ದೋಸ್ತ್ ದೋಸ್ತ್ ನಾ ರಹಾ: ಅಮೆರಿಕ ಒಪ್ಪಂದದ ಬೆನ್ನಲ್ಲೇ ಮೋದಿ ಕಾಲೆಳೆದ ಕಾಂಗ್ರೆಸ್
ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಶನಿವಾರ ಘೋಷಿಸಲಾದ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಕಾಂಗ್ರೆಸ್(Congress) ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಆಲಿಂಗನಗಳು ಮತ್ತು ಫೋಟೋ-ಆಪ್‌ಗಳು ಭಾರತಕ್ಕೆ ಹೆಚ್ಚಿನ ಪ್ರಯೋಜನ ನೀಡಿಲ್ಲ ಎಂದು ಟೀಕಿಸಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ಮೋದಿಯು ಅಮೆರಿಕದ ಅಧ್ಯಕ್ಷರ ಮುಂದೆ ಶರಣಾಗಿದ್ದಾರೆ. ಇದು ಎಲ್ಲಾ ಒಪ್ಪಂದಗಳ ಪಿತಾಮಹ ಆಗಲು ಸಾಧ್ಯವೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ದೋಸ್ತ್ ದೋಸ್ತ್ ನಾ ರಹಾ
ರಾಜ್ ಕಪೂರ್ ಅವರ ಸಂಗಮ್ ಚಿತ್ರದ ಪ್ರಸಿದ್ಧ ಹಾಡಿನ ಸಾಲನ್ನು ಉಲ್ಲೇಖಿಸಿರುವ ಜೈರಾಮ್ ರಮೇಶ್, ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಗಾಢ ಗೆಳೆತನದಿಂದ ಭಾರತಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ. ಎಲ್ಲಾ ಆಲಿಂಗನಗಳು ಮತ್ತು ಫೋಟೋ-ಆಪ್‌ಗಳಿಂದ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ. ನಮಸ್ತೆ ಟ್ರಂಪ್ ಕಾರ್ಯಕ್ರಮವು ಹೌಡಿ ಮೋದಿಗಿಂತ ಹೆಚ್ಚು ಪ್ರಭಾವ ಬೀರಿದೆ ಎಂದು ಟೀಕಿಸಿದ್ದಾರೆ.
ರಷ್ಯಾ ತೈಲ ನಿಲುಗಡೆಗೆ ಆಕ್ಷೇಪ
ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿರುವುದು ದೇಶದ ಆರ್ಥಿಕ ಸ್ವಾಯತ್ತತೆಗೆ ಪೆಟ್ಟು ನೀಡಿದೆ ಎಂದು ರಮೇಶ್ ಹೇಳಿದ್ದಾರೆ. ಒಂದು ವೇಳೆ ಭಾರತವು ರಷ್ಯಾದಿಂದ ತೈಲ ಖರೀದಿಸಿದರೆ ಮತ್ತೆ ಶೇ. 25ರಷ್ಟು ದಂಡ ವಿಧಿಸುವ ಅಮೆರಿಕದ ಷರತ್ತನ್ನು ಪ್ರಶ್ನಿಸಿದ್ದಾರೆ.
ಭಾರತೀಯ ರೈತರಿಗೆ ಹೊಡೆತ
ಅಮೆರಿಕದ ರೈತರಿಗೆ ಅನುಕೂಲ ಮಾಡಿಕೊಡಲು ಭಾರತವು ತನ್ನ ಆಮದು ಸುಂಕವನ್ನು ಕಡಿತಗೊಳಿಸಿದೆ. ಇದರಿಂದ ಸೇಬು, ಬಾದಾಮಿ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಬೆಳೆಯುವ ಭಾರತದ ರೈತರಿಗೆ ಭಾರಿ ಅನ್ಯಾಯವಾಗಲಿದೆ ಎಂದು ಜೈರಾಮ್ ಆರೋಪಿಸಿದ್ದಾರೆ.
