ಧಮ್​ ಇದ್ರೆ ನನ್ನನ್ನು ಹಿಡಿಯಿರಿ ಎಂದು ಸರ್ಕಾರಕ್ಕೆ ಸವಾಲೆಸೆದ ರೌಡಿಗೆ ಶಾಕ್​ ಕೊಟ್ಟ ಸಾಮಾನ್ಯ ಆಟೋ ಚಾಲಕ! Arjun Ayanki  
ದೇಶ

ಧಮ್​ ಇದ್ರೆ ನನ್ನನ್ನು ಹಿಡಿಯಿರಿ ಎಂದು ಸರ್ಕಾರಕ್ಕೆ ಸವಾಲೆಸೆದ ರೌಡಿಗೆ ಶಾಕ್​ ಕೊಟ್ಟ ಸಾಮಾನ್ಯ ಆಟೋ ಚಾಲಕ! Arjun Ayanki

ಪ್ರಮುಖ ಮುಖ್ಯಾಂಶಗಳು

  • ಪೊಲೀಸರಿಗೆ ಸವಾಲು ಹಾಕಿದ್ದ ಕುಖ್ಯಾತ ಕ್ರಿಮಿನಲ್ ಅರ್ಜುನ್ ಅಯಾಂಕಿ ಕೊನೆಗೂ ಕಂಬಿ ಹಿಂದೆ
  • ಪಯ್ಯನ್ನೂರಿನಲ್ಲಿ ಸುಳಿವು ನೀಡಿದ ಜಾಗರೂಕ ಆಟೋ ಚಾಲಕನಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ
  • ಸಾಮಾನ್ಯ ರಾಜಕೀಯ ಕಾರ್ಯಕರ್ತನಾಗಿದ್ದ ಅರ್ಜುನ್ ಚಿನ್ನ ಕಳ್ಳಸಾಗಣೆ ಗ್ಯಾಂಗ್ ಮುಖ್ಯಸ್ಥನಾಗಿ ಬೆಳೆದ ಹಿನ್ನೆಲೆ
  • ಸೈಬರ್ ಮೂಲಕ ಬೆದರಿಕೆ ಹಾಕಿದ ಆರೋಪದಲ್ಲಿ ಹೊಸದಾಗಿ ಸೈಬರ್ ಕ್ರೈಮ್ ಪ್ರಕರಣಗಳು ದಾಖಲು
ತಿರುವನಂತಪುರಂ: ನಿಮಗೆ ಧಮ್​ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರು ಹಾಗೂ ಸರ್ಕಾರಕ್ಕೆ ಬಹಿರಂಗವಾಗಿಯೇ ಸವಾಲು ಎಸೆದಿದ್ದ ಕೇರಳದ ನಟೋರಿಯಸ್ ಕ್ರಿಮಿನಲ್​ ಅರ್ಜನ್​ ಅಯಾಂಕಿ ( Arjun Ayanki ) ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಾನೂನುಬಾಹಿರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೋಟಮಂಗಲದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಲೆಮರೆಸಿಕೊಂಡಿದ್ದ ಅರ್ಜುನ್ ಅಯಾಂಕಿ, ಸಿಮ್ ಕಾರ್ಡ್ ಬದಲಿಗೆ ಕೇವಲ ವೈ-ಫೈ ಹಾಗೂ ಐಪಿ ಅಡ್ರೆಸ್ ಮರೆಮಾಚುವ ಹೈಟೆಕ್ ತಂತ್ರಜ್ಞಾನ ಬಳಸಿ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಾ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಗೃಹಮಂತ್ರಿ ಹಾಗೂ ಪೊಲೀಸರನ್ನು ವ್ಯಂಗ್ಯವಾಡಿ ಬಹಿರಂಗವಾಗಿ ಜೀವ ಬೆದರಿಕೆ ಹಾಕುತ್ತಾ ಸವಾಲು ಎಸೆದಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಇನ್‌ಸ್ಪೆಕ್ಟರ್‌ಗಳಿಗೆ ಬೆದರಿಕೆ ಹಾಗೂ ಮುಖ್ಯಮಂತ್ರಿಗಳನ್ನು ನಿಂದಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ ಗಂಭೀರ ಆರೋಪಗಳಡಿ ಹೊಸದಾಗಿ ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿದ್ದವು.
