Annapurna Scheme | ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವುದನ್ನು ಮುಂದುವರಿಸಿದ್ದು, ಸಿಎಂ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಜನತೆಗೆ ಹಲವು ಪ್ರಮುಖ ಕೊಡುಗೆಗಳನ್ನು ಘೋಷಿಸಲಾಗಿದೆ.
ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಅಗ್ನಿಮಿತ್ರ ಪಾಲ್, ಮಹಿಳೆಯರಿಗೆ ಅನ್ನಪೂರ್ಣ ಯೋಜನೆ ಅಡಿ ಮಾಸಿಕ 3,000 ರೂಪಾಯಿ ಆರ್ಥಿಕ ನೆರವು ಹಾಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದರು.
ಮಹಿಳೆಯರಿಗೆ ಅನ್ನಪೂರ್ಣ ಯೋಜನೆ ಮತ್ತು ಉಚಿತ ಬಸ್ ಪ್ರಯಾಣ
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಳೆಯರ ಅಭಿವೃದ್ದಿಗೆ ಸಂಬಂಧಿಸಿದ ಪ್ರಮುಖ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಅನ್ನಪೂರ್ಣ ಯೋಜನೆ ಜಾರಿಗೆ ತರಲು ಸಂಪುಟ ಹಸಿರು ನಿಶಾನೆ ತೋರಿಸಿದೆ ಎಂದು ಅಗ್ನಿಮಿತ್ರ ಪಾಲ್ ತಿಳಿಸಿದರು. ಈ ಯೋಜನೆಯಡಿ ಪಶ್ಚಿಮ ಬಂಗಾಳದ ಮಹಿಳೆಯರಿಗೆ ಮುಂದಿನ ತಿಂಗಳಿನಿಂದ (ಜೂನ್ 1) ಜಾರಿಗೆ ಬರುವಂತೆ ಪ್ರತಿ ತಿಂಗಳು 3,000 ರೂಪಾಯಿ ಹಣಕಾಸಿನ ನೆರವು ಸಿಗಲಿದೆ. ಇದರೊಂದಿಗೆ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ
ರಾಜ್ಯ ಸರ್ಕಾರಿ ನೌಕರರು, ಅದಕ್ಕೆ ಸಂಬಂಧಿಸಿದ ಶಾಸನಬದ್ಧ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನೌಕರರಿಗಾಗಿ 7ನೇ ರಾಜ್ಯ ವೇತನ ಆಯೋಗವನ್ನು (7th Pay Commission) ರಚಿಸಲು ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು. ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ಧಾರ್ಮಿಕ ವರ್ಗೀಕರಣದ ಆಧಾರದ ಮೇಲೆ ವಿವಿಧ ಗುಂಪುಗಳಿಗೆ ನೀಡಲಾಗುತ್ತಿದ್ದ ಸರ್ಕಾರಿ ಆರ್ಥಿಕ ನೆರವನ್ನು ಜೂನ್ ತಿಂಗಳಿನಿಂದ ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಸಿಎಎ (CAA) ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದವರು ಮತ್ತು ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ರಚಿಸಲಾದ ನ್ಯಾಯಮಂಡಳಿಗಳ (Tribunals) ಸದಸ್ಯರು ಸಹ ಅನ್ನಪೂರ್ಣ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಪಾಲ್ ತಿಳಿಸಿದ್ದಾರೆ.
ಒಬಿಸಿ ಪಟ್ಟಿ ರದ್ದು ಮತ್ತು ಧಾರ್ಮಿಕ ಧನಸಹಾಯಕ್ಕೆ ಬ್ರೇಕ್
ಧಾರ್ಮಿಕ ವರ್ಗೀಕರಣದ ಆಧಾರದ ಮೇಲಿನ ಸರ್ಕಾರಿ ನೆರವನ್ನು ಜೂನ್‌ನಿಂದ ನಿಲ್ಲಿಸಲು ನಿರ್ಧರಿಸಿರುವ ಬೆನ್ನಲ್ಲೇ, ಕೊಲ್ಕತ್ತಾ ಹೈಕೋರ್ಟ್ ತೀರ್ಪಿನ ಅನ್ವಯ ರಾಜ್ಯದಲ್ಲಿ ಪ್ರಸ್ತುತ ಇರುವ ಒಬಿಸಿ ಪಟ್ಟಿಯನ್ನು ಸರ್ಕಾರ ರದ್ದುಗೊಳಿಸಿದೆ. ಕೋಟಾ ಅರ್ಹತೆಯನ್ನು ಮರುನಿರ್ಧಾರ ಮಾಡಲು ಹೊಸದಾಗಿ ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಅಗ್ನಿಮಿತ್ರ ಪಾಲ್ ಹೇಳಿದರು. ಒಬಿಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಇನ್ಮುಂದೆ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಸಾರ್ವಜನಿಕರಿಗೆ ಎಲೆಕ್ಟ್ರಿಕ್ ಬಸ್ ಸೌಲಭ್ಯ
ಸಾರ್ವಜನಿಕರ ಅನುಕೂಲಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಸರ್ಕಾರ ಮುಂದಾಗಿದ್ದು, ಇದರೊಂದಿಗೆ ಸರ್ಕಾರದ ಆಡಳಿತ ಚುರುಕುಗೊಳಿಸಲು ಇನ್ಮುಂದೆ ಪ್ರತಿ 15 ದಿನಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು(ಏಜೆನ್ಸೀಸ್).