ವ್ಯಾಪಾರ ಮಿಗುತೆ ನಾಶ
ಅಮೆರಿಕದಿಂದ ಆಮದು ಮಾಡಿಕೊಳ್ಳುವ ಪ್ರಮಾಣವು ಮೂರು ಪಟ್ಟು ಹೆಚ್ಚಾಗಲಿದೆ. ಇದುವರೆಗೆ ಭಾರತವು ಅಮೆರಿಕದೊಂದಿಗೆ ಹೊಂದಿದ್ದ ವ್ಯಾಪಾರ ಮಿಗುತೆಯನ್ನು ಈ ಒಪ್ಪಂದವು ಸಂಪೂರ್ಣವಾಗಿ ನಾಶಪಡಿಸಲಿದೆ ಎಂದು ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಅನಿಶ್ಚಿತತೆ ಮತ್ತು ವಿವರಗಳ ಕೊರತೆ
ಸರ್ಕಾರವು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಯಾವುದೇ ಸ್ಪಷ್ಟ ವಿವರಗಳಿಲ್ಲ. ಐಟಿ ವಲಯ ಮತ್ತು ಸೇವಾ ವಲಯದ ರಫ್ತಿನ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಭಾರತೀಯ ರಫ್ತುದಾರರು ಅಮೆರಿಕದಲ್ಲಿ ಈ ಹಿಂದಿಗಿಂತಲೂ ಹೆಚ್ಚಿನ ಸುಂಕವನ್ನು ಎದುರಿಸಬೇಕಾಗಬಹುದು ಎಂದು ಜೈರಾಮ್ ಎಚ್ಚರಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಸರ್ಕಾರದ ಸಮರ್ಥನೆ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಒಪ್ಪಂದವನ್ನು ಶ್ಲಾಘಿಸಿದ್ದಾರೆ. ಇದು ಭಾರತ ಮತ್ತು ಅಮೆರಿಕದ ಪಾಲಿಗೆ ಶುಭ ಸುದ್ದಿ ಆಗಿದೆ. ಈ ಒಪ್ಪಂದದಿಂದ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಹೆಚ್ಚಿನ ಶಕ್ತಿ ಸಿಗಲಿದೆ. ಸಣ್ಣ ಉದ್ಯಮಿಗಳು, ರೈತರು ಮತ್ತು ಮೀನುಗಾರರಿಗೆ 30 ಟ್ರಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಮಾರುಕಟ್ಟೆ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.
ಒಪ್ಪಂದದ ಪ್ರಮುಖ ಲಾಭಗಳು
1. ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿದ್ದ ಒಟ್ಟು ಸುಂಕವು 50% ರಿಂದ 18% ಕ್ಕೆ ಇಳಿಕೆಯಾಗಿದೆ.
2. ರಷ್ಯಾ ತೈಲ ಖರೀದಿಯ ಕಾರಣಕ್ಕೆ ಹೇರಲಾಗಿದ್ದ 25% ಹೆಚ್ಚುವರಿ ದಂಡನಾತ್ಮಕ ಸುಂಕವನ್ನು 3. ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಜವಳಿ, ಚರ್ಮೋದ್ಯಮ ಮತ್ತು ಕರಕುಶಲ ವಸ್ತುಗಳ ರಫ್ತುದಾರರಿಗೆ ಭಾರಿ ರಿಯಾಯಿತಿ ಸಿಗಲಿದೆ.
ಮುಂದೇನು..?
ಈ ಮಧ್ಯಂತರ ಒಪ್ಪಂದವು ಪೂರ್ಣ ಪ್ರಮಾಣದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (BTA) ಬುನಾದಿಯಾಗಿದೆ. ಭಾರತವು ಮುಂದಿನ 5 ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಇಂಧನ ಮತ್ತು ತಂತ್ರಜ್ಞಾನ ಉತ್ಪನ್ನಗಳನ್ನು ಖರೀದಿಸಲು ಉದ್ದೇಶಿಸಿದೆ. ಆದರೆ, ದೇಶೀಯ ರೈತರ ಹಿತಾಸಕ್ತಿಯನ್ನು ಬಲಿಗೊಟ್ಟು ಈ ಒಪ್ಪಂದ ಮಾಡಿಕೊಳ್ಳಲಾಗಿದೆಯೇ ಎಂಬ ವಿರೋಧ ಪಕ್ಷದ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ,(ಏಜೆನ್ಸೀಸ್).