ನವದೆಹಲಿ: ನೀಟ್ ಪರೀಕ್ಷೆ ಅಕ್ರಮ ಹೊಣೆಗಾರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಪ್ರತಿಭಟನಾಕಾರರಿಗೆ ಉಚಿತ ಊಟ ಪೂರೈಕೆ ಮಾಡ್ತಿರುವ(Free food supply) ಹೋಟೆಲ್ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ದೆಹಲಿ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ವರದಿ ಮಾಡಿರುವ ಇಂಗ್ಲೀಷ್ ದಿನಪತ್ರಿಕೆಯೊಂದು, ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಬಿಸಾಡಲಾದ ಆಹಾರ ಪ್ಯಾಕೇಜಿಂಗ್‌ಗಳನ್ನು ಬಳಸಿಕೊಂಡು ದೆಹಲಿ ಪೊಲೀಸರು ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳನ್ನು ಪತ್ತೆಹಚ್ಚುತ್ತಿದ್ದಾರೆ. ಉಚಿತ ಆಹಾರವನ್ನು ಪೂರೈಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದೆ.
ವರದಿಯಲ್ಲಿ ಹಲವಾರು ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಈ ಕುರಿತು ಮಾಹಿತಿ ನೀಡಿದ್ದು, ದೆಹಲಿ ಪೊಲೀಸ್ ಅಧಿಕಾರಿಗಳು ತಮ್ಮನ್ನು ಭೇಟಿ ಮಾಡಿ ಕಳೆದ ಕೆಲವು ದಿನಗಳಿಂದ ಮಾಡಿದ ಆರ್ಡರ್‌ಗಳ ದಾಖಲೆಗಳನ್ನು ಮತ್ತು ಮಾಡಿದ ವಿತರಣೆಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವು ತಿನಿಸುಗಳು ಬೃಹತ್ ವಿತರಣೆಗಳು ಮತ್ತು ಔಟ್‌ಲೆಟ್‌ಗಳು ಉಚಿತವಾಗಿ ಕಳುಹಿಸಿದ ಆಹಾರ ಸೇರಿದಂತೆ ಪಾವತಿಸಿದ ಆರ್ಡರ್‌ಗಳ ಪುರಾವೆಗಳನ್ನು ಒದಗಿಸುವಂತೆ ಕೇಳಿದ್ದಾರೆ. ಮತ್ತು ಅದಕ್ಕೆ ಸಂಬಂಧಿಸಿದಂತೆ ಕೆಲವು ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳ ಮಾಲೀಕರು ತಮ್ಮನ್ನು ಪೊಲೀಸ್ ಠಾಣೆಗಳಿಗೆ ಕರೆಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಕೇಂದ್ರ ಸರ್ಕಾರದೊಂದಿಗಿನ ಮೂರನೇ ಸುತ್ತಿನ ಮಾತುಕತೆಗೂ ಮುನ್ನ ತನ್ನ ನಿಲುವನ್ನು ಮತ್ತಷ್ಟು ಗಟ್ಟಿಸಿರುವ ಸಿಜೆಪಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೇ ಮಾತುಕತೆಗೆ ಅರ್ಥವಿಲ್ಲ ಎಂದು ಹೇಳಿದೆ (ಏಜೆನ್ಸೀಸ್).