ನವದೆಹಲಿ: ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೇಳಿಕೆ ದಾಖಲಿಸಲು ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾಗೆ ದೆಹಲಿ ಪೊಲೀಸ್ ಅಪರಾಧ ವಿಭಾಗವು (ಕ್ರೈಮ್ ಬ್ರಾಂಚ್) ಸಮನ್ಸ್ ಜಾರಿ ಮಾಡಿದೆ.
ಪೊಲೀಸ್ ಮೂಲಗಳ ಪ್ರಕಾರ, ಸಿಜೆಪಿ ಸದಸ್ಯ ಅಜಿಂಕ್ಯ ಶಿಂಧೆ ಅವರಿಗೂ ಕೂಡ ಸಮನ್ಸ್ ನೀಡಲಾಗಿದ್ದು, ಸಾರ್ವಜನಿಕ ಸೇವಕರು ಹೊರಡಿಸಿದ ಆದೇಶಗಳನ್ನು ಉಲ್ಲಂಘಿಸಿರುವುದು ಹಾಗೂ ಅತಿಕ್ರಮ ಪ್ರವೇಶ ನಡೆಸಿರುವ ಆರೋಪಗಳ ಕುರಿತು ಈ ತನಿಖೆ ಮುಂದುವರಿದಿದೆ.
ರಾಜೌರಿ ಗಾರ್ಡನ್ನಲ್ಲಿರುವ ಕ್ರೈಮ್ ಬ್ರಾಂಚ್ ಕಚೇರಿಯಲ್ಲಿ ಇಂದು (ಗುರುವಾರ ಅ.22) ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾಗೆ ಸೂಚನೆ ನೀಡಲಾಗಿದೆ. ಒಂದು ವಾರಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಮಾರನೇ ದಿನವೇ ಈ ಸಮನ್ಸ್ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
ಅಕ್ಟೋಬರ್ 13 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ಕ್ರೈಮ್ ಬ್ರಾಂಚ್ಗೆ ವರ್ಗಾಯಿಸಿದ್ದರು. ಒಂದು ಪ್ರಕರಣವನ್ನು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದರೆ, ಮತ್ತೊಂದು ಪ್ರಕರಣವನ್ನು ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಸೌರವ್ ದಾಸ್, ಅಶುತೋಷ್ ರಾಂಕಾ ಹಾಗೂ ಇತರ ಸಿಜೆಪಿ ಸದಸ್ಯರು ನಿರ್ಬಂಧಿತ ಪ್ರತಿಭಟನಾ ಸ್ಥಳವಾಗಿರುವ ಜಂತರ್ ಮಂತರ್ ಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ್ದರು. ಈ ವೇಳೆ ಬ್ಯಾರಿಕೇಡ್ಗಳನ್ನು ದಾಟಿ ಖಾಸಗಿ ಸಂಸ್ಥೆಯೊಂದರ ಮೂಲಕ ಒಳನನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದಿದ್ದರು.
ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ, ಸಾರ್ವಜನಿಕ ಸೇವಕರ ಆದೇಶದ ಉಲ್ಲಂಘನೆ, ಮನೆ ಅತಿಕ್ರಮ ಪ್ರವೇಶ ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕ್ರಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಲಾಗಿದೆ. ಇತ್ತ ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡನೇ ಎಫ್ಐಆರ್, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ ಹಾಗೂ ಘಟನೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಗಾಯಗೊಳಿಸಿದ ಆರೋಪಗಳನ್ನು ಒಳಗೊಂಡಿದೆ.
