ಬೆಂಗಳೂರು: ಬಾಲ್ಯದ ಗೆಳೆಯನ ಮೇಲಿನ ಅಂಧಾಭಿಮಾನವೊಂದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಜೀವನವನ್ನೇ ಅತಂತ್ರಗೊಳಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು, ಗೆಳೆಯನ ವಿದ್ಯಾಭ್ಯಾಸಕ್ಕಾಗಿ ತಾವೇ ಸಾಲ ಮಾಡಿ ಹಣ ನೀಡಿ, ಇದೀಗ ಉದ್ಯೋಗವನ್ನೂ ಕಳೆದುಕೊಂಡು, ಸಾಲದ ಸುಳಿಯಲ್ಲಿ ಸಿಲುಕಿ ಇಂಜಿನಿಯರ್ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಂಪೂರ್ಣವಾಗಿ ಕುಸಿದುಹೋಗಿದ್ದಾರೆ.
ಪ್ರತಿಷ್ಠಿತ ಪ್ರಾಡಕ್ಟ್ ಆಧಾರಿತ ಕಂಪನಿಯೊಂದರಲ್ಲಿ ವಾರ್ಷಿಕ 12 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದ ಇಂಜಿನಿಯರ್, ತಮ್ಮ ಬಾಲ್ಯದ ಗೆಳೆಯನಿಗೆ ನ್ಯೂಜಿಲೆಂಡ್‌ನಲ್ಲಿ ಮಾಸ್ಟರ್ಸ್ ಡಿಗ್ರಿ ಮಾಡಲು ಸಹಾಯ ಮಾಡಲು ನಿರ್ಧರಿಸಿದರು. ಗೆಳೆಯನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದ ಅವರು, ಕೇವಲ ಸ್ವಂತ ಉಳಿತಾಯವಲ್ಲದೆ, 5 ಲಕ್ಷ ರೂಪಾಯಿಗಳನ್ನು ವಿವಿಧ ಸಾಲದ ಅಪ್ಲಿಕೇಶನ್‌ಗಳು (Loan Apps) ಮತ್ತು ಎನ್‌ಬಿಎಫ್‌ಸಿಗಳಿಂದ (NBFCs) ಸಾಲವಾಗಿ ಪಡೆದು, ಒಟ್ಟು 8 ಲಕ್ಷ ರೂಪಾಯಿಗಳನ್ನು ಗೆಳೆಯನಿಗೆ ನೀಡಿದ್ದರು.
ಗೆಳೆಯ ನ್ಯೂಜಿಲೆಂಡ್‌ಗೆ ಹೋದ ಆರು ತಿಂಗಳವರೆಗೆ ಮಾತುಕತೆ ಸರಿಯಾಗಿಯೇ ಇತ್ತು. ಆದರೆ, ನಂತರ ಆತ ಸಂಪರ್ಕ ಕಡಿತಗೊಳಿಸಲು ಆರಂಭಿಸಿದ. ಕೊನೆಗೆ ಇಂಜಿನಿಯರ್‌ನ ಎಲ್ಲಾ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸಿ, ಗೆಳೆಯ ಸಂಪೂರ್ಣವಾಗಿ ನಾಪತ್ತೆಯಾಗಿದ್ದಾನೆ.
ಸಾಲದ ಸುಳಿಯಲ್ಲಿ ಇಂಜಿನಿಯರ್!
ಈ ದ್ರೋಹದ ನಡುವೆಯೇ, ಇಂಜಿನಿಯರ್‌ಗೆ ಇನ್ನೊಂದು ದೊಡ್ಡ ಆಘಾತ ಎದುರಾಯಿತು. ಅವರು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಕೆಲಸ ಕಳೆದುಕೊಂಡರು (Layoff). "ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರವಿದು. ಕಳೆದ ಮೂರು ತಿಂಗಳಿಂದ ಕೆಲಸವಿಲ್ಲ, ಸಾಲದ ಇಎಂಐ (EMI) ಕಟ್ಟಲು ಹಣವಿಲ್ಲ, ಕ್ರೆಡಿಟ್ ಕಾರ್ಡ್ ಬಿಲ್ ಹೆಚ್ಚಾಗುತ್ತಿದೆ. ಸಾಲ ವಸೂಲಾತಿ ಸಂಸ್ಥೆಗಳ ಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿದೆ, ನನ್ನ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ," ಎಂದು ಇಂಜಿನಿಯರ್ ರೆಡ್ಡಿಟ್ (Reddit) ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಕುಟುಂಬದ ನಂಬಿಕೆ ಕಳೆದುಕೊಂಡ ಇಂಜಿನಿಯರ್
ಕೇವಲ ಆರ್ಥಿಕ ನಷ್ಟವಲ್ಲದೆ, ಆ ಇಂಜಿನಿಯರ್ ತಮ್ಮ ಕುಟುಂಬದವರ ನಂಬಿಕೆಯನ್ನೂ ಕಳೆದುಕೊಂಡಿದ್ದಾರೆ. ಅವರ ಕುಟುಂಬಸ್ಥರು ಅವರನ್ನು 'ಬೇಜವಾಬ್ದಾರಿ' ವ್ಯಕ್ತಿ ಎಂದು ನೋಡುತ್ತಿದ್ದು, ಇಂಜಿನಿಯರ್ ಸಂಪೂರ್ಣವಾಗಿ ಮಾನಸಿಕವಾಗಿ ಅತಂತ್ರರಾಗಿದ್ದಾರೆ. "ನಾನು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನಾಶವಾಗಿದ್ದೇನೆ," ಎಂದು ಅವರು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಬಳಕೆದಾರರು ಬೇರೆ ಬೇರೆ ರೀತಿಯ ಸಲಹೆಗಳನ್ನು ನೀಡುತ್ತಿದ್ದಾರೆ. "ಒಬ್ಬ ವಕೀಲರ ಮೂಲಕ ಗೆಳೆಯನಿಗೆ ಲೀಗಲ್ ನೋಟಿಸ್ ಕಳುಹಿಸಿ. ಎಫ್‌ಐಆರ್ (FIR) ಹಾಕುವುದಾಗಿ ಎಚ್ಚರಿಸಿ," ಎಂದು ಕೆಲವರು ಸಲಹೆ ನೀಡಿದರೆ, ಇನ್ನೂ ಕೆಲವರು "ಗೆಳೆಯನ ಕುಟುಂಬಸ್ಥರ ಮೇಲೆ ಒತ್ತಡ ಹೇರಿ ಅಥವಾ ನ್ಯೂಜಿಲೆಂಡ್‌ನಲ್ಲಿರುವ ಆತನ ವಿಶ್ವವಿದ್ಯಾಲಯವನ್ನು ಹುಡುಕಿ" ಎಂದು ಹೇಳಿದ್ದಾರೆ. "ಮೊದಲು ನಿಮ್ಮ ಮೇಲಿರುವ ಅಪರಾಧ ಪ್ರಜ್ಞೆಯನ್ನು ಕಡಿಮೆ ಮಾಡಿಕೊಳ್ಳಿ, ನಿಮ್ಮನ್ನು ನೀವು ಕ್ಷಮಿಸಿ. ಕುಟುಂಬವನ್ನು ನಿಭಾಯಿಸಿ, ನಂತರ ಸಾಲ ತೀರಿಸುವ ಬಗ್ಗೆ ಯೋಚಿಸಿ," ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).