ಬೂದಿವರೆಗೆ: ಭಾರತದ ಆರು ವಿಶಿಷ್ಟ ಹೋಳಿ ಸಂಭ್ರಮಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ | Holi

ಪ್ರಮುಖ ಮುಖ್ಯಾಂಶಗಳು

  • ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ
  • ಭಾರತದಲ್ಲಿ ನಡೆಯುತ್ತೆ 6 ವಿಶಿಷ್ಟ ಪ್ರಕಾರದ ಹೋಳಿಗಳು
  • ಮಸಾಣ ಹೋಳಿಯ ಮಹತ್ವ ನಿಮಗೆ ತಿಳಿದಿದೆಯೇ?
ಭಾರತ: ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ (Holi) ಹಬ್ಬ ಬರಲಿದೆ. ಹೋಳಿ ಹಬ್ಬ ಎಂದ ತಕ್ಷಣ ನಮಗೆ ನೆನಪಾಗುವುದು ಬಣ್ಣ, ಡಾನ್ಸ್​, ಸಿಹಿತಿನಿಸು, ಬಾಂಗ್​ ಲಸ್ಸಿ. ಆದರೆ ನೀವು ಎಂದಾದರೂ ಕಾಶಿಯ ಚಿತಾಭಸ್ಮದ ಹೋಳಿ ಅಥವಾ ವೃಂದಾವನದ ಹೂವುಗಳ ಹೋಳಿ ಬಗ್ಗೆ ಕೇಳಿದ್ದೀರಾ?
ಭಾರತ ಹೇಳಿಕೇಳಿ ವಿವಿಧತೆಯಲ್ಲಿ ಏಕತೆಯ ಜೊತೆಗೆ ಒಂದೇ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸುವ ದೇಶವು ಹೌದು. ಅದೇ ರೀತಿ ಭಾರತದ ವಿವಿಧ ಮೂಲೆಗಳಲ್ಲಿ ವಿಶಿಷ್ಟವಾಗಿ ಯಾವ ರೀತಿಯಲ್ಲಿ ಹೋಳಿಯನ್ನು ಆಚರಿಸುತ್ತಾರೆ ಎಂದು ನಾವು ಇಂದು ತಿಳಿದುಕೊಳ್ಳೋಣ.

1. ಲತ್ಮಾರ್ ಹೋಳಿ: ಇಲ್ಲಿ ಪುರುಷರಿಗೆ ಬೀಳುತ್ತೆ ಲಾಟಿಯ ಪೆಟ್ಟು! (ಉತ್ತರ ಪ್ರದೇಶ)

ಉತ್ತರ ಪ್ರದೇಶದ ಬರ್ಸಾನಾ ಮತ್ತು ನಂದಗಾಂವ್‌ನಲ್ಲಿ ನಡೆಯುವ ಈ ಹೋಳಿ ಜಗತ್ಪ್ರಸಿದ್ಧ. ರಾಧೆ-ಕೃಷ್ಣರ ಪ್ರೇಮದ ಕಥೆಯ ಹಿನ್ನೆಲೆಯಿರುವ ಈ ಆಚರಣೆಯಲ್ಲಿ, ಮಹಿಳೆಯರು ಪುರುಷರಿಗೆ ಲಾಟಿಯಿಂದ (ಕೋಲು) ಪ್ರೀತಿಯಿಂದ ಹೊಡೆಯುತ್ತಾರೆ! ಪುರುಷರು ತಮಟೆ ಬಾರಿಸುತ್ತಾ ಗುರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಈ ದೃಶ್ಯವನ್ನು ನೋಡಲು ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.

2. ಫೂಲೋಂ ವಾಲಿ ಹೋಳಿ: ಬಣ್ಣದ ಬದಲು ಹೂವಿನ ಸುರಿಮಳೆ (ವೃಂದಾವನ)

ಬಣ್ಣದ ಅಲರ್ಜಿ ಇರುವವರಿಗೆ ಇದು ಹೇಳಿ ಮಾಡಿಸಿದ ಹೋಳಿ. ವೃಂದಾವನದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಸಿಂಥೆಟಿಕ್ ಬಣ್ಣಗಳ ಬದಲು ಸುಗಂಧಭರಿತ ಹೂವಿನ ಎಸಳುಗಳಿಂದ ಹೋಳಿ ಆಡಲಾಗುತ್ತದೆ. ಅರ್ಚಕರು ಭಕ್ತರ ಮೇಲೆ ಹೂವುಗಳನ್ನು ಸುರಿಸುವಾಗ ಇಡೀ ವಾತಾವರಣವೇ ದೈವಿಕವಾಗಿ ಮತ್ತು ಪ್ರಶಾಂತವಾಗಿ ಕಾಣುತ್ತದೆ.