ಇತ್ತೀಚೆಗೆ ಉನ್ನುಕಲ್ ವೃತ್ತ ನಿರೀಕ್ಷಕರನ್ನು (CI) ಗುರಿಯಾಗಿಸಿಕೊಂಡು ನೀಡಿರುವ ಈ ಬೆದರಿಕೆ ಸಂದೇಶದಲ್ಲಿ, "ಸಿಐಗೆ ಸಿಗಬೇಕಾಗಿರುವುದು ಇನ್ನೂ ಸಿಕ್ಕಿಲ್ಲ, ಸಿಕ್ಕಿದಾಗ ಗೊತ್ತಾಗುತ್ತದೆ, ಧಮ್ ಇದ್ದರೆ ನನ್ನನ್ನು ಹಿಡಿಯಿರಿ" ಎಂದು ಅರ್ಜುನ್​ ಅಯಾಂಕಿ ಸವಾಲು ಎಸೆದಿದ್ದ. ಆತನ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಲಾಗಿದೆ.
ಆಟೋ ಚಾಲಕನಿಗೆ ಬಹುಮಾನ
ಅರ್ಜುನ್ ಅಯಾಂಕಿ ಸುಳಿವು ನೀಡಿದ ಪಯ್ಯನ್ನೂರಿನ ಆಟೋ ಚಾಲಕನ ಜಾಗರೂಕತೆ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಸಾರ್ವಜನಿಕವಾಗಿ ಅಭಿನಂದಿಸಿರುವ ಗೃಹ ಸಚಿವ ರಮೇಶ್ ಚೆನ್ನಿಥಾಲ, ಒಂದು ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಪಯ್ಯನ್ನೂರಿಗೆ ಪರಾರಿಯಾಗಿ ಅಲ್ಲಿ ಆಟೋ ಚಾಲಕನ ಫೋನ್ ಮೂಲಕ ಸ್ನೇಹಿತನನ್ನು ಕರೆಸಿ, ಕಾರಿನಲ್ಲಿ ಕಣ್ಣೂರಿನ ವಕೀಲರ ಫ್ಲ್ಯಾಟ್‌ಗೆ ಅಯಾಂಕಿ ತೆರಳಿದ್ದನು, ಆದರೆ ಆಟೋ ಚಾಲಕನಿಗೆ ಬಂದ ಸಂಶಯದಿಂದ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ಪೊಲೀಸರು ರಾತ್ರಿ 2 ಗಂಟೆ ಸುಮಾರಿಗೆ ವಕೀಲರ ಮನೆಯಲ್ಲೇ ಅರ್ಜುನ್ ಅಯಾಂಕಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಯಾರು ಈ ಅರ್ಜುನ್​ ಅಯಾಂಕಿ?
ಅಂದಹಾಗೆ, ಅರ್ಜುನ್ ಅಯಾಂಕಿ ಕೇರಳದ ಕಣ್ಣೂರಿನ ಅಳೀಕೋಡೆ ಕಪ್ಪಕ್ಕಡವಿನ ನಿವಾಸಿ. ಈತ ಸಿಪಿಎಂ ಮತ್ತು ಡಿವೈಎಫ್‌ಐನ ಸಕ್ರಿಯ ಕಾರ್ಯಕರ್ತನಾಗಿ ಹಾಗೂ ಅಳೀಕೋಡೆ ಕಪ್ಪಕ್ಕಡ ಘಟಕದ ಕಾರ್ಯದರ್ಶಿಯಾಗಿ ರಾಜಕೀಯ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದನು. ಸಾಮಾನ್ಯ ರಾಜಕೀಯ ಕಾರ್ಯಕರ್ತನಾಗಿದ್ದ ಈತ ದಿನಗಳು ಕಳೆದಂತೆ ರಾಜಕೀಯ ಅಪರಾಧ ಹಿನ್ನೆಲೆ ಹಾಗೂ ಗೋಲ್ಡ್ ಸ್ಮಗ್ಲಿಂಗ್ ಜಾಲದ ಕೊಂಡಿಯಾಗಿ ಬೆಳೆದು, ಚಿನ್ನ ಕಳ್ಳಸಾಗಣೆ ಗ್ಯಾಂಗ್‌ನ ಮುಖ್ಯಸ್ಥನಾಗಿ, ಪೊಲೀಸ್ ಹಾಗೂ ಸರ್ಕಾರಕ್ಕೆ ಸವಾಲುಹಾಕುವ ಕುಖ್ಯಾತ ಅಪರಾಧಿಯಾಗಿ ಹೊರಹೊಮ್ಮಿರುವುದು ನಿಜಕ್ಕೂ ಅಚ್ಚರಿಯ ಬೆಳವಣಿಗೆಯಾಗಿದೆ.