ಈ ಎರಡು ಪ್ರಕರಣಗಳನ್ನು ವಿಶೇಷ ತನಿಖಾ ಘಟಕಕ್ಕೆ ವರ್ಗಾಯಿಸಿರುವುದು ಪ್ರತಿಭಟನೆಯ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ನವದೆಹಲಿ ನ್ಯಾಯಾಲಯದ ಆದೇಶದ ಮೇರೆಗೆ, ಕಾಕ್ರೋಚ್ ಜನತಾ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸಾರ್ವಜನಿಕ ಶಾಂತಿ ಕಾಪಾಡುವ ಹಾಗೂ ಕಾನೂನನ್ನು ಗೌರವಿಸುವ ಕುರಿತು ಲಿಖಿತ ಭರವಸೆ ನೀಡಿ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇವರ 7 ದಿನಗಳ ನ್ಯಾಯಾಂಗ ಬಂಧನದ ಅವಧಿ ಅಧಿಕೃತವಾಗಿ ಅಂತ್ಯಗೊಂಡಿದೆ.
ಜೈಲು ಸಂಖ್ಯೆ 4ರಲ್ಲಿ ಅಶುತೋಷ್ ರಾಂಕಾ ಹಾಗೂ ಜೈಲು ಸಂಖ್ಯೆ 2ರಲ್ಲಿ ಸೌರವ್ ದಾಸ್ ಅವರನ್ನು ಬಂಧನದಲ್ಲಿಡಲಾಗಿತ್ತು. ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಪೊಲೀಸರ ಮೂರು ದಿನಗಳ ಹೆಚ್ಚುವರಿ ಬಂಧನದ ಕೋರಿಕೆಯನ್ನು ತಿರಸ್ಕರಿಸಿ, ತಲಾ 50,000 ರೂ.ಗಳ ವೈಯಕ್ತಿಕ ಹಾಗೂ ಶ್ಯೂರಿಟಿ ಬಾಂಡ್ಗಳ ಮೇಲೆ ಬಿಡುಗಡೆಗೆ ಆದೇಶಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಮುನ್ನ ಅಕ್ಟೋಬರ್ 10 ರಂದು ಸೌರವ್ ದಾಸ್, ಅಶುತೋಷ್ ರಾಂಕಾ ಹಾಗೂ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಒಂದು ವರ್ಷದವರೆಗೆ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ, ಅಕ್ಟೋಬರ್ 13 ರಂದು ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಪ್ರತಿಭಟನಾ ಸ್ಥಳವಾಗಿ ರದ್ದುಪಡಿಸಲಾಗಿದ್ದ ಜಂತರ್ ಮಂತರ್ನ ಲಾಕ್ ಮಾಡಲಿದ್ದ ಗೇಟ್ ಅನ್ನು ಹತ್ತಿ ಒಳನುಗ್ಗಲು ಯತ್ನಿಸಿದರು. ರಾಷ್ಟ್ರಧ್ವಜ ಹಾರಿಸಿ ಘೋಷಣೆ ಕೂಗಿದ ಇವರನ್ನು ಮತ್ತೆ ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅಕ್ಟೋಬರ್ 19 ರಂದು ಇವರ ಬಂಧನಾವಧಿಯನ್ನು ಅಕ್ಟೋಬರ್ 21 ರವರೆಗೆ ವಿಸ್ತರಿಸಲಾಗಿತ್ತು.
ಬಂಧನ ವಿಸ್ತರಣೆಯನ್ನು ವಿರೋಧಿಸಿ ಮಂಗಳವಾರ ತಡರಾತ್ರಿಯೇ ತುರ್ತು ವಿಚಾರಣೆ ಕೋರಿ ಸಿಜೆಪಿ ನಾಯಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೌರವ್ ಮತ್ತು ಅಶುತೋಷ್ ಕೇವಲ ರಾಜಕೀಯ ಕಾರಣಗಳಿಗಾಗಿ ಜೈಲಿನಲ್ಲಿ ಕಾಲ ಕಳೆಯುವಂತಾಗಬಾರದು ಎಂದು ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನ ಸಿಂಗ್ ಎಕ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ನ್ಯಾಯಾಲಯದ ಸೂಚನೆಯಂತೆ ರಾಂಕಾ ಮತ್ತು ದಾಸ್ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ(ಏಜೆನ್ಸೀಸ್).