ಔರಂಗಾಬಾದ್: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಹುಡುಗರೊಂದಿಗೆ ಬೆರತಿದ್ದಕ್ಕಾಗಿ ಪೋಷಕರು ಗದರಿಸಿದ ಹಿನ್ನೆಲೆ ನಾಲ್ವರು ಹುಡುಗಿಯವರು(Four girls suicide) ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ(ಫೆ. 10) ವರದಿಯಾಗಿದೆ.
ಜ. 29ರಂದು ಜಿಲ್ಲೆಯ ಹಸ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ 10 ರಿಂದ 14 ವರ್ಷ ವಯಸ್ಸಿನ ಐವರು ಅಪ್ತಾಪ್ತ ಹುಡುಗಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರಲ್ಲಿ ನಾಲ್ವರು ಮೃತಪಟ್ಟಿದ್ದು, ಓರ್ವ ವಿದ್ಯಾರ್ಥಿನಿ ಮಾತ್ರ ಬದುಕುಳಿದಿದ್ದಳು ಎನ್ನಲಾಗಿದೆ.
ಹುಡುಗಿಯರ ಸಾವಿನ ಬಗ್ಗೆ ಯಾವುದೇ ದೂರು ನೀಡದೇ, ಮರಣೋತ್ತರ ಪರೀಕ್ಷೆ ನಡೆಸದೇ ಅದೇ ದಿನ ಅಂತ್ಯಕ್ರಿಯೆ ಮಾಡಿದ್ದು, ಅನುಮಾನವನ್ನು ಹುಟ್ಟು ಹಾಕಿದೆ. ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಔರಂಗಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅಂಬರೀಶ್ ರಾಹುಲ್, ಹುಡುಗರ ಗುಂಪಿನೊಂದಿಗೆ ಬೆರೆತಿದ್ದಕ್ಕಾಗಿ ಪೋಷಕರು ಬೈದಿದ್ದರಿಂದ ಹೊಲದಲ್ಲಿ ಒಟ್ಟಿಗೆ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಐವರು ಹುಡುಗಿಯರ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ಬದುಕುಳಿದ ಐದನೇ ಹುಡುಗಿ ಓಡಿ ಬಂದು ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಬದುಕುಳಿದ ಹುಡುಗಿಯ ಹೇಳಿಕೆ ಮಾತ್ರ ನಮಗೆ ಸಿಕ್ಕಿದೆ. ಈ ಪ್ರಕರಣದಲ್ಲಿ ಬೇರೆ ಯಾವುದೇ ವ್ಯಕ್ತಿಯ ಭಾಗಿಯಾಗಿರುವುದು ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).