ಈ ಅರ್ಜುನ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಸಕ್ರಿಯನಾಗಿ, ಪಕ್ಷ ಮತ್ತು ಅದರ ನಾಯಕರನ್ನು ಸಮರ್ಥಿಸಿಕೊಳ್ಳುವ ಹಾಗೂ ವಿರೋಧಿಗಳ ಮೇಲೆ ಕಠಿಣ ಭಾಷೆಯಲ್ಲಿ ಸೈಬರ್ ದಾಳಿ ನಡೆಸುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದನು. ತನ್ನ ಆಕರ್ಷಕ ಮಾತುಗಳು ಮತ್ತು ಪಕ್ಷಪರ ಪೋಸ್ಟ್‌ಗಳ ಮೂಲಕ ಯುವಕರನ್ನು ಸೆಳೆದಿದ್ದ ಈತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಮಾನಿ ಬಳಗವಿತ್ತು. ರಾಜಕೀಯದ ನೆರಳಿನಲ್ಲಿ ಬೆಳೆದ ಅರ್ಜುನ್ ಅಯಾಂಕಿ, ಕ್ರಮೇಣ ಕಣ್ಣೂರಿನ ಅಪರಾಧ ಗ್ಯಾಂಗ್‌ಗಳೊಂದಿಗೆ ನಂಟು ಬೆಳೆಸಿಕೊಂಡು, ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ರಚನೆಯಾದ ಗ್ಯಾಂಗ್‌ಗಳ ಮುಖ್ಯಸ್ಥನೆಂದು ತಾನೇ ಘೋಷಿಸಿಕೊಂಡಿದ್ದನು. ಆ ಬಳಿಕ ಹೆಚ್ಚಿನ ಹಣ ಸಂಪಾದಿಸುವ ಸಲುವಾಗಿ, ವಿಮಾನ ನಿಲ್ದಾಣಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿದ್ದ ಚಿನ್ನ ಕಳ್ಳಸಾಗಣೆ (ಗೋಲ್ಡ್ ಸ್ಮಗ್ಲಿಂಗ್) ಲೋಕಕ್ಕೆ ಕಾಲಿಟ್ಟನು.
