ನವದೆಹಲಿ: ಬಿಜೆಪಿ ಸಂಸದೆ ಕಂಗನಾ ರನೌತ್ ಮತ್ತು ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಸೌರವ್ ದಾಸ್ ನಡುವಿನ ವಾಕ್ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸೌರವ್ ದಾಸ್ ಅವರನ್ನು ಕಂಗನಾ "ನಿಷ್ಪ್ರಯೋಜಕ" ಮತ್ತು "ನಿರುದ್ಯೋಗಿ" ಎಂದು ಕರೆದ ಬೆನ್ನಲ್ಲೇ, ಸೌರವ್ ದಾಸ್ (Saurav Das) ನೀಡಿರುವ ತಮಾಷೆಯ ಉತ್ತರವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪತ್ರಕರ್ತೆ ಬರ್ಖಾ ದತ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಸೌರವ್ ದಾಸ್, "ಕಂಗನಾ ಅವರು ನನ್ನನ್ನೇ ಯಾಕೆ ಪ್ರತ್ಯೇಕವಾಗಿ ಗುರಿ ಮಾಡುತ್ತಿದ್ದಾರೆ ಎಂಬುದು ಆಶ್ಚರ್ಯ ತಂದಿದೆ. ನನ್ನ ಸ್ನೇಹಿತರೊಬ್ಬರು ಮೆಸೇಜ್ ಮಾಡಿ, 'ನೀನು ಯುವ ದಿನಗಳ ಹೃತಿಕ್ ರೋಷನ್ ತರ ಕಾಣಿಸುತ್ತೀಯಾ, ಬಹುಶಃ ಅದಕ್ಕೆ ಕಂಗನಾ ನಿನ್ನ ಬೆನ್ನಿಗೆ ಬಿದ್ದಿರಬಹುದು ಎಂದು ರೇಗಿಸಿದರು. ಸ್ನೇಹಿತರ ಈ ಮಾತು ಕೇಳಿ ನನಗೆ ನಗು ಬಂತು ಎಂದು ತಮಾಷೆಯಾಗಿ ಹೇಳಿದ್ದಾರೆ.
ಈ ಹಿಂದೆ ಬಾಲಿವುಡ್ನಲ್ಲಿ ಹೃತಿಕ್ ಮತ್ತು ಕಂಗನಾ ಅವರ ನಡುವೆ ಇದ್ದಂತಹ ಹಳೆಯ ವಿವಾದವನ್ನು ಪರೋಕ್ಷವಾಗಿ ನೆನಪಿಸುವಂತೆ ದಾಸ್ ಮಾತನಾಡಿದ್ದಾರೆ.
ವೈಯಕ್ತಿಕ ನಿಂದನೆ ಬಿಟ್ಟು ಸಂಭಾಷಣೆಗೆ ಬನ್ನಿ: ಸೌರವ್ ಸಲಹೆ
ಕಂಗನಾ ವಿರುದ್ಧ ತಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿರುವ ಸೌರವ್ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನು ವೈಯಕ್ತಕ ನಿಂದನೆಗಳ ಮೂಲಕ ಅಲ್ಲ, ಬದಲಿಗೆ ಮಾತುಕತೆ ಮತ್ತು ಚರ್ಚೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಉಲ್ಲೇಖಿಸಿದ ಅವರು, "ಯೋ ಕಂಗನಾ, ಸ್ವಲ್ಪ ಶಾಂತ ಮಾತ್ರೆ ತೆಗೆದುಕೊಳ್ಳಿ, ಕುಳಿತು ಮಾತನಾಡೋಣ. ನಮ್ಮ ದೇಶದಲ್ಲಿ ಸಂವಾದ ಮತ್ತು ಗೌರವಯುತ ಚರ್ಚೆಗಳು ಕಡಿಮೆಯಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ, ಸಾರ್ವಜನಿಕ ಪ್ರತಿನಿಧಿಯಾಗಿರುವ ಕಂಗನಾ ಅವರು ದೇಶದ ಯುವಜನತೆ (Gen-Z) ಮತ್ತು ಪ್ರತಿಭಟನಾಕಾರರ ವಿರುದ್ಧ ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಹತಾಶೆಯಿಂದ ಮಾತನಾಡುವುದನ್ನು ಬಿಟ್ಟು, ಬಯಸಿದರೆ ನೇರವಾಗಿ ಕರೆ ಮಾಡಿ ಚರ್ಚಿಸಲು ತಾನು ಸದಾ ಸಿದ್ಧ ಎಂದಿದ್ದಾರೆ.
ವಾಕ್ಸಮರಕ್ಕೆ ಮೂಲ ಕಾರಣವೇನು?
ಸಿಜೆಪಿ (CJP) ನೇತೃತ್ವದಲ್ಲಿ ನಡೆದ ನೀಟ್-ಯುಜಿ ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಯನ್ನು ಕಂಗನಾ ಟೀಕಿಸಿದ್ದರು. ಅಲ್ಲದೆ 28 ವರ್ಷದ ಸೌರವ್ ದಾಸ್ ಇನ್ನು ಎಷ್ಟು ವರ್ಷ ವಿದ್ಯಾರ್ಥಿ ಎನ್ನಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿ, ನನ್ನ 28ನೇ ವಯಸ್ಸಿನಲ್ಲಿ ನಾನು ಎರಡು ರಾಷ್ಟ್ರ ಪ್ರಶಸ್ತಿ ಗೆದ್ದಿದ್ದೆ. ಈತನಿಗೆ ಯಾವುದೇ ಕೆಲಸವಿಲ್ಲ, ಸಂಪೂರ್ಣ ನಿರುದ್ಯೋಗಿ" ಎಂದು ಪೋಸ್ಟ್ ಮಾಡಿದ್ದರು.
ಈ ವಾಗ್ದಾಳಿಗೆ ರಾಖಿ ಸಾವಂತ್ ಮತ್ತು ನಟ ಸೋನು ಸೂದ್ ಸೇರಿದಂತೆ ಹಲವು ಚಿತ್ರರಂಗದ ಪ್ರಮುಖರು ಕೂಡ ಪ್ರತಿಕ್ರಿಯಿಸಿದ್ದು, ಯುವಜನತೆಯ ಕುರಿತು ಜನಪ್ರತಿನಿಧಿಗಳು ಇಂತಹ ಪದಗಳನ್ನು ಬಳಸುವುದು ಶೋಭೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ (ಏಜೆನ್ಸೀಸ್).