3. ಮಸಾನ್ ಹೋಳಿ: ಚಿತಾಭಸ್ಮದ ವಿಚಿತ್ರ ಆಚರಣೆ (ವಾರಣಾಸಿ)

ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ನಡೆಯುವ ಈ ಹೋಳಿ ಅತ್ಯಂತ ವಿಭಿನ್ನ. ಇಲ್ಲಿ ಬಣ್ಣಗಳ ಬದಲು ಚಿತಾಭಸ್ಮವನ್ನು ಪರಸ್ಪರ ಹಚ್ಚಿಕೊಳ್ಳಲಾಗುತ್ತದೆ. ಇದು ಜೀವನ ಮತ್ತು ಮರಣದ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಆಧ್ಯಾತ್ಮಿಕ ಆಚರಣೆ ಎಂದು ಹೇಳಲಾಗುತ್ತದೆ.

4. ಹೋಲಾ ಮೊಹಲ್ಲಾ: ಇಲ್ಲಿ ಶೌರ್ಯವೇ ಬಣ್ಣ! (ಪಂಜಾಬ್)

ಪಂಜಾಬ್‌ನ ಆನಂದಪುರ ಸಾಹಿಬ್‌ನಲ್ಲಿ ನಡೆಯುವ ಹೋಲಾ ಮೊಹಲ್ಲಾ, ಸಿಖ್ ಧರ್ಮದ ಶೌರ್ಯವನ್ನು ಸಾರುತ್ತದೆ. ಇಲ್ಲಿ ಬಣ್ಣಗಳಿಗಿಂತ ಹೆಚ್ಚಾಗಿ ಮಾರ್ಷಲ್ ಆರ್ಟ್ಸ್, ಕುದುರೆ ಸವಾರಿ ಮತ್ತು ಕತ್ತಿವರಸೆಯ ಪ್ರದರ್ಶನಗಳು ಪ್ರಮುಖವಾಗಿರುತ್ತವೆ. ಧೈರ್ಯ ಮತ್ತು ಶಿಸ್ತನ್ನು ಸಂಭ್ರಮಿಸುವ ಈ ಹಬ್ಬಕ್ಕೆ ಒಂದು ವಿಶೇಷ ಸ್ಥಾನವಿದೆ.

5. ಕುಮಾವೋನಿ ಹೋಳಿ: ಸಂಗೀತವೇ ಈ ಹಬ್ಬದ ಉಸಿರು (ಉತ್ತರಾಖಂಡ)

ಉತ್ತರಾಖಂಡದ ಕುಮಾವೋನ್ ಪ್ರದೇಶದಲ್ಲಿ ಹೋಳಿ ಎಂದರೆ ಅದು ರಾಗಗಳ ಸಂಗಮ. ಇಲ್ಲಿ ಜನರು ಶಾಸ್ತ್ರೀಯ ಸಂಗೀತ ಮತ್ತು ಭಜನೆಗಳ ಮೂಲಕ ವಸಂತವನ್ನು ಸ್ವಾಗತಿಸುತ್ತಾರೆ. ಅಲ್ಮೋರಾ ಮತ್ತು ನೈನಿತಾಲ್‌ನ ಗಲ್ಲಿಗಳಲ್ಲಿ ವಾರಗಟ್ಟಲೆ ನಡೆಯುವ ಸಂಗೀತ ಕಾರ್ಯಕ್ರಮಗಳು ಮನಸ್ಸಿಗೆ ಶಾಂತಿ ನೀಡುತ್ತವೆ.

6. ಬಸಂತ್ ಉತ್ಸವ: ಕಲೆ ಮತ್ತು ಸಾಹಿತ್ಯದ ಮಿಲನ (ಪಶ್ಚಿಮ ಬಂಗಾಳ)

ಶಾಂತಿನಿಕೇತನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಆರಂಭಿಸಿದ ಈ ಉತ್ಸವ ಅತ್ಯಂತ ಸುಸಂಸ್ಕೃತವಾಗಿ ನಡೆಯುತ್ತದೆ. ಹಳದಿ ವಸ್ತ್ರಧಾರಿಗಳಾದ ವಿದ್ಯಾರ್ಥಿಗಳು ನೃತ್ಯ, ಕವಿತೆ ಮತ್ತು ಸಂಗೀತದ ಮೂಲಕ ವಸಂತವನ್ನು ಬರಮಾಡಿಕೊಳ್ಳುತ್ತಾರೆ. ಇದು ಕಲಾಪ್ರೇಮಿಗಳಿಗೆ ಹೇಳಿ ಮಾಡಿಸಿದ ಹೋಳಿ ಆಚರಣೆಯಾಗಿದೆ,(ಏಜನ್ಸೀಸ್​).