ನೇರವಾಗಿ ಚಿನ್ನ ಕಳ್ಳಸಾಗಣೆ ಮಾಡುವ ಬದಲು, ಅರ್ಜುನ್ ಆಯುಂಕಿ ಮತ್ತು ಆತನ ಗ್ಯಾಂಗ್ ವಿದೇಶದಿಂದ ಇತರೆ ಗ್ಯಾಂಗ್‌ಗಳು ತೆಗೆದುಕೊಂಡು ಬರುತ್ತಿದ್ದ ಚಿನ್ನವನ್ನು ವಿಮಾನ ನಿಲ್ದಾಣದ ಹೊರಗೆ ಲೂಟಿ ಮಾಡುವ ಮಾರ್ಗವನ್ನು ಅನುಸರಿಸುತ್ತಿದ್ದರು. ಮಲಬಾರ್ ಗ್ಯಾಂಗ್‌ಸ್ಟರ್ ಭಾಷೆಯಲ್ಲಿ ಇದನ್ನು 'ಸ್ವರ್ಣಂ ಪೊಡಿಕಲ್' ಎಂದು ಕರೆಯಲಾಗುತ್ತಿತ್ತು. ಕರೀಪುರ್ ಮತ್ತು ಕಣ್ಣೂರು ವಿಮಾನ ನಿಲ್ದಾಣಗಳ ಮೂಲಕ ಬರುವ ಕ್ಯಾರಿಯರ್‌ಗಳನ್ನು ಬೆದರಿಸಿ, ಅಪಹರಿಸಿ ಚಿನ್ನ ದೋಚುವುದೇ ಇವರ ವಿಧಾನವಾಗಿತ್ತು ಹಾಗೂ ಈ ದರೋಡೆಗಳಿಗೆ ಅವರು ಹೆಚ್ಚಾಗಿ ಪಕ್ಷದ ಬಾವುಟ ಮತ್ತು ಚಿಹ್ನೆ ಇರುವ ವಾಹನಗಳನ್ನೇ ಬಳಸುತ್ತಿದ್ದರು. ಅರ್ಜುನ್ ಅಯಾಂಕಿ ಕೃತ್ಯಗಳು ಬೆಳಕಿಗೆ ಬಂದಾಗ ಸಿಪಿಎಂ ಮತ್ತು ಡಿವೈಎಫ್‌ಐ ಆತ್ಮರಕ್ಷಣೆಗೆ ಜಾರಿಕೊಳ್ಳಬೇಕಾಯಿತು ಮತ್ತು ಪಕ್ಷಕ್ಕೆ ಅಪಖ್ಯಾತಿ ತಂದಿದ್ದರಿಂದ ಡಿವೈಎಫ್‌ಐ ನಾಯಕತ್ವವು ಆತನನ್ನು ಸಂಘಟನೆಯಿಂದ ಹೊರಹಾಕಿ ಆತನಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗವಾಗಿ ಘೋಷಿಸಿತು. ಆದಾಗ್ಯೂ, ಅರ್ಜುನ್ ಆಯುಂಕಿ ತನ್ನ ಸಾಮಾಜಿಕ ಜಾಲತಾಣದ ಅಭಿಮಾನಿಗಳ ಬಲದಿಂದ ತಾನು ಇಂದಿಗೂ ಪಕ್ಷದ ಪರವಾಗಿಯೇ ನಿಂತಿರುವುದಾಗಿ ಬಿಂಬಿಸಿಕೊಳ್ಳುವ ಮೂಲಕ ಪೊಲೀಸರಿಗೆ ಸವಾಲು ಹಾಕುವಲ್ಲಿ ಯಶಸ್ವಿಯಾಗಿದ್ದನು.
2021ರ ಜೂನ್ 21ರಂದು ನಡೆದ ರಾಮನಾಟ್ಟುಕರ ರಸ್ತೆ ಅಪಘಾತವು ಕೇರಳದ ವಿಮಾನ ನಿಲ್ದಾಣಗಳ ಕೇಂದ್ರಿತ ಚಿನ್ನ ಕಳ್ಳಸಾಗಣೆ ಮತ್ತು ಕ್ವೊಟೇಷನ್ ಜಾಲವನ್ನು ಬೆಳಕಿಗೆ ತಂದಿತು. ಕರೀಪುರ್ ವಿಮಾನ ನಿಲ್ದಾಣದಿಂದ ಚಿನ್ನ ಸಾಗಿಸುತ್ತಿದ್ದ ಕ್ಯಾರಿಯರ್‌ನನ್ನು ದರೋಡೆ ಮಾಡಲು ತೆರಳಿದ್ದ ಅರ್ಜುನ್ ಅಯಾಂಕಿ ಗ್ಯಾಂಗ್‌ನ ಸಂಚಿನಿಂದಾಗಿ, ಅವರನ್ನು ಬೆನ್ನಟ್ಟಿದ್ದ ಮತ್ತೊಂದು ಗ್ಯಾಂಗ್‌ನ ಜೀಪ್ ಅಪಘಾತಕ್ಕೀಡಾಗಿ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣದ ಬಳಿಕ ತಮಿಳುನಾಡು ಗಡಿಯ ಮೇನಾಕ್ಷಿಪುರಂನಲ್ಲಿ ನಡೆದ ಚಿನ್ನದ ವ್ಯಾಪಾರಿಯ ಅಪಹರಣ ಮತ್ತು ದರೋಡೆ ಪ್ರಕರಣದಲ್ಲೂ (14ನೇ ಆರೋಪಿ) ಅರ್ಜುನ್ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಪುಣೆಯಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು 2023ರ ಜುಲೈನಲ್ಲಿ ವಿಶೇಷ ಪೊಲೀಸ್ ಪಡೆ ಬಂಧಿಸಿತ್ತು ಮತ್ತು ನಂತರ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದನು.
