Shiv Sena Crisis | ಉದ್ಧವ್ ಠಾಕ್ರೆಗೆ ಮತ್ತೊಂದು ಬಿಗ್ ಶಾಕ್..? 
ದೇಶ

ಉದ್ಧವ್ ಠಾಕ್ರೆಗೆ ಮತ್ತೊಂದು ಬಿಗ್ ಶಾಕ್..? ಡಿಸಿಎಂ ಏಕನಾಥ್ ಶಿಂಧೆ ಪಾಳಯದತ್ತ 7 ಸಂಸದರ ಚಿತ್ತ! | Shiv Sena Crisis

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ದೊಡ್ಡ ಮಟ್ಟದ ಪಕ್ಷಾಂತರದ ಸುಳಿವು ಸಿಕ್ಕಿದ್ದು, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಬಿಗ್ ಶಾಕ್ ನೀಡಲು ಏಕನಾಥ್​ ಶಿಂಧೆ ಪಾಳಯ ಸ್ಕೆಚ್ ಹಾಕಿದೆ ಎಂದು ವರದಿಯಾಗಿದೆ. ಉದ್ಧವ್ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ 7 ಸಂಸದರು ಸದ್ಯದಲ್ಲೇ ಉಪಮುಖ್ಯಮಂತ್ರಿ ಶಿಂಧೆ ನೇತೃತ್ವದ ಶಿವಸೇನಾ ಪಕ್ಷವನ್ನು ಸೇರಲಿದ್ದಾರೆ ಎಂಬ ಚರ್ಚೆಗಳು ದೆಹಲಿ ಮತ್ತು ಮುಂಬೈ ರಾಜಕೀಯ ವಲಯದಲ್ಲಿ ಜೋರಾಗಿವೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಶುರುವಾಯ್ತು ಆಟ!

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಶಿಂಧೆ ಬಣವು ಠಾಕ್ರೆ ಪಾಳಯದ ಒಬ್ಬ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದರೆ, ಇನ್ನುಳಿದವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡುವುದಾಗಿ ಆಮಿಷ ಒಡ್ಡಿದೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಏಕನಾಥ್ ಶಿಂಧೆ ಮತ್ತು ಅವರ ಪುತ್ರ, ಲೋಕಸಭಾ ಸಂಸದ ಡಾ. ಶ್ರೀಕಾಂತ್ ಶಿಂಧೆ, ಕಳೆದ ಆರು ತಿಂಗಳಿನಿಂದ ಉದ್ಧವ್ ಬಣದ ಹಲವು ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಅವಧಿಯಲ್ಲಿ ದೆಹಲಿಯಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಅವರ ದೆಹಲಿ ನಿವಾಸದಲ್ಲಿ ನಡೆದ ಸಭೆಗಳಲ್ಲೂ ಠಾಕ್ರೆ ಪಾಳಯದ ಸಂಸದರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಶಿವಸೇನಾ (UBT) ಹೊಂದಿರುವ ಒಂಬತ್ತು ಲೋಕಸಭಾ ಸಂಸದರ ಪೈಕಿ, ಮುಂಬೈನ ಇಬ್ಬರು ಸಂಸದರನ್ನು ಹೊರತುಪಡಿಸಿ ಉಳಿದ ಏಳು ಸಂಸದರು ಶಿಂಧೆ ಬಣದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.
ಇದೇ ವೇಳೆ, ಏಕನಾಥ್ ಶಿಂಧೆ ಅವರು ದೆಹಲಿ ಪ್ರವಾಸದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಯುಬಿಟಿ ಸಂಸದರ ಈ ಪಕ್ಷಾಂತರದ ಸುದ್ದಿಯ ಕುರಿತು ಉಭಯ ನಾಯಕರ ನಡುವೆ ಚರ್ಚೆ ನಡೆದಿರುವ ಸಾಧ್ಯತೆಯಿದೆ. ಮತ್ತೊಂದೆಡೆ, ಮುಂಬರುವ ತಿಂಗಳುಗಳಲ್ಲಿ ಕೇಂದ್ರ ಸಂಪುಟ ವಿಸ್ತರಣೆಯಾದರೆ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯೂ ದಟ್ಟವಾಗಿದೆ.

ಸದ್ಯದ ಶಿವಸೇನಾ (UBT) ಲೋಕಸಭಾ ಸಂಸದರ ಪಟ್ಟಿ

  1. ಅರವಿಂದ್ ಸಾವಂತ್ (ಮುಂಬೈ ದಕ್ಷಿಣ)
  2.  ಸಂಜಯ್ ದೇಶ್‌ಮುಖ್ (ಯವತ್ಮಾಲ್-ವಾಶಿಮ್)
  3.  ನಾಗೇಶ್ ಪಾಟೀಲ್ ಅಷ್ಟಿಕರ್ (ಹಿಂಗೋಲಿ) 
  4. ಸಂಜಯ್ ಹರಿಭಾವು ಜಾಧವ್ (ಪರಭಣಿ) 
  5. ರಾಜಾಭಾವು ವಾಜೆ (ನಾಸಿಕ್) 
  6. ಸಂಜಯ್ ದಿನಾ ಪಾಟೀಲ್ (ಮುಂಬೈ ಈಶಾನ್ಯ) 
  7. ಭೌಸಾಹೇಬ್ ವಾಕಚೌರೆ (ಶಿರಡಿ) 
  8. ಅನಿಲ್ ದೇಸಾಯಿ (ಮುಂಬೈ ದಕ್ಷಿಣ ಕೇಂದ್ರ)
  9.  ಓಂಪ್ರಕಾಶ್ ರಾಜೇನಿಂಬಾಳ್ಕರ್ (ಉಸ್ಮಾನಾಬಾದ್/ಧಾರಾಶಿವ್)
ಈ ವರದಿಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದರೂ, ಉದ್ಧವ್ ಠಾಕ್ರೆ ಬಣ ಅಥವಾ ಏಕನಾಥ್ ಶಿಂಧೆ ಬಣದಿಂದ ಈವರೆಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ(ಏಜೆನ್ಸೀಸ್​).