ಕಾನೂನು ಬಾಹಿರ ಚಟುವಟಿಕೆಗಳ ಹಿನ್ನೆಲೆಯಲ್ಲಿ 2022ರಲ್ಲಿ ಆತನ ಮೇಲೆ ಕಪಾ (KAAPA) ಕಾಯ್ದೆಯಡಿ ಗಡೀಪಾರು ಆದೇಶ ಹೊರಡಿಸಲಾಗಿದ್ದರೂ, ಕಳ್ಳಸಾಗಣೆ ಕಸ್ಟಮ್ಸ್ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕೆ ಸಲಹಾ ಮಂಡಳಿಯು ಆ ಆದೇಶವನ್ನು ರದ್ದುಗೊಳಿಸಿತು. ಇದಾದ ನಂತರ 2026ರ ಮೇ ತಿಂಗಳಲ್ಲಿ ಕೊತ್ತಮಂಗಲದಲ್ಲಿ ಕ್ರಿಮಿನಲ್ ಕೃತ್ಯಕ್ಕೆ ಸಂಚು ಹೂಡಿದ್ದ ಆರೋಪದ ಮೇಲೆ ಆತನನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ ಜೈಲಿಗಟ್ಟಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಕೊತ್ತಮಂಗಲ ಮತ್ತು ಉನ್ನುಕಲ್ ಇನ್ಸ್‌ಪೆಕ್ಟರ್‌ಗಳಿಗೆ ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ ಆರೋಪ ಹಾಗೂ ಮುಖ್ಯಮಂತ್ರಿಗಳನ್ನು ನಿಂದಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ ಗಂಭೀರ ಆರೋಪಗಳಡಿ ಆತನ ಮೇಲೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣಗಳು ದಾಖಲಾಗಿದ್ದು, ಸಿಮ್ ಕಾರ್ಡ್ ಬಳಸದೆ ಕೇವಲ ವೈ-ಫೈ ಮತ್ತು ಐಪಿ ಅಡ್ರೆಸ್ ಮರೆಮಾಚುವ ತಂತ್ರಜ್ಞಾನ ಬಳಸಿ ಆತ ತಲೆಮರೆಸಿಕೊಂಡು ಪೊಲೀಸರಿಗೆ ಸವಾಲು ಹಾಕುತ್ತಿದ್ದಾನೆ.
ಈ ಎಲ್ಲಾ ಕ್ರಿಮಿನಲ್ ಹಿನ್ನೆಲೆ ಮತ್ತು ತಲೆಮರೆಸಿಕೊಂಡಿರುವ ನಡುವೆಯೂ ತನ್ನ ಕುಟುಂಬದ ಸಂಕಷ್ಟಗಳ ಬಗ್ಗೆ ಅರ್ಜುನ್ ಪೋಸ್ಟ್ ಮಾಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಆತನ ಪತ್ನಿ ಅಮಲಾ ಅವರು ಫೇಸ್‌ಬುಕ್ ಲೈವ್​ಗೆ ಬಂದು, ತನಗೆ ಗರ್ಭಪಾತ ಮಾಡಿಸಿದ್ದು, ಮೈಬಣ್ಣದ ವಿಚಾರವಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು ಸೇರಿದಂತೆ ತೀವ್ರವಾದ ಕೌಟುಂಬಿಕ ಹಿಂಸಾಚಾರದ ಗಂಭೀರ ಆರೋಪಗಳನ್ನು ಹೊರಿಸಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ, (ಏಜೆನ್ಸೀಸ್​).